ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕ ಮಳೆ: ಸಂಕಷ್ಟದಲ್ಲಿ ರೈತರು

ಹೊಲಗದ್ದೆಗಳಿಗೆ ನುಗ್ಗಿದ ನೀರು, ಅಪಾರ ಪ್ರಮಾಣದ ಬೆಳೆ ಹಾನಿ
Last Updated 2 ಸೆಪ್ಟೆಂಬರ್ 2021, 4:10 IST
ಅಕ್ಷರ ಗಾತ್ರ

ಖಟಕಚಿಂಚೋಳಿ: ಹೋಬಳಿಯಾದ್ಯಂತ ಸೋಮವಾರ ಬೆಳಗಿನ ಜಾವ ಸುರಿದ ಭಾರಿ ಮಳೆಯಿಂದ ಹೆಸರು, ಉದ್ದು, ಸೋಯಾ ಬೆಳೆಗಳು ಸಂಪೂರ್ಣವಾಗಿ ಜಲಾವೃತವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹೋಬಳಿಯ ನಾವದಗಿ, ದಾಡಗಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಕಟಾವಿಗೆ ಬಂದಿದ್ದ ಹೆಸರು ಬೆಳೆ ಜಲಾವೃತವಾಗಿದೆ. ಹಳ್ಳದ ಬದಿಯಿದ್ದ ಜಮೀನುಗಳಲ್ಲಿ ನೀರು ನುಗ್ಗಿ ಬೆಳೆಗಳು ಕೊಚ್ಚಿಕೊಂಡು ಹೋಗಿವೆ.

ನಾಲ್ಕು ಎಕರೆಯಲ್ಲಿ ಹುಲುಸಾಗಿ ಬೆಳೆದು ನಿಂತಿದ್ದ ಹೆಸರು ಬೆಳೆ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ಸಂಪೂರ್ಣವಾಗಿ ಹಾಳಾಗಿದೆ. ಇದರಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ ಎಂದು ನಾವದಗಿಯ ರೈತ ನಾಗನಾಥ ಬಿರಾದಾರ ಅವರು ನೋವು ತೋಡಿಕೊಂಡಿದ್ದಾರೆ.

‘ಪ್ರಸಕ್ತ ಸಾಲಿನಲ್ಲಿ ಮುಂಗಾರು ಮಳೆ ಸರಿಯಾದ ಸಮಯಕ್ಕೆ ಬಿದ್ದಿದೆ. ಆದರೆ, ಹಚ್ಚಹಸುರಾಗಿ ಬೆಳೆದು ಕಾಯಿ ಕಟ್ಟುವ ಸಮಯದಲ್ಲಿಯೂ ಮಳೆ ಕೈಕೊಟ್ಟಿತ್ತು. ಇದರಿಂದ ಇಳುವರಿಯಲ್ಲಿ ಕುಂಠಿತವಾಯಿತು. ಅಲ್ಪಸ್ವಲ್ಪವಾದರೂ ಆದಾಯ ಬಂದು ಸಮಸ್ಯೆ ಪರಿಹಾರ ಆಗಬಹುದು ಅನ್ನುವಷ್ಟರಲ್ಲಿ ಎಲ್ಲವೂ ತಲೆಕೆಳಗಾಗಿ ಹೋಯಿತು’ ಎಂದು ರೈತ ಧನರಾಜ ಮುತ್ತಂಗೆ ತಮ್ಮ ನೋವು ತೋಡಿಕೊಂಡರು.

‘ಈಗಾಗಲೇ ಕೊರೊನಾ ಹರಡುವಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಪ್ರಕೃತಿ ವಿಕೋಪದಿಂದ ಮತ್ತೆ ನಷ್ಟ ಅನುಭವಿಸುವಂತಾಗಿದೆ. ಬಿತ್ತನೆ ಸಮಯದಲ್ಲಿ ದುಬಾರಿ ಬೆಲೆಯಲ್ಲಿ ಬೀಜ, ರಸಗೊಬ್ಬರ ಖರೀದಿಸಿ ಬಿತ್ತನೆ ಮಾಡಲಾಗಿತ್ತು. ಬೆಳೆ ಬೆಳೆಯಲು ಮಾಡಿದ ಖರ್ಚು ವೆಚ್ಚವೂ ಈಗ ಕೈಗೆ ಬರದಂತಾಗಿದೆ. ಆದ್ದರಿಂದ ಸರ್ಕಾರ ವಿಳಂಬ ಮಾಡದೇ ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಪರಿಹಾರ ನೀಡಬೇಕು’ ಎಂದು ರೈತ ಮುಖಂಡ ನಿರ್ಮಲಕಾಂತ ಪಾಟೀಲ ಒತ್ತಾಯಿಸುತ್ತಾರೆ.

ರೈತರ ಹೊಲಗಳಲ್ಲಿ ಬೆಳೆಗಳು ಮಳೆ ನೀರಿನಲ್ಲಿ ಜಲಾವೃತವಾಗಿದ್ದು ಕಂಡುಬಂದಿದೆ. ತಗ್ಗು ಪ್ರದೇಶದ ಹೊಲಗಳಲ್ಲಿ ಬೆಳೆಯ ಮಧ್ಯೆ ಮಳೆ ನೀರು ವ್ಯಾಪಕವಾಗಿದ್ದು, ಮುಂಗಾರಿನ ಮಧ್ಯದಲ್ಲಿ ಮಳೆ ಇಲ್ಲದೆ ಬೆಳೆಗಳು ಹಾಳಾದರೆ ರಾಶಿ ಹಂತದಲ್ಲಿ ಬೆಳೆಗಳು ಅಧಿಕ ಮಳೆಯಿಂದ ಹಾಳಾಗಿವೆ.

ಸರ್ಕಾರ ಅತಿವೃಷ್ಟಿಯಿಂದ ಉಂಟಾದ ಹಾನಿ ಕುರಿತು ಸಮೀಕ್ಷೆ ನಡೆಸಿ, ರೈತರಿಗೆ ಪರಿಹಾರ ನೀಡಬೇಕು ಎಂದು ನೆಲವಾಳ ಗ್ರಾಮದ ರೈತರಾದ ರಾಜಕುಮಾರ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT