ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಕಲಿಕೆ ಸ್ವಯಂ ಶಿಕ್ಷಕ ಯೋಜನೆ ವಿಸ್ತರಣೆಗೆ ಮನವಿ

ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ಬಿ.ವಿ ವಸಂತಕುಮಾರ ಹೇಳಿಕೆ
Last Updated 29 ಜನವರಿ 2023, 15:19 IST
ಅಕ್ಷರ ಗಾತ್ರ

ಬೀದರ್: ‘ರಾಜ್ಯದಲ್ಲಿರುವ 15 ಗಡಿ ಜಿಲ್ಲೆಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ ಮೂಲಕ ಕನ್ನಡ ಕಲಿಕೆ ಕನ್ನಡ ಸ್ವಯಂ ಶಿಕ್ಷಕ ಯೋಜನೆಯ ವಿಸ್ತರಿಸುವಂತೆ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ನಿಕಟ ಪೂರ್ವ ಅಧ್ಯಕ್ಷ ಬಿ.ವಿ ವಸಂತಕುಮಾರ ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ರಾಜಗೀರಾದ ಮಾತೃಭೂಮಿ ಸೇವಾ ಪ್ರತಿಷ್ಠಾನದ ಸಹಯೋಗದಲ್ಲಿ ನಗರದ ಡಾ.ಚನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ

ಸಾಂಸ್ಕೃತಿಕ ಚಟುವಟಿಕೆ ಮೂಲಕ ಕನ್ನಡ ಕಲಿಕೆ ಕನ್ನಡ ಸ್ವಯಂ ಶಿಕ್ಷಕ ಯೋಜನೆಯ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ರಾಜ್ಯದ ಗಡಿ ಭಾಗದಲ್ಲಿ ಕನ್ನಡ ಶಿಕ್ಷಕರ ಕೊರತೆಯಿರುವುದನ್ನು ಗಮನಿಸಿ ನಾಡಿನಲ್ಲಿ ಆರ್‍ಎಸ್‍ಎಸ್ ಹಾಗೂ ಎನ್‍ಎಸ್‍ಎಸ್ ಮಾದರಿಯಲ್ಲಿ ಕನ್ನಡವನ್ನು ಕಲಿಸುವ ಕೆಲಸ ಆಗಬೇಕು ಎಂಬ ಉದ್ದೇಶದಿಂದ ಕೆಎಸ್‍ಎಸ್(ಕನ್ನಡ ಸ್ವಯಂ ಶಿಕ್ಷಕ) ಎಂಬ ಯೋಜನೆ ಆರಂಭಿಸಲಾಯಿತು. ಪ್ರಾಯೋಗಿಕವಾಗಿ ಆರಂಭಿಸಿರುವ ಕಾರ್ಯಕ್ರಮ ಬೀದರ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ’ ಎಂದು ತಿಳಿಸಿದರು.

‘ಕನ್ನಡ ಸಾಹಿತ್ಯ ಪರಿಷತ್ತಿನಿಂದ ಅನುದಾನ ಮೀಸಲಿರಿಸಿ ಇಂತಹ ಕಾರ್ಯಕ್ರಮ ರೂಪಿಸಲಾಗಿದೆ. ಹಿಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕೃಷಿ ಬಜೆಟ್ ಮಂಡಿಸಿದ್ದರು. ಅದರಂತೆ ಸಂಸ್ಕೃತಿ ಬಜೆಟ್ ಮಂಡಿಸುವ ಅವಶ್ಯಕತೆಯಿದೆ. ಹಾಗೆಯೇ ಕನ್ನಡ ಸ್ವಯಂ ಶಿಕ್ಷಕ ಯೋಜನೆಯಡಿ ಒಂಬತ್ತು ತಿಂಗಳು ಮಕ್ಕಳಿಗೆ ತರಬೇತಿ ನೀಡಿರುವ ಸ್ವಯಂ ಶಿಕ್ಷಕರಿಗೆ ಗ್ರಾಮ ಪಂಚಾಯಿತಿಯಿಂದ ಗೌರವಧನ ಕೊಡಿಸುವ ಪ್ರಯತ್ನಗಳಾಗಬೇಕು’ ಎಂದು ತಿಳಿಸಿದರು.

ಕನ್ನಡ ಭಾಷೆಗೆ ಗಡಿ ಇಲ್ಲ:

‘ಕರ್ನಾಟಕಕ್ಕೆ ಗಡಿ ಇದೆ. ಆದರೆ, ಕನ್ನಡಕ್ಕೆ ಇರುವುದಿಲ್ಲ. ಅಂತೆಯೇ ಅನ್ಯ ಭಾಷೆಯ ಪ್ರಭಾವ ಹೆಚ್ಚಿರುವ ಗಡಿ ಗ್ರಾಮಗಳಲ್ಲಿ ಕನ್ನಡ ಕಲಿಸುವುದು ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ದೇಶಪ್ರೇಮ ಜಾಗೃತಗೊಳಿಸುವ ಕೆಲಸ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ’ ಎಂದು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ವಾದಿರಾಜ್ ಹೇಳಿದರು.

‘ಸ್ವಯಂ ಶಿಕ್ಷಕರಿಗೆ ಉತ್ತಮ ತರಬೇತಿ ನೀಡಿ ಅವರ ಮೂಲಕ ಕನ್ನಡ ಕಲಿಸುವುದು ಮತ್ತು ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಲು ರೂಪಿಸಿದ ಈ ಯೋಜನೆಯ ಯಶಸ್ಸು ಕಂಡಿದೆ. ಗಡಿಯಲ್ಲಿನ ಮಕ್ಕಳಿಗೆ ಕನ್ನಡ ಕಲಿಸುವ ಈ ರೀತಿಯ ಕಾರ್ಯಕ್ರಮಗಳು ಉತ್ತರಕನ್ನಡ, ಬೆಳಗಾವಿ, ಕೊಡಗು, ಪುತ್ತೂರು, ಮಂಗಳೂರು, ಬೆಂಗಳೂರು, ಕನಕಪುರ, ಕೋಲಾರ, ಕಲಬುರಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ ಒಳಗೊಂಡು ರಾಜ್ಯದ ಗಡಿ ಭಾಗದಲ್ಲಿರುವ ಎಲ್ಲ ಕಡೆಗಳಲ್ಲಿಯೂ ಇಂತಹ ಕಾರ್ಯಕ್ರಮಗಳು ನಡೆಯಬೇಕು’ ಎಂದು ಪ್ರತಿಪಾದಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ ಮಾತನಾಡಿ, ‘ಕನ್ನಡ ಉಳಿಯಲು ನಾಡಿನಲ್ಲಿರುವ ಕನ್ನಡ ಶಾಲೆಗಳು ಉಳಿಯಬೇಕು. ಕನ್ನಡ ಅನ್ನದ ಭಾಷೆಯಲ್ಲ ಎಂಬ ಜನರಲ್ಲಿನ ಭಾವನೆ ಅಳಿಯಬೇಕು. ಕನ್ನಡ ಸ್ವಯಂ ಶಿಕ್ಷಕ ಯೋಜನೆಯನ್ನು ನಿಲ್ಲಿಸದೇ ಮುಂದುವರಿಸಬೇಕು’ ಎಂದು ಮನವಿ ಮಾಡಿದರು.

ಮಾತೃಭೂಮಿ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿ ಗುರುನಾಥ ರಾಜಗೀರಾ ಅವರು ಪ್ರಾಸ್ತಾವಿಕ ಮಾತನಾಡಿ, ‘ಒಂಬತ್ತು ತಿಂಗಳು ಬೀದರ್ ಜಿಲ್ಲೆಯ 45 ಗ್ರಾಮಗಳಲ್ಲಿ ಸ್ವಯಂ ಶಿಕ್ಷಕರ ಮೂಲಕ ಕನ್ನಡ ಕಲಿಕಾ ಕಾರ್ಯಕ್ರಮ ನಡೆಸಲಾಗಿದೆ’ ಎಂದು ತಿಳಿಸಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ.ಎನ್ ಸ್ವಾಗತಿಸಿದರು. ಯೋಜನಾ ಸಂಯೋಜಕ ನಟರಾಜ, ತಾಲ್ಲೂಕು ಮೇಲ್ವಿಚಾರಕರಾದ ಈಶ್ವರ ರುಮ್ಮಾ, ವಿನೋದ ಪಾಟೀಲ, ಮಲ್ಲಿಕಾರ್ಜುನ ಟೇಕರಾಜ, ಸಾಹಿತ್ಯ ಅಕಾಡೆಮಿಯ ಜಾವೇದ್, ಹರೀಶ, ಪ್ರಮುಖರಾದ ರಾಮಕೃಷ್ಣ ಸಾಳೆ, ಡಾ.ಆಂಜನೇಯ, ಪುನಿತ ಸಾಳೆ, ವೀರೇಶ ಸ್ವಾಮಿ, ಬಸವ ಮೂಲಗೆ, ಆಕಾಶ ಮಮದಾಪೂರೆ, ಪವನ ಮಾಶೆಟ್ಟಿ, ಕಿರಣ, ಆನಂದ ಪಾಟೀಲ ಇದ್ದರು.

ವಚನ, ಜಾನಪದ ನೃತ್ಯ, ಕಥೆ ಹೇಳುವ ಸ್ಪರ್ಧೆ, ನಾಟಕ, ಏಕಾಭಿನಯ ಪಾತ್ರದಂತಹ ವಿವಿಧ ಸ್ಪರ್ಧೆಗಳಲ್ಲಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ ವೇಳೆ ಸ್ವಯಂ ಶಿಕ್ಷಕ ಯೋಜನೆಯಡಿ ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT