ಬೀದರ್: ಮಣ್ಣೆತ್ತಿನ ಅಮಾವಾಸ್ಯೆಗೆ ಎತ್ತುಗಳ ಪೂಜೆ ಮಾಡಿ ಹಬ್ಬದ ಸಂಭ್ರಮದಲ್ಲಿ ಇರುವವರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನ ಸಾಮಾನ್ಯರಿಗೆ ಹಸಿ ಮೆಣಸಿನಕಾಯಿ ಮತ್ತಷ್ಟು ಖಾರವಾಗಿದೆ. ಖರೀದಿದಾರರನ್ನು ಅಣಕಿಸುವಂತೆ ಬೀನ್ಸ್ ಬೀಗುತ್ತಿದೆ.
ಇಲ್ಲಿಯ ತರಕಾರಿ ಮಾರುಕಟ್ಟೆಯಲ್ಲಿ ಬೀನ್ಸ್ ಬೆಲೆ ಪ್ರತಿ ಕ್ವಿಂಟಲ್‌ಗೆ ₹ 18 ಸಾವಿರಕ್ಕೆ ಮಾರಾಟವಾಗಿದೆ. ಬೀನ್ಸ್ ಕಳೆದ ವಾರಕ್ಕಿಂತ ₹ 10,500 ಹೆಚ್ಚಾಗಿ ಗ್ರಾಹಕರು ಹುಬ್ಬೇರಿಸುವಂತೆ ಮಾಡಿದೆ. ಹಸಿ ಮೆಣಸಿನಕಾಯಿ ಬೆಲೆ ದುಪ್ಪಟ್ಟಾಗಿದ್ದು, ₹ ನಾಲ್ಕು ಸಾವಿರದಿಂದ ₹8 ಸಾವಿರಕ್ಕೆ ಜಿಗಿದಿದೆ. ಬೆಳ್ಳುಳ್ಳಿ ಬೆಲೆಯೂ ₹ 3 ಸಾವಿರ ಏರಿಕೆಯಾಗಿದೆ.
ಆಲೂಗಡ್ಡೆ ಬೆಲೆ ₹ 1,500, ಗಜ್ಜರಿ, ಬದನೆಕಾಯಿ, ತೊಂಡೆಕಾಯಿ, ಮೆಂತೆ ಸೊಪ್ಪು, ಹೂಕೋಸು, ಪಾಲಕ್, ಕರಿಬೇವು, ಕೊತಂಬರಿ, ಸಬ್ಬಸಗಿ, ಬೀಟ್‌ರೂಟ್ ಹಾಗೂ ನುಗ್ಗೆಕಾಯಿ ಪ್ರತಿ ಕ್ವಿಂಟಲ್‌ಗೆ ₹ 500 ಹೆಚ್ಚಾಗಿದೆ, ಎಲೆಕೋಸು, ಟೊಮೆಟೊ ₹ 500 ಕಡಿಮೆಯಾಗಿದೆ. ಬೆಂಡೆಕಾಯಿ ₹ 1 ಸಾವಿರ ಇಳಿದಿದೆ. ಈರುಳ್ಳಿ, ಹಿರೇಕಾಯಿ ಹಾಗೂ ಹೂಕೋಸು ಬೆಲೆ ಸ್ಥಿರವಾಗಿದೆ.
ಹಬ್ಬದ ಸಂದರ್ಭದಲ್ಲಿ ಫುಲಾವ್ ಮಾಡಿಕೊಂಡು ಹೊಲಕ್ಕೆ ಹೋಗುವ ಪದ್ಧತಿ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿದೆ. ಜಿಲ್ಲೆಯಲ್ಲಿ ಹೋಟೆಲ್‌ಗಳೂ ತೆರೆದು ಕೊಂಡಿರುವ ಕಾರಣ ಬೀನ್ಸ್‌ಗೆ ಬೇಡಿಕೆ ಹೆಚ್ಚಾಗಿ ಬೆಲೆಯಲ್ಲೂ ಏರಿಕೆಯಾಗಿದೆ. ಬೀನ್ಸ್ ಬೆಳೆದ ರೈತ ಖುಷಿಯಲ್ಲಿ ಹಬ್ಬದ ಆಚರಣೆಯಲ್ಲಿ ತೊಡಗಿದ್ದಾನೆ. ತರಕಾರಿ ಮಾರಾಟಗಾರರಿಗೂ ಕೈತುಂಬ ಹಣ ದೊರಕಿದೆ.
‘ಲಾಕ್‌ಡೌನ್ ಕಾರಣ ವೇತನಗಳು ಹೆಚ್ಚಾಗಿಲ್ಲ. ಆದರೆ, ಅಗತ್ಯ ವಸ್ತುಗಳ ಬೆಲೆ ಹೆಚ್ಚುತ್ತಲೇ ಇದೆ. ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವಂತೆ ಇದ್ದ ಸಂಬಳದಲ್ಲೇ ಖರ್ಚು ವೆಚ್ಚವನ್ನು ಸರಿದೂಗಿಸಿಕೊಂಡು ಹೋಗಬೇಕಾಗಿದೆ. ಮನೆಯಿಂದ ಎಷ್ಟೇ ಹಣ ತಂದರೂ ಕೈಚೀಲ ತುಂಬಿಕೊಂಡು ತರಕಾರಿ ಮನೆಗೆ ಒಯ್ಯಲು ಸಾಧ್ಯವಾಗುತ್ತಿಲ್ಲ’ ಎಂದು ಗೃಹಿಣಿ ಚಂದ್ರಮುಖಿ ಹೇಳಿದರು.
ಮಹಾರಾಷ್ಟ್ರದ ನಾಸಿಕ್‌ನಿಂದ ಈರುಳ್ಳಿ, ಬೆಳ್ಳುಳ್ಳಿ, ಹೈದರಾಬಾದ್‌ನಿಂದ ಬೀನ್ಸ್, ಬೀಟ್‌ರೂಟ್, ಆಲೂಗಡ್ಡೆ, ಗಜ್ಜರಿ, ತೊಂಡೆಕಾಯಿ, ನುಗ್ಗೆಕಾಯಿ ಆವಕವಾಗಿದೆ. ಭಾಲ್ಕಿ, ಚಿಟಗುಪ್ಪ, ಹುಮನಾಬಾದ್ ಹಾಗೂ ಬೀದರ್ ತಾಲ್ಲೂಕಿನಿಂದ ಬದನೆಕಾಯಿ, ಮೆಂತೆಸೊಪ್ಪು, ಕರಿಬೇವು, ಕೊತಂಬರಿ ಹಾಗೂ ಪಾಲಕ್ ಬಂದಿದೆ.
‘ಹಬ್ಬ ಇರುವ ಕಾರಣ ಜಿಲ್ಲೆಯಲ್ಲಿ ಬೆಳೆದ ಸೊಪ್ಪು ಅಧಿಕ ಪ್ರಮಾಣದಲ್ಲಿ ಮಾರುಕಟ್ಟೆಗೆ ಬಂದಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಿಂದ ಜನರು ಬಯಸುವ ತರಕಾರಿ ಮಾರುಕಟ್ಟೆಗೆ ಬರುತ್ತಿಲ್ಲ. ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಿರುವ ಕಾರಣ ಸಾಗಣೆ ವೆಚ್ಚ ಹೆಚ್ಚಾಗಿದೆ. ಹೀಗಾಗಿ ತರಕಾರಿ ಬೆಲೆಯಲ್ಲಿ ಏರಿಕೆಯಾಗಿದೆ’ ಎಂದು ತರಕಾರಿ ವ್ಯಾಪಾರಿ ವಿಜಯಕುಮಾರ ತಿಳಿಸಿದ್ದಾರೆ.
......................................................................
ಬೀದರ್ ತರಕಾರಿ ಚಿಲ್ಲರೆ ಮಾರುಕಟ್ಟೆ
........................................................................
ತರಕಾರಿ (ಪ್ರತಿ ಕೆ.ಜಿ.) ಕಳೆದ ವಾರ ಈ ವಾರ
........................................................................
ಈರುಳ್ಳಿ 20-25, 20-25
ಮೆಣಸಿನಕಾಯಿ ,40-45 70-80
ಆಲೂಗಡ್ಡೆ 20-25, 35-40
ಎಲೆಕೋಸು 20-25 15-20
ಬೆಳ್ಳುಳ್ಳಿ 70-75, 90-100
ಗಜ್ಜರಿ 35-40, 40-45
ಬೀನ್ಸ್ 70-75, 170-180
ಬದನೆಕಾಯಿ 30-35, 40-45
ಮೆಂತೆ ಸೊಪ್ಪು40-45, 40-50
ಹೂಕೋಸು 20-25 20-25
ಸಬ್ಬಸಗಿ 40-45, 40-50
ಬೀಟ್‌ರೂಟ್ 30-40, 35-40
ತೊಂಡೆಕಾಯಿ 30-40, 40-45
ಕರಿಬೇವು 20-25, 25-30
ಕೊತಂಬರಿ 25-30, 20-25
ಟೊಮೆಟೊ 30-35, 20-25
ಪಾಲಕ್ 40-45, 40-50
ಬೆಂಡೆಕಾಯಿ 25-30, 35-40
ಹಿರೇಕಾಯಿ 25-30, 30-30
ನುಗ್ಗೆಕಾಯಿ 60-70, 70-75
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.