ಬುಧವಾರ, 17 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌ | ಮರೆಯಾದ ಮಳೆ; ಹೆಚ್ಚಿದ ರೈತರ ಚಿಂತೆ

ಬಿತ್ತನೆ ನಂತರ ಜಿಲ್ಲೆಯಲ್ಲಿ ಸುರಿಯದ ಮಳೆ; ಬಂಡವಾಳ ಹಾಕಿದ ರೈತರಿಗೆ ಆತಂಕ
Published 26 ಜೂನ್ 2024, 4:45 IST
Last Updated 26 ಜೂನ್ 2024, 4:45 IST
ಅಕ್ಷರ ಗಾತ್ರ

ಬೀದರ್‌: ಎರಡು ವಾರಗಳಿಂದ ಜಿಲ್ಲೆಯಲ್ಲಿ ಹೇಳಿಕೊಳ್ಳುವಂತಹ ಮಳೆಯಾಗದ ಕಾರಣ ಜಿಲ್ಲೆಯ ರೈತರ ಚಿಂತೆ ಹೆಚ್ಚಿಸಿದೆ.

ಕಳೆದ ಎರಡು ವಾರಗಳಿಂದ ಇಡೀ ಜಿಲ್ಲೆಯಲ್ಲಿ ಸಮೃದ್ಧವಾಗಿ ಮಳೆ ಸುರಿದಿಲ್ಲ. ಅಲ್ಲಲ್ಲಿ ಮೋಡ ಕಟ್ಟಿಕೊಂಡು ಆ ಪ್ರದೇಶಕ್ಕೆ ಸೀಮಿತವಾಗಿ ಸಾಧಾರಣ ವರ್ಷಧಾರೆ ಸುರಿಯುಗುತ್ತಿದೆ. ಅದು ಕೂಡ ಹೇಳಿಕೊಳ್ಳುವಂತಹ ಮಟ್ಟಕ್ಕೆ ಇಲ್ಲ. ಕೆಲವೆಡೆ ದಿನವಿಡೀ ಕಾರ್ಮೋಡ ಇದ್ದರೂ ಮಳೆ ಹನಿಗಳಾಗಿ ಧರೆಗೆ ಬೀಳುತ್ತಿಲ್ಲ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಎರಡು ವಾರ ಸಮರ್ಪಕ ಮಳೆಯಾಗದ ಕಾರಣ ಬಂಡವಾಳ ಹಾಕಿ ಬಿತ್ತನೆ ಮಾಡಿದ ರೈತರು ಚಿಂತಕ್ರಾಂತರಾಗಿದ್ದಾರೆ.

ಹೋದ ವರ್ಷ ಇಡೀ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ರೈತರಿಗೆ ಬರ ಪರಿಹಾರ ವಿತರಿಸುವ ಕಾರ್ಯ ಈಗಲೂ ನಡೆಯುತ್ತಿದೆ. ಹಳೆಯ ನೋವಿನಿಂದ ರೈತರು ಹೊರಬಂದಿಲ್ಲ. ಈ ಸಲವಾದರೂ ಉತ್ತಮ ಮುಂಗಾರಿನಿಂದ ಒಳ್ಳೆಯ ಫಸಲು ತೆಗೆಯಬಹುದು ಎಂದು ರೈತರು ಅಂದುಕೊಂಡಿದ್ದರು. ಆದರೆ, ನಿರೀಕ್ಷೆಗೆ ತಕ್ಕಂತೆ ಮಳೆಯಾಗದೇ ಇರುವುದು ಅವರ ನಿರಾಸೆಗೆ ಕಾರಣವಾಗಿದೆ.

ಈ ಸಲ ಸಕಾಲಕ್ಕೆ ಜಿಲ್ಲೆಗೆ ಮುಂಗಾರು ಆಗಮನವಾಗಿತ್ತು. ಸಂಭ್ರಮದಲ್ಲಿ ರೈತರು ಎಲ್ಲೆಡೆ ಬಿತ್ತನೆ ಕಾರ್ಯ ಕೈಗೊಂಡಿದ್ದರು. ಆದರೆ, ಎರಡು ವಾರಗಳು ಕಳೆದು ಮೂರನೇ ವಾರ ನಡೆಯುತ್ತಿದ್ದರೂ ಮಳೆಯ ಸುಳಿವಿಲ್ಲ.

ಜಿಲ್ಲೆಯ ಔರಾದ್‌, ಬೀದರ್‌ ಹಾಗೂ ಕಮಲನಗರದಲ್ಲಿ ಜೂನ್‌ ತಿಂಗಳಲ್ಲಿ ಕೊರತೆ ಮಳೆಯಾಗಿದೆ. ಬಸವಕಲ್ಯಾಣ, ಚಿಟಗುಪ್ಪ, ಭಾಲ್ಕಿ, ಹುಮನಾಬಾದ್‌ ಹಾಗೂ ಹುಲಸೂರು ತಾಲ್ಲೂಕಿನಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿದ್ದಿದೆ. ಆದರೆ, ಗಮನಿಸಬೇಕಾದ ವಿಷಯ ಏನೆಂದರೆ ಈ ಭಾಗದಲ್ಲೆಲ್ಲಾ ಜೂನ್‌ ಮೊದಲ ವಾರದಲ್ಲಷ್ಟೇ ಹೆಚ್ಚು ಮಳೆ ಸುರಿದಿದೆ. ಆನಂತರ ಈ ತಾಲ್ಲೂಕುಗಳಲ್ಲೂ ಮಳೆರಾಯ ಸುಳಿದಿಲ್ಲ.

‘ಹೋದ ವರ್ಷ ಮಳೆ ಕೈಕೊಟ್ಟಿದ್ದರಿಂದ ಇನ್ನೂ ಚೇತರಿಸಿಕೊಂಡಿಲ್ಲ. ಹಳೆಯ ಬ್ಯಾಂಕ್‌ ಸಾಲವೇ ತೀರಿಸಲು ಸಾಧ್ಯವಾಗಿಲ್ಲ. ಈ ಸಲ ಉತ್ತಮ ಮಳೆಯಾಗುತ್ತದೆ ಎಂಬ ಭರವಸೆಯಲ್ಲಿ ಕೈಸಾಲ ಪಡೆದು ಬಿತ್ತನೆ ಮಾಡಿದ್ದೇನೆ. ಎರಡು ವಾರಗಳಿಂದ ಮಳೆಯಾಗಿಲ್ಲ. ಏಕೋ ಚಿಂತೆಯಾಗುತ್ತಿದೆ. ಮುಂದಿನ ವಾರದೊಳಗೆ ಮಳೆಯಾಗದಿದ್ದರೆ ಬಿತ್ತನೆ ಮಾಡಿದ ಬೀಜಗಳು ಮೊಳಕೆಯಾಗಿ ಮೇಲೇಳುವುದಿಲ್ಲ’ ಎಂದು ಮನ್ನಳ್ಳಿಯ ರೈತ ಬಸವರಾಜ ತಿಳಿಸಿದರು.

‘ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಈ ವಾರ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನೊಂದು ವಾರದ ತನಕ ಮಳೆ ಆಗದಿದ್ದರೂ ರೈತರು ಆತಂಕ ಪಡಬೇಕಿಲ್ಲ. ಒಂದು ವಾರದ ನಂತರವೂ ಮಳೆಯಾಗದಿದ್ದರೆ ಬಿತ್ತನೆ ಮಾಡಿದವರಿಗೆ ಸಮಸ್ಯೆಯಾಗಲಿದೆ. ಬೆಳೆ ವಿಮೆ ಅಡಿ ಪರಿಹಾರ ಪಡೆಯಲು ಅವಕಾಶ ಇದೆ’ ಎಂದು ಜಂಟಿ ಕೃಷಿ ನಿರ್ದೇಶಕ ಡಾ. ರತೇಂದ್ರನಾಥ ಸುಗೂರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಸೋಯಾ ಬಿಟ್ಟರು ತೊಗರಿ ಹಿಡಿದರು

ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯ ರೈತರು ಸೋಯಾ ಅವರೆಯನ್ನೇ ಹೆಚ್ಚಾಗಿ ಬೆಳೆಯುತ್ತಿದ್ದರು. ಈ ಸಲ ಮನಸ್ಸು ಬದಲಿಸಿದ್ದಾರೆ. ಹೆಚ್ಚಿನ ರೈತರು ತೊಗರಿ ಬಿತ್ತನೆ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಸೋಯಾ ಅವರೆಗಿಂತ ತೊಗರಿಗೆ ಹೆಚ್ಚಿನ ಬೆಲೆ ಇದೆ. ಪ್ರತಿ ಕ್ವಿಂಟಲ್‌ ತೊಗರಿ ₹11ರಿಂದ ₹12 ಸಾವಿರಕ್ಕೆ ಮಾರಾಟವಾಗುತ್ತಿದೆ. ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ರೈತರು ತೊಗರಿಯತ್ತ ಮುಖ ಮಾಡಿದ್ದಾರೆ. 87451 ಹೆಕ್ಟೇರ್‌ ಪ್ರದೇಶದಲ್ಲಿ ರೈತರು ತೊಗರಿ ಬಿತ್ತನೆ ಮಾಡಿದ್ದಾರೆ.

ಈ ವಾರದಿಂದ ಮಳೆ ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಿತ್ತನೆ ಮಾಡಿದ ರೈತರು ಚಿಂತೆ ಪಡಬೇಕಿಲ್ಲ.
ಡಾ. ರತೇಂದ್ರನಾಥ ಸುಗೂರ, ಜಂಟಿ ಕೃಷಿ ನಿರ್ದೇಶಕ, ಬೀದರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT