ಬೀದರ್: ‘ಬಡ ಯುವತಿಯರ ಸ್ಥಿತಿಗತಿ ಮೇಲೆ ಬೆಳಕು ಚೆಲ್ಲುವ ‘ದಿ ರೂಲರ್ಸ್’ ಚಲನಚಿತ್ರ ಆ.30ರಂದು ತೆರೆ ಕಾಣಲಿದೆ’ ಎಂದು ನಟ, ನಿರ್ದೇಶಕ ಹಾಗೂ ಅಂಬೇಡ್ಕರ್ ಸೇವಾ ಸಮಿತಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಎಂ.ಸಂದೇಶ್ ತಿಳಿಸಿದರು.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಆ.30ರಂದು ಬೀದರ್ ಹಾಗೂ ಭಾಲ್ಕಿ ಚಿತ್ರಮಂದಿರದಲ್ಲಿ ಏಕಕಾಲಕ್ಕೆ ಚಿತ್ರ ರಿಲೀಸ್ ಆಗಲಿದೆ. 2023ರ ಸೆಪ್ಟೆಂಬರ್‌ನಲ್ಲಿ ಚಿತ್ರದ ಕಥೆ ಸಿದ್ಧಗೊಂಡಿತ್ತು. ನವೆಂಬರ್ 26ರಂದು ಸಂವಿಧಾನ ದಿನಾಚರಣೆಯ ದಿನದಂದು ಶೂಟಿಂಗ್ ಆರಂಭಗೊಂಡಿತ್ತು. ಈಗ ಬಿಡುಗಡೆಗೆ ಸಿದ್ಧವಾಗಿದೆ’ ಎಂದು ಹೇಳಿದರು.
ಚಿತ್ರ ನಿರ್ಮಾಣಕ್ಕೆ ₹4.50 ಕೋಟಿ ಖರ್ಚಾಗಿದೆ. ಅಶ್ವತ್ಥ್ ಬೆಳಗೆರೆ ಈ ಚಿತ್ರದ ನಿರ್ಮಾಪಕರು. ಅವರ ಮಾರ್ಗದರ್ಶನದಲ್ಲಿ ನಾನು ನಟಿಸಿದ್ದೇನೆ. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಚಿತ್ರದ ಚಿತ್ರೀಕರಣ ಮಾಡಲಾಗಿದೆ. ರಿತುಗೌಡ ನಟಿಯಾಗಿ, ಅವರ ತಾಯಿ ದುರ್ಗಮ್ಮ ಸಹ ಅಭಿನಯಿಸಿದ್ದಾರೆ. ಉದಯ ಭಾಸ್ಕರ್ ಅವರು ನಿರ್ದೇಶಿಸಿ ಪ್ರೋತ್ಸಾಹಿಸಿದ್ದಾರೆ ಎಂದು ವಿವರಿಸಿದರು.
ಶ್ರೀಮಂತ ಯುವಜನರು ಬಡ ಯುವತಿಯರನ್ನು ಪ್ರೇಮ ಪಾಶಕ್ಕೆ ಬೀಳಿಸಿ ವಂಚಿಸುತ್ತಿರುವ ಘಟನೆಗಳು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಚಿತ್ರದ ಮೂಲಕ ಜಾಗೃತಿ ಮೂಡಿಸುವ ಕೆಲಸ ಮಾಡಲಾಗಿದೆ. ಚಿತ್ರದ ಕೆಲ ತುಣುಕುಗಳನ್ನು ನೋಡಿ ಮಾಜಿ ಸಚಿವರಾದ ಬಿ.ಸಿ.ನಾಗೇಶ, ಮೋಟಮ್ಮ ಅವರು ಭಾವುಕರಾಗಿ ಕಣ್ಣೀರು ಹಾಕಿದರು ಎಂದರು.