ಭಾನುವಾರ, ಜುಲೈ 3, 2022
27 °C

ಮೊಬೈಲ್‌ ಲೊಕೇಷನ್‌ ಟ್ರ್ಯಾಪ್‌ ಆಗುತ್ತಿತ್ತು: ಉಕ್ರೇನ್‌ನಿಂದ ಮರಳಿದ ಅಮಿತ್‌ ಮಾತು

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಯುದ್ಧ ಪೀಡಿತ ಉಕ್ರೇನ್‌ನಲ್ಲಿ ಸೆಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಏಳು ದಿನ ಬಂಕರ್‌ನಲ್ಲೇ ಕಳೆಯಬೇಕಾಯಿತು. ಮೊಬೈಲ್‌ ಲೊಕೇಷನ್‌ಗಳು ಟ್ರ್ಯಾಪ್‌ ಆಗುತ್ತಿದ್ದರಿಂದ ಮೊಬೈಲ್‌ ಫೋನ್‌ಗಳನ್ನು ಸ್ವಿಚ್‌ಆಫ್‌ ಮಾಡಿದ್ದೆವು. ಬಂಕರ್‌ನಲ್ಲಿದ್ದಾಗ ಸ್ವಲ್ಪ ಮಟ್ಟಿಗೆ ಊಟದ ಸಮಸ್ಯೆ ಆಯಿತು. ಉಕ್ರೇನ್‌ ನಾಗರಿಕರು ಹಣ್ಣು, ಬ್ರೆಡ್‌ ಕೊಟ್ಟು ಸಹಾಯ ಮಾಡಿದರು...

ಹೀಗೆಂದು ಉಕ್ರೇನ್‌ನಿಂದ ತಾಯ್ನಾಡಿಗೆ ಬಂದ ಅಮಿತ್‌ ಸಿರಂಜೆ ಹೇಳಿದರು. ಭಾರತ ರಾಯಭಾರಿ ಕಚೇರಿಯ ಅಧಿಕಾರಿಗಳ ಸೇವೆಯನ್ನು ಎಂದಿಗೂ ಮರೆಯಲಾಗದು ಎಂದು ಕೃತಜ್ಞತಾ ಭಾವ ವ್ಯಕ್ತಪಡಿಸಿದರು.

ವೈದ್ಯಕೀಯ ಶಿಕ್ಷಣ ಪಡೆಯಬೇಕೆಂಬ ಆಸೆ ಇತ್ತು. ಇಲ್ಲಿ ಸೀಟ್‌ ಸಿಗಲಿಲ್ಲ. ಪೇಮೆಂಟ್ ಸೀಟಿಗೆ ಶುಲ್ಕ ಪಾವತಿಸುವ ಸಾಮರ್ಥ್ಯ ಇರಲಿಲ್ಲ. ಹೀಗಾಗಿ 22ರ ಡಿಸೆಂಬರ್ 2020ರಂದು ಉಕ್ರೇನ್‌ಗೆ ತೆರಳಿದ್ದೆ. ಅಲ್ಲಿ ನಾನು ಹಾಸ್ಟೆಲ್‌ನಲ್ಲಿ ಇರಲಿಲ್ಲ. ಹಾಸ್ಟೆಲ್‌ನಿಂದ 7 ಕಿ.ಮೀ ದೂರದಲ್ಲಿ ಮೂವರು ಗೆಳೆಯರು ಸೇರಿ ಒಂದು ಫ್ಲ್ಯಾಟ್‌ನಲ್ಲಿ ವಾಸವಾಗಿದ್ದೆವು. ನಾನೊಬ್ಬನೇ ಎಂಬಿಬಿಎಸ್ ಎರಡನೇ ವರ್ಷದಲ್ಲಿ ಓದುತ್ತಿದ್ದೇನೆ. ಮೊದಲ ವರ್ಷದಲ್ಲಿ ಓದುತ್ತಿರುವವರು ಹಾಸ್ಟೆಲ್‌ನಲ್ಲಿ ವಾಸವಾಗಿದ್ದರು ಎಂದು ತಿಳಿಸಿದರು.

ಯುದ್ಧ ಆರಂಭವಾಗುವ ಮೊದಲೇ ಉಕ್ರೇನ್‌ ತೊರೆಯುವಂತೆ ರಾಯಭಾರಿ ಕಚೇರಿ ಸಂದೇಶ ಕಳಿಸಿತ್ತು. ಆರಂಭದಲ್ಲಿ ಯಾರೂ ಸಂದೇಶವನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ನಂತರ ಪರಿಸ್ಥಿತಿ ಬಿಗಡಾಯಿಸಿತು. ಏಳು ದಿನ ಬಂಕರ್‌ನಲ್ಲಿ ಕಳೆಯಬೇಕಾಯಿತು. ಬಂಕರ್‌ನಿಂದ ಹೊರ ಬಂದ ನಂತರ ಉಕ್ರೇನ್‌ ನಾಗರಿಕರು ಹಣ್ಣು ಬ್ರೆಡ್‌ ಹಂಚುತ್ತಿದ್ದರು. ಅಲ್ಲಿ ಹೆಚ್ಚು ದಿನ ಉಳಿಯುವುದು ಸರಕ್ಷಿತವಾಗಿರಲಿಲ್ಲ. ಹೀಗಾಗಿ ಅಲ್ಲಲ್ಲಿ ಆಶ್ರಯ ಪಡೆಯುತ್ತ ಲಬೀಬ್‌ ಪಟ್ಟಣದಿಂದ ಆರು ತಾಸು ನಡೆಯುತ್ತ 15 ಕಿ.ಮೀ ಕ್ರಮಿಸಿ ಪೋಲೆಂಡ್‌ ಗಡಿ ತಲುಪಿದೆವು. ರೈಲು ನಿಲ್ದಾಣದಲ್ಲಿ ರಾಯಭಾರಿ ಕಚೇರಿಯವರು ಊಟೋಪಚಾರದ ವ್ಯವಸ್ಥೆ ಮಾಡಿದ್ದರು ಎಂದು ಹೇಳಿದರು.

ಉಕ್ರೇನ್‌ನಿಂದ 29 ಗಂಟೆ ರೈಲಿನಲ್ಲಿ ಪ್ರಯಾಣಿಸಿ ಪೋಲೆಂಡ್‌ನ ಸುರಕ್ಷಿತ ಸ್ಥಳಕ್ಕೆ ತಲುಪಿದೆವು. ಪೋಲೆಂಡ್‌ನಿಂದ ದೆಹಲಿ ಮಾರ್ಗವಾಗಿ ಹೈದರಾಬಾದ್‌ಗೆ ಬಂದ ಮೇಲೆ ಧೈರ್ಯ ಬಂದಿತು. ಹೈದರಾಬಾದ್‌ನಲ್ಲಿ ತಂದೆ–ತಾಯಿ ಇಬ್ಬರೂ ತುಂಬು ಹೃದಯದಿಂದ ಬರ ಮಾಡಿಕೊಂಡರು. ಮನೆ ಸೇರಿದಾಗ ರಾತ್ರಿ 11 ಗಂಟೆಯಾಗಿತ್ತು ಎಂದು ತಿಳಿಸಿದರು.

ಇಲ್ಲಿಯ ಹಾಗೂ ಅಲ್ಲಿಯ ಶಿಕ್ಷಣ ಪದ್ಧತಿಯಲ್ಲಿ ಸ್ಪಲ್ಪ ವ್ಯತ್ಯಾಸವಿದೆ. ಅಲ್ಲಿ ಹೆಚ್ಚು ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಯುದ್ಧದ ಕಾರಣ ಮನೆಗೆ ಮರಳಬೇಕಾಯಿತು. ಮುಂದೆ ಏನಾಗುತ್ತದೋ ಗೊತ್ತಿಲ್ಲ ಎಂದು ಹೇಳಿದರು.

‘ನಮ್ಮ ಮಗ ಯಾವಾಗ ಮನೆಗೆ ಬರುತ್ತಾನೆ ಎನ್ನುವ ಚಿಂತೆಯಲ್ಲಿದ್ದೆವು. ಕೊನೆಗೂ ಸುರಕ್ಷಿತವಾಗಿ ಮನೆ ಸೇರಿದ್ದಾನೆ. ಉಕ್ರೇನ್‌ನಲ್ಲಿದ್ದ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆತರುವಲ್ಲಿ ಶ್ರಮಿಸಿದ ಎಲ್ಲರಿಗೂ ಕೃತಜ್ಞರಾಗಿದ್ದೇವೆ’ ಎಂದು ಅಮೀತ್ ತಾಯಿ ಪ್ರೇಮಲತಾ ಹಾಗೂ ತಂದೆ ಚಂದ್ರಕಾಂತ ಸಿರಂಜೆ ಹೇಳಿದರು.

ಇದನ್ನೂ ಓದಿ– 10 ನಿಮಿಷಕ್ಕೊಂದು ಬಾಂಬ್ ಬೀಳುತ್ತಿತ್ತು: ಉಕ್ರೇನ್‌ನಿಂದ ಮರಳಿದ ಬ್ರಾಹ್ಮಿ ಮಾತು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು