ಭಾನುವಾರ, ಆಗಸ್ಟ್ 14, 2022
21 °C
ರೈತ ಸಂಘ, ರಾಜಕೀಯ ಪಕ್ಷಗಳ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗಿ

ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಕೇಂದ್ರದ ಮೂರು ಕೃಷಿ ತಿದ್ದುಪಡಿ ಕಾಯ್ದೆಗಳನ್ನು ವಿರೋಧಿಸಿ ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಭಾರತ ಬಂದ್‍ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ರೈತಪರ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಆಯಾ ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಕಾರ್ಯಕರ್ತರು ತಮ್ಮ ಸಂಘಟನೆ ಹಾಗೂ ಪಕ್ಷಗಳ ಧ್ವಜ ಹಿಡಿದು ಡಾ.ಬಿ.ಆರ್.ಅಂಬೇಡ್ಕರ್‌ ವೃತ್ತದಲ್ಲಿ ಜಮಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಮೆರವಣಿಗೆ ಆರಂಭಿಸಿ ಭಗತ್‌ಸಿಂಗ್ ವೃತ್ತ, ಶಿವಾಜಿ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದರು.

‘ಕೇಂದ್ರ ಸರ್ಕಾರ ಲಾಕ್ ಡೌನ್ ಅವಧಿಯಲ್ಲಿ ಮಸೂದೆಗಳನ್ನು ಮಂಡಿಸಿ ರೈತರಿಗೆ ಮಾರಕವಾದ ಕಾಯ್ದೆಗಳನ್ನು ಜಾರಿಗೆ ತರಲು ಹೊರಟಿದೆ. ರೈತರ ಪಾಲಿಗೆ ಮರಣಶಾಸನವಾಗಲಿರುವ ಮಸೂದೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು’ ಎಂದು ಕಾರ್ಮಿಕ ಸಂಘಟನೆಗಳ ಮುಖಂಡ ಬಾಬುರಾವ್ ಹೊನ್ನಾ ಆಗ್ರಹಿಸಿದರು.

ಬೀದರ್ ಜಿಲ್ಲಾ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಶ್ರೀಕಾಂತ ಸ್ವಾಮಿ, ವೆಲ್‌ಫೇರ್ ಪಾರ್ಟಿ ಆಫ್‌ ಇಂಡಿಯಾದ ಮುಖಂಡ ಮುಬಾಶಿರ್‌ ಸಿಂದೆ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಅಮೃತರಾವ್‌ ಚಿಮಕೋಡೆ, ಶ್ರೀಮಂತ ಬಿರಾದಾರ್, ದಯಾನಂದ ಸ್ವಾಮಿ, ನಜೀರ್‌ ಅಹಮ್ಮದ್, ಶಫಾಯತ್‌ ಅಲಿ, ಅಬ್ದುಲ್‌ ಖಾದರ್, ಆರ್‌.ಪಿ.ರಾಜಾ, ಪುಷ್ಪರಾಜ್‌ ಮೇತ್ರೆ, ನಾಗಯ್ಯ ಹಿರೇಮಠ, ಕಾಂಗ್ರೆಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ, ಕಾರ್ಯದರ್ಶಿ ಪರ್ವೇಜ್‌ ಕಮಲ್, ಜೆಡಿಎಸ್‌ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಅಶೋಕ ಕೊಡಗೆ, ವಹಿದ್ ಲಖನ್, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಅಖಿಲ ಭಾರತ ಕಿಸಾನ್‌ ಸಭಾ, ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್ ಆರ್ಗನೈಸೇಶನ್‌ ಜಿಲ್ಲಾ ಘಟಕ, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾ ಹಾಗೂ ಎಐಟಿಯುಸಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಬಂದ್‌ ಇಲ್ಲ, ಪ್ರತಿಭಟನೆ ಮಾತ್ರ: ಲಾಕ್‌ಡೌನ್‌ ಅವಧಿಯಲ್ಲಿ ವ್ಯಾಪಾರಿಗಳು, ಸಂಘ ಸಂಸ್ಥೆಗಳು ನಷ್ಟ ಅನುಭವಿಸಿರುವ ಕಾರಣ ರೈತರು ಬಂದ್‌ ಮಾಡಲಿಲ್ಲ. ಶಾಂತಿಯುತವಾಗಿ ಮೆರವಣಿಗೆ ನಡೆಸಿ ಪ್ರಧಾನಮಂತ್ರಿ ಅವರಿಗೆ ಬರೆದ ಮನವಿಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ರುದ್ರೇಶ ಘಾಳಿ ಅವರಿಗೆ ಸಲ್ಲಿಸಿದರು.

ಎರಡು ತಾಸಿನ ಅವಧಿಯಲ್ಲಿ ಪ್ರತಿಭಟನೆ ಮುಗಿಯಿತು. ಜಿಲ್ಲೆಯ ಪ್ರಭಾವಿ ಹಾಗೂ ಹಿರಿಯ ಮುಖಂಡರು ಮೆರವಣಿಗೆಯಲ್ಲಿ ಕಾಣಿಸಿಕೊಳ್ಳಲಿಲ್ಲ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಬೆರಳೆಣಿಕೆ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಬಂದ್‌ಗೂ ತಮಗೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಕೆಲ ರೈತರು ತಮ್ಮ ಹೊಲದಲ್ಲಿ ಬೆಳೆದಿದ್ದ ತರಕಾರಿಯನ್ನು ಬೀದರ್‌ನ ಹೊರವಲಯದಲ್ಲಿರುವ ತರಕಾರಿ ಸಗಟು ಮಾರುಕಟ್ಟೆಗೆ ತಂದು ಮಾರಾಟ ಮಾಡಿದರು. ಮಾರುಕಟ್ಟೆಯಲ್ಲಿ ಎಂದಿನಂತೆ ವಹಿವಾಟು ಕಂಡು ಬಂದಿತು.

ಡಿವೈಎಸ್‌ಪಿ ಬಸವೇಶ್ವರ ಹೀರಾ ನೇತೃತ್ವದಲ್ಲಿ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಅಂಬೇಡ್ಕರ್ ವೃತ್ತ, ಬಸವೇಶ್ವರ ವೃತ್ತ ಹಾಗೂ ಶಿವಾಜಿ ವೃತ್ತದ ಬಳಿ ಕೆಎಸ್‌ಆರ್‌ಪಿ, ಜಿಲ್ಲಾ ಸಶಸ್ತ್ರಪಡೆಯ ತುಕ್ಕಡಿ ಹಾಗೂ ನಾಗರಿಕ ಪೊಲೀಸರನ್ನು ನಿಯೋಜಿಸಲಾಗಿತ್ತು. ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಜಲಫಿರಂಗಿ ಬಳಸಲು ಅಗ್ನಿಶಾಮಕದಳದ ವಾಹನ ನಿಲ್ಲಿಸಲಾಗಿತ್ತು.

ಮುಖ್ಯಾಂಶಗಳು

ಬೀದರ್‌ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್

ಪ್ರತಿಭಟನೆಯಲ್ಲಿ ಕಾಣಿಸಿಕೊಳ್ಳದ ರಾಜಕೀಯ ಪಕ್ಷಗಳ ನಾಯಕರು

ನಗರದಲ್ಲಿ ಸಹಜ ಸ್ಥಿತಿಯಲ್ಲಿ ಜನ ಜೀವನ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು