ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ: ‘ಬಡ ವಿದ್ಯಾರ್ಥಿಗಳ ನೆರವಿಗೆ ₹10 ಲಕ್ಷ’

ಭಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಳೆ ವಿದ್ಯಾರ್ಥಿಗಳ ಸಮಾವೇಶ
Last Updated 25 ಜೂನ್ 2022, 12:51 IST
ಅಕ್ಷರ ಗಾತ್ರ

ಭಾಲ್ಕಿ: ‘ಎಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುವ ಬಡ, ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಲು ₹10 ಲಕ್ಷ ದೇಣಿಗೆ ನೀಡಲಾಗುವುದು’ ಎಂದು ತೆಲಂಗಾಣ ಸರ್ಕಾರದ ಸಚಿವ ಪ್ರಶಾಂತ ರೆಡ್ಡಿ ಭರವಸೆ ನೀಡಿದರು.

ಪಟ್ಟಣದ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ (ಬಿಕೆಐಟಿ) ಶನಿವಾರ ನಡೆದ ಹಳೆ ವಿದ್ಯಾರ್ಥಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ನಾನು ಈ ಸಂಸ್ಥೆಯ ವಿದ್ಯಾರ್ಥಿ ಎಂದು ಹೇಳಿಕೊಳ್ಳಲು ಹೆಮ್ಮೆ ಎನಿಸುತ್ತದೆ. ಮೊದಲಿನಿಂದಲೂ ಈ ಸಂಸ್ಥೆಯಲ್ಲಿ ಗುಣಾತ್ಮಕ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ, ಮಾನವೀಯ ಮೌಲ್ಯಗಳಿಗೆ ಒತ್ತು ನೀಡಲಾಗುತ್ತಿದೆ. ಇದರ ಪರಿಣಾಮ ತೆಲಂಗಾಣ, ಮಹಾರಾಷ್ಟ್ರ, ಬಿಹಾರ ಹಾಗೂ ಉತ್ತರ ಪ್ರದೇಶ ಸೇರಿ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಇಲ್ಲಿಗೆ ವಿದ್ಯಾಭ್ಯಾಸಕ್ಕೆ ಬರುತ್ತಿದ್ದರು ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷರಾಗಿದ್ದ ಡಾ.ಭೀಮಣ್ಣ ಖಂಡ್ರೆ ಅವರು ಯಾವಾಗಲೂ ವಿದ್ಯಾರ್ಥಿಗಳ ಹಿತ ಬಯಸುತ್ತಿದ್ದರು. ಶೈಕ್ಷಣಿಕ ಬೆಳವಣಿಗೆಗೆ ಸದಾ ಸಹಕಾರ ನೀಡುತ್ತಿದ್ದರು. ಇಲ್ಲಿ ಕಲಿತ ಸಾವಿರಾರೂ ವಿದ್ಯಾರ್ಥಿಗಳು ಸಿನಿಮಾ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಕ್ರೀಡೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಛಾಪು ಮೂಡಿಸಿ ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.

ಖಂಡ್ರೆ ಪರಿವಾರದಿಂದ ತಾಲ್ಲೂಕು ಪ್ರಗತಿ ಕಾಣುತ್ತಿದೆ. ಶೈಕ್ಷಣಿಕವಾಗಿ ವಿದ್ಯಾರ್ಥಿಗಳು ಸಾಧನೆ ಮಾಡುತ್ತಿದ್ದಾರೆ. ಈ ಹಿಂದೆ ಸೌಲಭ್ಯಗಳ ಕೊರತೆ ಇತ್ತು. ಪಟ್ಟಣ ಹೇಳಿಕೊಳ್ಳುವಂತಥ ಅಭಿವೃದ್ಧಿ ಕಂಡಿರಲಿಲ್ಲ. 30 ವರ್ಷಗಳ ಬಳಿಕ ಭಾಲ್ಕಿಗೆ ಬಂದಿದ್ದೇನೆ. ಪಟ್ಟಣದ ಅಭಿವೃದ್ಧಿಯ ದಿಕ್ಕು ಬದಲಾಗಿದೆ. ಎಲ್ಲ ಕಡೆಗಳಲ್ಲಿ ಸುಂದರ ರಸ್ತೆ, ವಿದ್ಯುತ್ ದೀಪಗಳು, ಕಟ್ಟಡಗಳಿಂದ ಕಂಗೊಳಿಸುತ್ತಿದೆ ಎಂದರು.

ಕಾಲೇಜಿನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ವಿದ್ಯಾರ್ಥಿಗಳು ಸೌಲಭ್ಯಗಳ ಸದುಪಯೋಗ ಪಡೆದುಕೊಂಡು ಉತ್ತಮ ಶಿಕ್ಷಣ ಪಡೆಯಬೇಕು. ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಸಂಸ್ಥೆಗೆ ₹10 ಲಕ್ಷ ನೀಡುತ್ತೇನೆ. ಇದನ್ನು ಠೇವಣಿ ರೂಪದಲ್ಲಿ ಇಟ್ಟು ಇದರಿಂದ ಬರುವ ಬಡ್ಡಿಯಲ್ಲಿ ಪ್ರತಿ ವರ್ಷ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡಿ ಪ್ರೋತ್ಸಾಹಿಸಬೇಕು ಎಂದು ಸಲಹೆ ನೀಡಿದರು.

ಶಾಸಕ ಈಶ್ವರ ಖಂಡ್ರೆ ಮಾತನಾಡಿ,‘ಈ ಭಾಗದ ಪ್ರಗತಿಗೆ ಶಿಕ್ಷಣ ಅಸ್ತ್ರವೆಂದು ತಿಳಿದು ಡಾ.ಚನ್ನಬಸವ ಪಟ್ಟದ್ದೇವರು ಹಾಗೂ ಡಾ.ಭೀಮಣ್ಣ ಖಂಡ್ರೆ ಅವರು ಸ್ವತಂತ್ರ ಪೂರ್ವದಲ್ಲಿ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. 1982ರಲ್ಲಿ ಆರಂಭಗೊಂಡ ಎಂಜಿನಿಯರಿಂಗ್ ಕಾಲೇಜಿಗೆ 40 ವರ್ಷಗಳು ಪೂರ್ಣಗೊಂಡಿವೆ. ಇದುವರೆಗೂ ಈ ಸಂಸ್ಥೆಯಿಂದ 12 ಸಾವಿರ ವಿದ್ಯಾರ್ಥಿಗಳು ಪದವಿ ಪೂರ್ಣಗೊಳಿಸಿ ದೇಶ-ವಿದೇಶದಲ್ಲಿ ಡಾಕ್ಟರ್, ಎಂಜಿನಿಯರ್, ವಿಜ್ಞಾನಿ, ಪ್ರಾಚಾರ್ಯ, ಪ್ರೊಫೆಸರ್ ಹಾಗೂ ಸೈನಿಕರಾಗಿ ದೇಶಕ್ಕೆ ಕೊಡುಗೆ ನೀಡುತ್ತಿದ್ದಾರೆ ಎಂದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧೀರಜ್ ದೇಶಪಾಂಡೆ, ಶ್ರೀನಿವಾಸ ಬಿಕುಮಂಗಲಾ ಹಾಗೂ ರಾಜೇಂದ್ರಸಿಂಗ್ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಸಾಗರ ಖಂಡ್ರೆ ಇದ್ದರು. ಪ್ರಾಚಾರ್ಯ ಡಾ.ನಾಗಶೆಟೆಪ್ಪ ಬಿರಾದಾರ ಸ್ವಾಗತಿಸಿದರು. ಬಸವರಾಜ ಕಾವಡಿ ನಿರೂಪಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT