ಶನಿವಾರ, ಜುಲೈ 2, 2022
22 °C
ಕೋಳಿ ಹಾರಿ ಬಂದರೂ ವಿಚಲಿತಗೊಳ್ಳದ ಅಶೋಕ

ತಾಂಡಾದಲ್ಲಿ ಉಪಾಹಾರ ಸೇವಿಸಿದ ಆರ್‌. ಅಶೋಕ ಮತ್ತು ಪ್ರಭು ಚವಾಣ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ’ ಪ್ರಯುಕ್ತ ಔರಾದ್‌ ತಾಲ್ಲೂಕಿನ ವಡಗಾಂವ(ಡಿ) ಗ್ರಾಮದ ವಿದ್ಯಾರ್ಥಿ ವಸತಿ ನಿಲಯದಲ್ಲಿ ವಾಸ್ತವ್ಯ ಮಾಡಿದ್ದ ಕಂದಾಯ ಸಚಿವ ಆರ್‌. ಅಶೋಕ ಹಾಗೂ ಪಶು ಸಂಗೋಪನೆ ಸಚಿವ ಪ್ರಭು ಚವಾಣ್‌ ಅವರು ಶನಿವಾರ ಬೆಳಿಗ್ಗೆ ಬೀಬಾನಾಯ್ಕ ತಾಂಡಾದ ಶಿವಾಜಿ ಜಾಧವ ಅವರ ಗುಡಿಸಲಿಗೆ ತೆರಳಿ ಉಪಾಹಾರ ಸೇವಿಸಿದರು.

ಶಿವಾಜಿ ಜಾಧವ ಕುಟುಂಬದವರು ತಮ್ಮ ಗುಡಿಸಲಲ್ಲೇ ತಯಾರಿಸಿದ್ದ ಸುಸಲಾ(ಅವಲಕ್ಕಿ), ಬೇಳೆಕಾಳು ಪಲ್ಯ, ಮೊಸರು ಹಾಗೂ ಚಪಾತಿ ಸೇವಿಸಿದರು. ರುಚಿಕಟ್ಟಾಗಿ ಮಾಡಲಾಗಿದ್ದ ಸುಸಲಾ ಮತ್ತೆ ಕೇಳಿ ಪಡೆದರು. ತಗಡಿನ ಶೆಡ್‌ ಹಾಗೂ ತೊಗರಿ ಕಟ್ಟಿಗೆ ಚಾವಣಿ ಕೆಳಗೆ ಕುಳಿತು ಉಪಾಹಾರ ಸವಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೂ ಮನ ಬಿಚ್ಚಿ ಮಾತನಾಡಿದರು.

ರಾತ್ರಿ ಬಂದು ಬೆಳಗಾಗುವುದರಲ್ಲಿ ನಿರ್ಗಮಿಸಿ ಪ್ರಚಾರ ಪಡೆಯುವುದು ಗ್ರಾಮ ವಾಸ್ತವ್ಯ ಉದ್ದೇಶವಲ್ಲ. ತಾಂಡಾದಲ್ಲಿ ಉಪಾಹಾರ ಸೇವಿಸಿ ಗಿಮಿಕ್‌ ಮಾಡಿ ಫೋಟೊ ಕ್ಲಿಕ್ಕಿಸಿಕೊಂಡು ಪತ್ರಿಕೆಯಲ್ಲಿ ಹಾಕಿಸಿಕೊಳ್ಳಲು ಬಂದಿಲ್ಲ. ತಾಂಡಾದ ಸಮಸ್ಯೆ ಹತ್ತಿರದಿಂದ ತಿಳಿದುಕೊಳ್ಳಲು ಇಲ್ಲಿಗೆ ಬಂದಿದ್ದೇನೆ. ಪೂರ್ತಿ 24 ಗಂಟೆ ಗ್ರಾಮದಲ್ಲೇ ಉಳಿದು ಜನರ ಸಮಸ್ಯೆ ಆಲಿಸಿದ್ದೇನೆ ಎಂದರು.

ಶಿವಾಜಿ ಕುಟುಂಬದವರು ಪ್ರೀತಿಯಿಂದ ಅಡುಗೆ ಮಾಡಿ ಉಣ ಬಡಿಸಿದ್ದಾರೆ. ಅಷ್ಟೇ ನಿರ್ಮಲ ಮನಸ್ಸಿನಿಂದ ಆಹಾರ ಸೇವಿಸಿದ್ದೇನೆ. ಬೀಬಾನಾಯ್ಕ ತಾಂಡಾ ಗ್ರಾಮವನ್ನು ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಲು ಸ್ಥಳದಲ್ಲೇ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದೇನೆ ಎಂದು ತಿಳಿಸಿದರು.

ಉಪಾಹಾರ ಸೇವಿಸುತ್ತಿದ್ದ ಗುಡಿಸಲಲ್ಲಿ ಇದ್ದ ಕೋಳಿ ಸಚಿವರ ಮೇಲಿಂದ ಹಾರಿ ಹೋಯಿತು. ಅವರು ಒಂದಿಷ್ಟೂ ವಿಚಲಿತಗೊಳ್ಳದೆ ಸಾಮಾನ್ಯರಂತೆ ಉಪಾಹಾರ ಸೇವಿಸಿದರು. ಬಿಸಿಲಿನ ಝಳಕ್ಕೆ ಎಲ್ಲರೂ ತೊಯ್ದು ತೊಪ್ಪೆಯಾಗಿದ್ದರು.

ಇದಕ್ಕೂ ಮೊದಲು ಸಾಂಪ್ರದಾಯಿಕ ಪೋಷಾಕು ಹಾಕಿಕೊಂಡಿದ್ದ ತಾಂಡಾದ ಮಹಿಳೆಯರು ಮೆರವಣಿಗೆಯಲ್ಲಿ ಸಚಿವರನ್ನು ಸ್ವಾಗತಿಸಿ ಬರ ಮಾಡಿಕೊಂಡರು. ಜಾಧವ ಮನೆಯಂಗಳದಲ್ಲಿ ಅತಿಥಿಗಳಿಗೆ ಕುಳಿತುಕೊಳ್ಳಲು ಹೊರಸಿನ ವ್ಯವಸ್ಥೆ ಮಾಡಲಾಗಿತ್ತು. ದನದ ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ ಅದರೊಳಗೆ ಪ್ಲಾಸ್ಟಿಕ್‌ ಹಾಳೆಯನ್ನು ಹೊದಿಕೆಯಾಗಿ ಹಾಕಿ ಜನರಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು.

ಭಾರಿ ಸಂಖ್ಯೆಯಲ್ಲಿ ಸಮುದಾಯದವರು ಒಂದು ಕಡೆ ಸೇರಿದ್ದರಿಂದ ಜನ ದಟ್ಟಣೆ ಉಂಟಾಗಿತ್ತು. ಜನರನ್ನು ಆಚೆಗೆ ಕಳಿಸಿಕೊಡಲು ಪೊಲೀಸರು ಪ್ರಯಾಸ ಪಡಬೇಕಾಯಿತು. ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ, ಬಿಜೆಪಿ ಮುಖಂಡ ಸೂರ್ಯಕಾಂತ ನಾಗಮಾರಪಳ್ಳಿ, ವಡಗಾಂವದ ಶರಣಬಸಪ್ಪ ದೇಶಮುಖ, ಔರಾದ್‌ ತಾಲ್ಲೂಕಿನ ಅಧಿಕಾರಿಗಳು ಇದ್ದರು.

ವಡಗಾಂವದಲ್ಲಿ ಸಚಿವದ್ವಯರು ಬೆಳಿಗ್ಗೆ ಎದ್ದು ವಾಕ್‌ ಮಾಡಿದರು. ಕೆಲ ಹೊತ್ತು ಗ್ರಾಮದ ದೇವಸ್ಥಾನ ಕಟ್ಟೆಯ ಮೇಲೆ ಕುಳಿತು ಗ್ರಾಮಸ್ಥರ ಸಮಸ್ಯೆ ಆಲಿಸಿದರು. ಕೊರವ ಕುಟುಂಬದ ಮನೆಗೆ ತೆರಳಿ ಬೆಳಿಗ್ಗೆಯೇ ಬುಟ್ಟಿ ಹೆಣೆಯುವ ಕಾಯಕ ಆರಂಭಿಸಿದ್ದ ದಂಪತಿಯ ಕುಶಲೋಪರಿ ವಿಚಾರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು