ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಮನಾಬಾದ್‌ನಲ್ಲಿ ನಡೆದಿದ್ದ ರಾಮ ರಥಯಾತ್ರೆ

ಲಾಲಕೃಷ್ಣ ಅಡ್ವಾಣಿಗೆ ಸ್ವಾಗತಿಸಿದ್ದ ಒಂದು ಲಕ್ಷ ಜನ
Last Updated 4 ಆಗಸ್ಟ್ 2020, 16:05 IST
ಅಕ್ಷರ ಗಾತ್ರ

ಬೀದರ್: ಅಯೋಧ್ಯೆ ರಾಮ ಜನ್ಮಭೂಮಿ ಆಂದೋಲನ ರಾಜ್ಯದಲ್ಲೂ ದೊಡ್ಡ ಪ್ರಮಾಣದಲ್ಲಿ ನಡೆದಿತ್ತು. ದೇಶದ ಸಂಸ್ಕೃತಿಯ ಪ್ರತೀಕವಾದ ಶ್ರೀರಾಮಚಂದ್ರನ ಜನ್ಮ ಸ್ಥಳದಲ್ಲೇ ಮಂದಿರ ನಿರ್ಮಾಣವಾಗಬೇಕೆಂದು 1990ರಲ್ಲಿ ಲಾಲಕೃಷ್ಣ ಅಡ್ವಾಣಿ ಆರಂಭಿಸಿದ್ದ ‘ರಾಮ ರಥಯಾತ್ರೆ’ ರಾಜ್ಯದಲ್ಲಿ ಬೀದರ್ ಜಿಲ್ಲೆಯಲ್ಲಿ ಮಾತ್ರ ಹಾದು ಹೋಗಿತ್ತು.

1999ರ ಅಕ್ಟೋಬರ್ 2ರಂದು ಎಲ್.ಕೆ.ಅಡ್ವಾನಿ ಹಾಗೂ ಪ್ರಮೋದ್ ಮಹಾಜನ್‌ ಅವರು ಬೆಳಿಗ್ಗೆ ಮಹಾರಾಷ್ಟ್ರದ ಸೋಲಾಪುರದಲ್ಲಿ ಸಮಾವೇಶ ನಡೆಸಿ ಮಧ್ಯಾಹ್ನ ಬೀದರ್ ಜಿಲ್ಲೆಯ ಹುಮನಾಬಾದ್ ಗೆ ಬಂದಿದ್ದರು. ಈ ಕಾರ್ಯಕ್ರಮದ ಸಿದ್ಧತೆಗಾಗಿ ರಾಜ್ಯದ ಪ್ರಮುಖ ಮುಖಂಡರು 15 ದಿನ ಮೊದಲೇ ಹುಮನಾಬಾದ್‌ಗೆ ಬಂದು ನೆಲೆಸಿದ್ದರು. ಕಾರ್ಯಕ್ರಮಕ್ಕೆ ಯಾವುದೇ ರೀತಿಯ ಅಡಚಣೆ ಉಂಟಾಗದಂತೆ ನೋಡಿಕೊಂಡಿದ್ದರು.

ಬಿ.ಎಸ್.ಯಡಿಯೂರಪ್ಪ, ಅನಂತಕುಮಾರ, ಕೆ.ಎಸ್.ಈಶ್ವರಪ್ಪ, ಎಂ.ಆರ್.ತಂಗಾ, ಬಸವರಾಜ ಪಾಟೀಲ ಸೇಡಂ ಸೇರಿದಂತೆ ರಾಜ್ಯದ ಅನೇಕ ಪ್ರಮುಖ ಮುಖಂಡರು ಬೆಂಗಳೂರಿನಿಂದ ಫೋಟೊಗ್ರಾಫರ್‌ಗಳ ಸಮೇತ ಇಲ್ಲಿಗೆ ಬಂದಿದ್ದರು. ಹುಮನಾಬಾದ್‌ನಲ್ಲಿ ಒಂದು ಲಕ್ಷ ಜನ ರಾಮ ರಥಯಾತ್ರೆಗೆ ಸ್ವಾಗತ ನೀಡಿದ್ದರು.

‘ರಾಷ್ಟೀಯ ಹೆದ್ದಾರಿ (ಅಂದು ಸಂಖ್ಯೆ–9) ಮೂಲಕ ಬಸವಕಲ್ಯಾಣ ತಾಲ್ಲೂಕಿನ ಚಂಡಕಾಪುರದಿಂದ ಬೀದರ್ ತಾಲ್ಲೂಕಿನ ಭಂಗೂರ ವರೆಗಿನ 40 ಕಿ.ಮೀ ಕ್ರಮಿಸಿ ಯಾತ್ರೆ ತೆಲಂಗಾಣಕ್ಕೆ ತೆರಳಿತ್ತು. ಯಾತ್ರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ರಾಮ ಭಕ್ತರು ಪಾಲ್ಗೊಂಡಿದ್ದರು’ ಎಂದು ಹುಮನಾಬಾದ್ ಮಾಜಿ ಶಾಸಕ ಸುಭಾಷ ಕಲ್ಲೂರ್ ತಿಳಿಸಿದರು.

‘30 ವರ್ಷಗಳ ಹಿಂದೆ ರಾಮ ರಥಯಾತ್ರೆ ಸೋಲಾಪುರದಿಂದ ಹುಮನಾಬಾದ್ ಮಾರ್ಗವಾಗಿ ಹೈದರಾಬಾದ್‌ಗೆ ತೆರಳಿತ್ತು. ನಾನು ಆಗ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷನಾಗಿದ್ದೆ. ಅಂದು ಎಲ್.ಕೆ. ಅಡ್ವಾಣಿ ಅವರು ದೊಡ್ಡ ಧರ್ಮ ಕ್ರಾಂತಿಯನ್ನೇ ಮಾಡಿದರು. ರಾಮ ರಥಯಾತ್ರೆ ಇಂದಿಗೂ ಜನರ ಸ್ಮೃತಿ ಪಟಲದಲ್ಲಿ ಅಚ್ಚಳಿಯದಂತೆ ಉಳಿದಿದೆ’ ಎಂದು ಸ್ಮರಿಸಿದರು.

ನಗರದಲ್ಲಿ ಎಂಟು ರಥಗಳ ಸಮಾವೇಶ
ಬೀದರ್: 1989–1990ರಲ್ಲಿ ಆದಿಚುಂಚನಗಿರಿ, ಧರ್ಮಸ್ಥಳ, ಕೂಡಲಸಂಗಮ ಸೇರಿ ರಾಜ್ಯದ ಏಳು ಭಾಗಗಳಿಂದ ರಾಮಶಿಲಾ ರಥಯಾತ್ರೆ ಹೆಸರಿನಲ್ಲಿ ಏಳು ರಥಗಳು ಬೀದರ್‌ನಲ್ಲಿ ಸಮಾವೇಶಗೊಂಡಿದ್ದವು. ಬೃಹತ್‌ ಸಮಾವೇಶದ ಮೂಲಕ ಸುಮಾರು 70 ಸಾವಿರ ಕರಸೇವಕರು ಅಯೋಧ್ಯೆಗೆ ತೆರಳಿದ್ದರು.

ಬೀದರ್ನಲ್ಲಿ ವಿಶ್ವ ಹಿಂದೂ ಪರಿಷತ್ ನಾಯಕರಾದ ಅಶೋಕ್ ಸಿಂಘಾಲ್ ಉಪಸ್ಥಿತಿಯಲ್ಲಿ ರ‍್ಯಾಲಿಯೊಂದನ್ನು ಆಯೋಜಿಸಲಾಗಿತ್ತು. ವಿಶ್ವ ಹಿಂದೂ ಪರಿಷತ್‌ನ ರಾಷ್ಟ್ರೀಯ ಸಹ ಪ್ರಧಾನ ಕಾರ್ಯದರ್ಶಿಯಾಗಿದ್ದ ಸದಾನಂದ ಕಾಕಡೆ, ದಕ್ಷಿಣ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಬಾಬೂರಾವ್ ದೇಸಾಯಿ, ಕರ್ನಾಟಕದ ಪ್ರಮುಖರಾಗಿದ್ದ ಲಕ್ಷೀನಾರಾಯಣ ಆಳ್ವ ಇಲ್ಲಿಗೆ ಬಂದಿದ್ದರು. ಅಯೋಧ್ಯೆ ಕಡೆಗೆ ಸಾಗಿದ ರಥಗಳನ್ನು ಬೀದರ್ನಲ್ಲಿ ಬೀಳ್ಕೊಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT