ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಮನೆಗಳಿಗೆ ನುಗ್ಗಿದ ಮಳೆ ನೀರು

ಬಡವರ ಸಂಕಷ್ಟಕ್ಕೆ ಬೇಕಿದೆ ಜನಪ್ರತಿನಿಧಿ, ಅಧಿಕಾರಿಗಳ ಸ್ಪಂದನೆ
Last Updated 15 ಅಕ್ಟೋಬರ್ 2020, 6:05 IST
ಅಕ್ಷರ ಗಾತ್ರ

ಭಾಲ್ಕಿ: ರಾತ್ರಿಯಿಡೀ ಸುರಿದ ಒಣಕಿಧಾರಿ ಮಳಿಗಿ ಮನಿ ತುಂಬಾ ನೀರು ತುಂಬ್ಯಾವ. ಮನೆಯಲ್ಲಿ ಎಂಟು ದಿನದ ಬಾಣಂತಿ ಅದಾಳ. ತೊಟ್ಟಿಲು ಮ್ಯಾಲಕತ್‌ ಕಟ್ಟಿ ಕೂಸಿಗಿ ಮಲಗಿಸಿವಿ. ಬಾಣಂತಿ, ಮನಿ ಮಂದಿ ರಾತ್ರಿಯೆಲ್ಲಾ ಎಚ್ಚರಕಿ ಕೂಂತಿವಿ. ನಮ್ಮ ಕಷ್ಟಕ್ಕ ಆ ದೇವರು ಎಂದ ಶಾಶ್ವತ ಪರಿಹಾರ ಕೊಡ್ತಾನೋ ಏನೊ...

–ಇವು ತಾಲ್ಲೂಕಿನ ಹಲಬರ್ಗಾ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಪಕ್ಕದ ರಸ್ತೆಯಲ್ಲಿ ನೆಲೆಸಿರುವ ಒಂಬತ್ತು ಕೂಲಿ ಕಾರ್ಮಿಕರ ಕುಟುಂಬಗಳ ಸದಸ್ಯರ ನೋವಿನ ನುಡಿಗಳು.

ನೂತನ ರಾಷ್ಟ್ರೀಯ ಹೆದ್ದಾರಿ ರಸ್ತೆಯ ಕಾಮಗಾರಿಯಿಂದಾಗಿ ರಸ್ತೆಯ ಎತ್ತರ ಹೆಚ್ಚಾಗಿದೆ. ತಗ್ಗು ಪ್ರದೇಶದಲ್ಲಿ ಇರುವ ಜೋಪಡಿ ಮನೆಗಳಿಗೆ ಹಲಬರ್ಗಾ-ಕೋನಮೇಳಕುಂದಾ ರಸ್ತೆಯ ಎತ್ತರದ ಪ್ರದೇಶದಿಂದ ರಭಸವಾಗಿ ನೀರು ಹರಿದುಬರುತ್ತದೆ.

‘ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಇಲ್ಲದಿರುವುದರಿಂದ ಮನೆಗಳಿಗೆ ನೀರು ನುಗ್ಗುತ್ತಿವೆ. ಸೆಪ್ಟೆಂಬರ್‌ ತಿಂಗಳಿನಲ್ಲಿ ವಾರಪೂರ್ತಿ ಸುರಿದ ಭಾರಿ ಮಳೆಗೂ ಮನೆಗಳಲ್ಲಿ ನೀರು ತುಂಬಿದ್ದವು. ಆವಾಗ ಜೆಸಿಬಿಯಿಂದ ನೀರು ಹರಿದು ಹೋಗಲು ತಾತ್ಕಾಲಿಕವಾಗಿ ದಾರಿ ಮಾಡಿ ಕೊಟ್ಟಿದ್ದರು. ಕೆಲ ದಿನ ಗ್ರಾಮದ ಶಾಲೆಯಲ್ಲಿ ಉಳಿದುಕೊಂಡಿದ್ದೇವು. ಸಮಸ್ಯೆಗೆ ಸೂಕ್ತ ಪರಿಹಾರ ಸಿಗದೆ ಇರುವುದರಿಂದ ಮಂಗಳವಾರ ರಾತ್ರಿ ಸುರಿದ ಮಳೆ ನೀರು ಸಂಪೂರ್ಣವಾಗಿ ಮನೆಯನ್ನು ಆವರಿಸಿಕೊಂಡಿವೆ. ಒಲೆ ನೀರಿನಲ್ಲಿ ಮುಳುಗಿರುವುದರಿಂದ ರಾತ್ರಿ, ಬೆಳಿಗ್ಗೆ ಅಡುಗೆ ಮಾಡಿಲ್ಲ. ಮಕ್ಕಳು, ನಾವು ಉಪವಾಸ ಇದ್ದೀವಿ’ ಎಂದು ರಾಯಪ್ಪ, ಲಕ್ಷ್ಮಣ, ಅಮ್ಮವ, ಸುನಿತಾ ಅಳಲು ತೋಡಿಕೊಂಡರು.

ಸುಮಾರು ಏಳು ದಶಕಗಳಿಂದ ನಮ್ಮ ಹಿರಿಯರು ಇಲ್ಲೇ ನೆಲೆಸಿದ್ದರು. ಈಗ ನಾವೂ ಇಲ್ಲೇ ನೆಲೆಸಬೇಕು. ಕೂಲಿ-ನಾಲಿ ಮಾಡಿಕೊಂಡು ಸುಮಾರು 50 ವರ್ಷಗಳಿಂದ ನೆಲೆಸಿದ್ದೇವೆ. ನಮಗೆ ಮತದಾನದ ಹಕ್ಕೂ ಇದೆ. ಚುನಾವಣೆ ಬಂದಾಗ ನಮ್ಮ ಪಕ್ಷಕ್ಕೆ ಮತ ಹಾಕಿ ಎಂದು ರಾಜಕೀಯ ನಾಯಕರು ಹೇಳುತ್ತಾರೆ. ಆದರೆ, ಇಲ್ಲಿಯವರೆಗೆ ನಮಗೆ ಇರಲು ಸ್ವಂತ ಸೂರು ಕಲ್ಪಿಸಿಕೊಟ್ಟಿಲ್ಲ. ಕೇವಲ ಬಾಯಿ ಮಾತಿನಲ್ಲೇ ಬಡವರಿಗಾಗಿ ಅದು ಮಾಡಿದ್ದೇವೆ, ಇದು ಮಾಡಿದ್ದೇವೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಇರುವ ಜೋಪಡಿ ಮನೆಗಳಿಗೆ ನಳಗಳ ಸಂಪರ್ಕ ಸಹಿತ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಈ ಜನರು ನೆಲೆಸಿರುವ ಸ್ಥಳ ಪಿಡಬ್ಲ್ಯುಡಿ ಇಲಾಖೆಗೆ ಸಂಬಂಧಿಸಿದ್ದು. ಇಲ್ಲಿ ಇವರಿಗೆ ಕಾಯಂ ವಾಸಕ್ಕೆ ವ್ಯವಸ್ಥೆ ಮಾಡಿಕೊಡಲು ಬರುವುದಿಲ್ಲ. ಹಾಗಾಗಿ, ಇತರೆಡೆ ನೆಲೆಸಲು ಸೂಚಿಸಿದ್ದೇನೆ ಎಂದು ತಹಶೀಲ್ದಾರ್‌ ಅಣ್ಣಾರಾವ್‌ ಪಾಟೀಲ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT