ಶನಿವಾರ, ಆಗಸ್ಟ್ 13, 2022
27 °C
ಅಬಕಾರಿ ಇಲಾಖೆಯ ಉಪ ಆಯುಕ್ತ ಮಂಜುನಾಥ ಎನ್ ಹೇಳಿಕೆ

ಮಾದಕ ವಸ್ತು ಸಾಗಣೆ, ಸೇವನೆ ತಡೆಗೆ ಸಾರ್ವಜನಿಕರ ಸಹಕಾರ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಮಾದಕ ವಸ್ತುಗಳ ಸೇವನೆ ಮತ್ತು ಸಾಗಣೆಯನ್ನು ಕೇವಲ ಕಾನೂನಿನ ಮೂಲಕ ತಡೆಯಲು ಸಾಧ್ಯವಿಲ್ಲ. ಇದರ ಕಡಿವಾಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ. ಇದಕ್ಕಾಗಿ ಯುವಕರಲ್ಲಿ ಜಾಗೃತಿ ಮೂಡಬೇಕು ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತ ಮಂಜುನಾಥ ಎನ್ ಹೇಳಿದರು.

ನಗರದ ಅಬಕಾರಿ ಇಲಾಖೆ ಕಚೇರಿ ಆವರಣದಲ್ಲಿ ಭಾನುವಾರ ಅಂತರ ರಾಷ್ಟ್ರೀಯ ಮಾದಕ ವಸ್ತು ಸಾಗಣೆ ವಿರೋಧಿ ದಿನಾಚರಣೆ ಪ್ರಯುಕ್ತ ಮಾದಕ ವಸ್ತುಗಳ ಸೇವನೆಯಿಂದಾಗುವ ದುಷ್ಪರಿಣಾಮ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಮಾದಕ ವಸ್ತು ಸೇವನೆಯಿಂದ ವಿಶ್ವದಲ್ಲಿ ಪ್ರತಿ ವರ್ಷ ಲಕ್ಷಾಂತರ ಜನ ಜೀವ ಕಳೆದುಕೊಳ್ಳುತ್ತಿದ್ದಾರೆ.

ಒಮ್ಮೆ ಈ ಚಟಕ್ಕೆ ಅಂಟಿಕೊಂಡರೆ ಹೊರಬರುವುದು ಕಷ್ಟ. ದುಶ್ಚಟಕ್ಕೆ ಬಲಿಯಾಗುವ ಮುನ್ನವೇ ಎಚ್ಚೆತ್ತುಕೊಳ್ಳುವುದು ಒಳ್ಳೆಯದು ಎಂದು ಸಲಹೆ ನೀಡಿದರು.

ಪ್ರಮುಖ ಮಾದಕ ವಸ್ತುಗಳು ದೇಶದ ಶಾಂತಿ ಮತ್ತು ಸುರಕ್ಷತೆಗೆ ಧಕ್ಕೆ ತರುವ ಮಟ್ಟಕ್ಕೆ ಬೆಳೆದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಇದು ವ್ಯಕ್ತಿಯ ಘನತೆಗೆ ಮಸಿ ಬಳಿಯುತ್ತದೆ. ಕುಟುಂಬದ ನೆಮ್ಮದಿಯನ್ನೂ ಹಾಳು ಮಾಡುತ್ತದೆ ಎಂದು ಎಚ್ಚರಿಸಿದರು.

ಯುವ ಶಕ್ತಿಯನ್ನು ಉಳಿಸಿಕೊಳ್ಳಲು ಹಾಗೂ ಸದೃಢ ರಾಷ್ಟ್ರ ನಿರ್ಮಾಣಕ್ಕಾಗಿ ಯುವಕರು ಪ್ರಮುಖ ಮಾದಕ ವಸ್ತುಗಳ ಸೇವನೆಯಿಂಧ ದೂರ ಇರಬೇಕು ಎಂದು ಮನವಿ ಮಾಡಿದರು.

 

ಜಾಗೃತಿ ಜಾಥಾ:

ಅಬಕಾರಿ ಭವನದಿಂದ ಆರಂಭವಾದ ಜಾಗೃತಿ ಜಾಥಾವು ಜನವಾಡ ರಸ್ತೆ, ಮಡಿವಾಳ ವೃತ್ತ, ರೋಟರಿ ವೃತ್ತ, ಹರಳಯ್ಯ ವೃತ್ತ, ರೈಲ್ವೆ ನಿಲ್ದಾಣ, ಛತ್ರಪತಿ ಶಿವಾಜಿ ಮಹಾರಾಜ ವೃತ್ತ, .ಬಿ.ಆರ್.ಅಂಬೇಡ್ಕರ್‌ ವೃತ್ತ ಮಾರ್ಗವಾಗಿ ಮರಳಿ ಅಬಕಾರಿ ಇಲಾಖೆ ಕಚೇರಿ ಆವರಣಕ್ಕೆ ಬಂದು ಮುಕ್ತಾಯಗೊಂಡಿತು.

ಅಬಕಾರಿ ಡಿವೈಎಸ್‌ಪಿ ಆನಂದ ಉಕ್ಕಲಿ, ಇನ್‌ಸ್ಪೆಕ್ಟರ್‌ಗಳಾದ ರವೀಂದ್ರ ಪಾಟೀಲ, ಸತ್ಯನಾರಾಯಣದ ತ್ರಿವೇದಿ, ಸುರೇಶ ಶಂಕರ, ರಾಜಶೇಖರ, ಅನಿಲರಾಜ, ನಿಂಗನಗೌಡ, ನಾನಾಗೌಡ, ದೌಲತರಾಯಾ, ದೇವಿದಾಸ ಭೋಸಲೆ, ಸಬ್‌ ಇನ್‌ಸ್ಪೆಕ್ಟರ್‌ಗಳಾದ ದಿಲೀಪಸಿಂಗ್ ಠಾಕೂರ್, ರಮಾ, ಬಾಬು ಚಂದ್ರಯ್ಯ, ಚಂದ್ರಕಾಂತ, ಯುನೂಸು, ಕಾನ್‌ಸ್ಟೆಬಲ್‌ಗಳು, ವೆಲಮೆಗ್ನಾ ನರ್ಸಿಂಗ್‌ ಕಾಲೇಜು ವಿದ್ಯಾರ್ಥಿಗಳು, ಎನ್‌ಸಿಸಿ ಕೆಡೆಟ್‌ಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.