ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೇ ಬರಲಿದೆ ಅಧಿಕ ಮೊತ್ತದ ದಂಡದ ಚಲನ್‌

ಸಂಚಾರ ನಿಯಮ ಉಲ್ಲಂಘಿಸುವ ಚಾಲಕರ ವಿರುದ್ಧ ಕಠಿಣ ಕ್ರಮ
Last Updated 19 ಜುಲೈ 2019, 7:03 IST
ಅಕ್ಷರ ಗಾತ್ರ

ಬೀದರ್: ‘ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಪೊಲೀಸ್‌ ಇಲಾಖೆಗೆ ಅನುಕೂಲವಾಗುವಂತಹ ತಂತ್ರಾಂಶವನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಹೆದ್ದಾರಿ ಮೇಲೆ ಯಾವುದೇ ಚಾಲಕ ಸಂಚಾರ ನಿಯಮ ಉಲ್ಲಂಘಿಸಿದರೂ ಇನ್ನು ಅಧಿಕ ಮೊತ್ತದ ದಂಡದ ಚಲನ್‌ ಅವರ ಮನೆಗೇ ಬರಲಿದೆ’ ಎಂದು ಸಂಚಾರ ಮತ್ತು ರಸ್ತೆ ಸುರಕ್ಷತೆ ವಿಭಾಗದ ಎಡಿಜಿಪಿ ಪಿ.ಎಸ್.ಸಂಧು ಎಚ್ಚರಿಸಿದರು.

ನಗರದ ಜಿಲ್ಲಾ ರಂಗ ಮಂದಿರದಲ್ಲಿ ಶಿಕ್ಷಣ ಸಂಸ್ಥೆಗಳ ಪ್ರಮುಖರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ವಾಹನ ಚಾಲಕರಿಗಾಗಿ ಗುರುವಾರ ಆಯೋಜಿಸಿದ್ದ ರಸ್ತೆ ಸುರಕ್ಷತೆ ಮತ್ತು ರಸ್ತೆ ಅಪಘಾತಗಳ ದುಷ್ಪರಿಣಾಮಗಳು ಮತ್ತು ಸುರಕ್ಷತಾ ಕ್ರಮಗಳ ಕುರಿತು ಗುರುವಾರ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವ ವಾಹನಗಳ ಸಂಖ್ಯೆ, ಮಾಲೀಕರ ಹೆಸರು ಹಾಗೂ ವಿಳಾಸವನ್ನು ಪೊಲೀಸ್‌ ಇಲಾಖೆಗೆ ಲಿಂಕ್‌ ಮಾಡುವ ಪ್ರಕ್ರಿಯೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಇನ್ನು ಹೆದ್ದಾರಿ ಮೇಲೆ ಸ್ಮಾರ್ಟ್‌ ಕ್ಯಾಮೆರಾಗಳನ್ನು ಅಳವಡಿಸಲಿದೆ. ಇದರಿಂದ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ’ ಎಂದು ತಿಳಿಸಿದರು.

‘ಯಾವುದೇ ಒಂದು ವಾಹನ ಹೆದ್ದಾರಿಯಲ್ಲಿ ವಿರುದ್ಧ ದಿಕ್ಕಿನಲ್ಲಿ ಸಾಗಿದರೆ ಅಥವಾ ಲೈನ್‌ ಔಟ್‌ ಆದರೆ ಸ್ಮಾರ್ಟ್‌ ಕ್ಯಾಮೆರಾಗಳು ದೃಶ್ಯವನ್ನು ಸೆರೆ ಹಿಡಿಯಲಿವೆ. ವಾಹನ ಚಾಲಕ ಟೋಲ್‌ಗೇಟ್‌ಗೆ ಬರುವಷ್ಟರಲ್ಲಿ ಪೊಲೀಸರಿಗೆ ಮಾಹಿತಿ ರವಾನೆಯಾಗಲಿದೆ. ಪೊಲೀಸರು ತಕ್ಷಣ ದಾಖಲೆಗಳನ್ನು ಪರಿಶೀಲಿಸಿ ಓವರ್‌ಸ್ಪೀಡ್‌, ಸಂಚಾರ ನಿಯಮ ಉಲ್ಲಂಘನೆ ದಂಡ ವಸೂಲಿ ಮಾಡಲಿದ್ದಾರೆ’ ಎಂದು ಹೇಳಿದರು.

‘ಶೀಘ್ರದಲ್ಲಿ ಹೊಸ ರಸ್ತೆ ಸುರಕ್ಷತಾ ನಿಯಮಗಳು ಜಾರಿಗೆ ಬರಲಿದ್ದು, ವಾಹನ ಚಾಲಕರು ದೇಶದ ಯಾವುದೇ ಮೂಲೆಯಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೂ ದಂಡದ ರಸೀದಿ ವಾಹನ ಮಾಲೀಕರ ಮನೆಗೆ ಬರಲಿದೆ. ನಿಯಮ ಉಲ್ಲಂಘಿಸಿದ ತಪ್ಪಿಗೆ ಲೈಸನ್ಸ್‌ ರದ್ದು ಪಡಿಸುವ, ವಾಹನ ವಶಕ್ಕೆ ತೆಗೆದುಕೊಳ್ಳುವ ಅಧಿಕಾರವನ್ನು ಪೊಲೀಸರಿಗೆ ಕೊಡಲಾಗಿದೆ’ ಎಂದು ತಿಳಿಸಿದರು.

‘ದೇಶದಲ್ಲಿ ಒಂದು ವರ್ಷದ ಅವಧಿಯಲ್ಲಿ 11 ಸಾವಿರ ಜನರು ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೊಲೆ ಪ್ರಕರಣದ ತನಿಖೆ ನಡೆಯುವಷ್ಟು ತ್ವರಿತ ಗತಿಯಲ್ಲಿ ಅಪಘಾತ ಪ್ರಕರಣಗಳ ತನಿಖೆ ನಡೆಯಲಿದೆ. ಜನ ರಸ್ತೆ ಮೇಲೆ ಸಾಯಬಾರದು ಎನ್ನುವುದೇ ನಮ್ಮ ಉದ್ದೇಶವಾಗಿದೆ. ಪ್ರತಿಯೊಬ್ಬರು ಸಂಚಾರ ಸಂಚಾರ ನಿಯಮ ಪಾಲಿಸುವ ಜತೆಗೆ ಅಮೂಲ್ಯವಾದ ಜೀವ ಉಳಿಸಿಕೊಳ್ಳಬೇಕು’ ಎಂದು ಮನವಿ ಮಾಡಿದರು.

‘ಬೈಕ್ ಅಪಘಾತದಲ್ಲೇ ಹೆಚ್ಚು ಜನ ಸಾವಿಗೀಡಾಗುತ್ತಿದ್ದಾರೆ. ಹೀಗಾಗಿ ಕಡ್ಡಾಯವಾಗಿ ಬಿಐಎಸ್ ಗುರುತು ಇರುವ ಹೆಲ್ಮೆಟ್ ಧರಿಸಬೇಕು. 18 ವರ್ಷ ಮೇಲ್ಪಟ್ಟ ಹಾಗೂ ಲೈಸನ್ಸ್ ಹೊಂದಿದವರು ಮಾತ್ರ ಬೈಕ್, ಕಾರು ಚಲಾಯಿಸಬೇಕು. ಮಕ್ಕಳು ಲೈಸನ್ಸ್‌ ಇಲ್ಲದೆ ಗಾಡಿ ಓಡಿಸಿದರೆ ಪಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ತಿಳಿಸಿದರು.

‘ಬೈಕ್‌ಗಿಂತ ಕಾರು ಹೆಚ್ಚು ಸುರಕ್ಷಿತ. ಹಾಗಾಗಿ, ಯುವಕರಿಗೆ ಬೈಕ್ ಬದಲು ಅದೇ ಬೆಲೆಯಲ್ಲಿ ದೊರಕುವ ಹಳೆಯ ಕಾರು ಕೊಡಿಸುವುದು ಉತ್ತಮ. ಆಟೊ ರಿಕ್ಷಾದಲ್ಲಿ 6 ಕ್ಕಿಂತ ಹೆಚ್ಚು ಮಕ್ಕಳ ಸಾಗಣೆ ಮಾಡುವುದನ್ನು ನಿಷೇಧಿಸಲಾಗಿದೆ. ಪಿಕ್‌ನಿಕ್‌, ಜಾತ್ರೆಯ ಸಂದರ್ಭದಲ್ಲಿ ಗೂಡ್ಸ್‌ ವಾಹನದಲ್ಲಿ ಪ್ರಯಾಣಿಕರನ್ನು ಸಾಗಿಸಿದರೆ ಅಂತಹ ವಾಹನಗಳ ಪರವಾನಗಿ ರದ್ದುಪಡಿಸಲಾಗುವುದು’ ಎಂದು ಹೇಳಿದರು.

ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವರಾಜ್ ಪಾಟೀಲ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಾಶ ಮಠಪತಿ ಇದ್ದರು. ಸಿಪಿಐ ಶರಣಬಸವೇಶ್ವರ ಭಜಂತ್ರಿ ಸ್ವಾಗತಿಸಿದರು. ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶಿವಕುಮಾರ ಪಾಟೀಲ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT