ಗುರುವಾರ , ಆಗಸ್ಟ್ 11, 2022
24 °C
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಮಾಹಿತಿ

₹ 3 ಸಾವಿರ ಕೋಟಿ ಠೇವಣಿ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ‘ಶತಮಾನೋತ್ಸವ ಆಚರಣೆ ಸನೀಹದಲ್ಲಿರುವ ಡಿಸಿಸಿ ಬ್ಯಾಂಕ್ ಬರುವ ದಿನಗಳಲ್ಲಿ ₹3 ಸಾವಿರ ಕೋಟಿ ಠೇವಣಿ ಹಾಗೂ ₹5 ಸಾವಿರ ಕೋಟಿ ದುಡಿಯುವ ಬಂಡವಾಳದ ಗುರಿ ಹೊಂದಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಹೇಳಿದರು.

ಇಲ್ಲಿಯ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ 98ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಲು ಹಾಗೂ ಗ್ರಾಹಕರಿಗೆ ಇನ್ನೂ ಹೆಚ್ಚು ಸೌಕರ್ಯಗಳನ್ನು ಒದಗಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ’ ಎಂದು ತಿಳಿಸಿದರು.

‘ನಿರಂತರ ಲಾಭದಲ್ಲಿ ಮುನ್ನಡೆದಿರುವ ಬ್ಯಾಂಕ್ 2019-20ನೇ ಸಾಲಿನಲ್ಲಿ ₹7.17 ಕೋಟಿ ಲಾಭ ಗಳಿಸಿದೆ. ಮಾರ್ಚ್ ಅಂತ್ಯಕ್ಕೆ ₹1,796 ಕೋಟಿ ಠೇವಣಿ ಹೊಂದಿದೆ. ಒಟ್ಟು ದುಡಿಯುವ ಬಂಡವಾಳ ₹3,212 ಕೋಟಿ ಆಗಿದೆ’ ಎಂದು ಹೇಳಿದರು.

‘ಬ್ಯಾಂಕ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರೈತರ ಮನೆ ಬಾಗಿಲಿಗೆ ರಸಗೊಬ್ಬರ ತಲುಪಿಸುವ ಕೆಲಸ ಮಾಡುತ್ತಿದೆ. ಜಿಲ್ಲೆಯ ರೈತರಿಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರಯೋಜನ ಆಗುವಂತೆ ನೋಡಿಕೊಳ್ಳುತ್ತಿದೆ’ ಎಂದು ತಿಳಿಸಿದರು.

‘ಬ್ಯಾಂಕಿಂಗ್ ಪೈಪೋಟಿ ಯುಗದಲ್ಲಿ ಪ್ಯಾಕ್ಸ್‌ಗಳಲ್ಲಿ ಹೆಚ್ಚಿನ ಠೇವಣಿ ಸಂಗ್ರಹಿಸಿ ಸ್ಥಳೀಯ ಮಟ್ಟದಲ್ಲೇ ಗ್ರಾಹಕರಿಗೆ ಸಾಲ ಸೌಲಭ್ಯ ಕಲ್ಪಿಸಿಕೊಡುವ ಕೆಲಸ ಆಗಬೇಕಾಗಿದೆ’ ಎಂದು ಹೇಳಿದರು.

‘ಜನರಿಗೆ ಕಡಿಮೆ ದರದಲ್ಲಿ ಔಷಧಿಗಳು ದೊರೆಯುವಂತಾಗಲು ಟಿಎಪಿಸಿಎಂಎಸ್ ಹಾಗೂ ವಾಣಿಜ್ಯ ಮಳಿಗೆ ಹೊಂದಿರುವ ಆಯ್ದ ಪ್ಯಾಕ್ಸ್‌ಗಳ ಮೂಲಕ ಆದಷ್ಟು ಬೇಗ ಕೇಂದ್ರ ಸರ್ಕಾರದ ಜನರಿಕ್ ಔಷಧಿ ಅಂಗಡಿಗಳನ್ನು ತೆರೆಯಲು ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.

ಬ್ಯಾಂಕ್ ಉಪಾಧ್ಯಕ್ಷ ಭೀಮರಾವ್ ಪಾಟೀಲ, ನಿರ್ದೇಶಕರಾದ ರಾಚಪ್ಪ ಬಿ. ಪಾಟೀಲ, ಅಮರಕುಮಾರ ಖಂಡ್ರೆ, ವಿಜಯಕುಮಾರ ಪಾಟೀಲ ಗಾದಗಿ, ಪರಮೇಶ್ವರ ಮುಗಟೆ, ಜಗನ್ನಾಥ ಎಖ್ಖೆಳ್ಳಿ, ಬಸವರಾಜ ಹೆಬ್ಬಾಳೆ, ಸಂಜಯಸಿಂಗ್ ಹಜಾರಿ, ಶರಣಪ್ಪ ಶಿವಪ್ಪ, ಮಹಮ್ಮದ್ ಸಲಿಮೊದ್ದೀನ್, ಬಸವರಾಜ ಗೌನಿ, ಶಿವಶರಣಪ್ಪ ತಗಾರೆ, ಹಣಮಂತರಾವ್ ಪಾಟೀಲ, ಸಂಗಮೇಶ ಪಾಟೀಲ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಾಜನ ಮಲ್ಲಿಕಾರ್ಜುನ, ಪ್ರಧಾನ ವ್ಯವಸ್ಥಾಪಕರಾದ ಚನ್ನಬಸಯ್ಯ ಸ್ವಾಮಿ (ಆಡಳಿತ), ವಿಠ್ಠಲರೆಡ್ಡಿ ಯಡಮಲ್ಲೆ (ಬ್ಯಾಂಕಿಂಗ್ ಮತ್ತು ಫೈನಾನ್ಸ್) ಇದ್ದರು.

ಬಸವರಾಜ ಕಲ್ಯಾಣ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು