ಬೀದರ್: ‘ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರಿಗೆ ಮೀಸಲಿಟ್ಟಿರುವ ಅನುದಾನವನ್ನು ‘ಗ್ಯಾರಂಟಿ’ ಯೋಜನೆಗಳಿಗೆ ವಿನಿಯೋಗಿಸಿ ರಾಜ್ಯ ಸರ್ಕಾರ ಆ ವರ್ಗದವರಿಗೆ ದ್ರೋಹ ಎಸಗುತ್ತಿದೆ’ ಎಂದು ಮಾಜಿಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು.
ನಗರ ಹೊರವಲಯದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗ್ಯಾರಂಟಿ’ಗಳ ಮೂಲಕ ಬಡವರಿಗೆ ಅನುಕೂಲ ಮಾಡಿಕೊಟ್ಟರೆ ನಮ್ಮ ತಕರಾರಿಲ್ಲ. ಎಸ್ಸಿ/ಎಸ್ಟಿ ಕಲ್ಯಾಣಕ್ಕೆ ಮೀಸಲಿಟ್ಟ ₹34 ಸಾವಿರ ಕೋಟಿ ಅನುದಾನದಲ್ಲಿ ₹11,500 ಕೋಟಿ ‘ಗ್ಯಾರಂಟಿ’ಗಳಿಗೆ ವಿನಿಯೋಗಿಸುತ್ತಿದ್ದಾರೆ. ಗೃಹಜ್ಯೋತಿ, ಗೃಹಲಕ್ಷ್ಮಿ ಸೇರಿದಂತೆ ಇತರೆ ಗ್ಯಾರಂಟಿಗಳಿಗೆ ಅವರ ಹಣವೇ ಬಳಸುತ್ತಿದ್ದಾರೆ. ಖಜಾನೆಯಿಂದ ಒಂದು ಪೈಸೆಯೂ ಕೊಟ್ಟಿಲ್ಲ. ಇದು ಎಸ್‌ಸಿ, ಎಸ್‌ಟಿ ಜನರಿಗೆ ಬಗೆಯುತ್ತಿರುವ ದ್ರೋಹ ಎಂದು ಕಿಡಿಕಾರಿದರು.
ಸಹಜವಾಗಿ ಎಲ್ಲ ಶಾಸಕರು ನನ್ನ ಕ್ಷೇತ್ರದಲ್ಲಿ ಈ ಕೆಲಸ ಮಾಡುತ್ತೇನೆ, ಆ ಕೆಲಸ ಮಾಡುತ್ತೇನೆ ಎಂದು ಚುನಾವಣೆಗೂ ಮುನ್ನ ಭರವಸೆ ಕೊಟ್ಟಿರುತ್ತಾರೆ. ಆದರೆ, ಇದುವರೆಗೆ ಯಾವ ಕ್ಷೇತ್ರಕ್ಕೂ ರಾಜ್ಯ ಸರ್ಕಾರ ಕನಿಷ್ಠ ₹10 ಲಕ್ಷ ಬಿಡುಗಡೆಗೊಳಿಸಿಲ್ಲ. ಯಾವುದೇ ಇಲಾಖೆಗೂ ಹಣ ಬಿಡುಗಡೆಗೊಳಿಸುವ ಪರಿಸ್ಥಿತಿಯಲ್ಲಿ ಸರ್ಕಾರ ಇಲ್ಲ. ಬಡವರ ಬಗ್ಗೆ ಮಾತನಾಡಿದರೆ ಏನು ಪ್ರಯೋಜನ. ಅದು ಕಾರ್ಯರೂಪಕ್ಕ ಬರಬೇಕು. ಪ್ರತಿಯೊಂದು ವಿಚಾರದಲ್ಲಿ ಸರ್ಕಾರ ವೈಫಲ್ಯ ಕಂಡಿದೆ. ದೂರದೃಷ್ಟಿ ಇಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದರು.
ವರ್ಗಾವಣೆ ದಂಧೆ:
‘ರಾಜ್ಯ ಸರ್ಕಾರ ಹಲವು ಘೋಷಣೆಗಳನ್ನು ಮಾಡಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು ವ್ಯಾಪಕ ಪ್ರಚಾರ ಮಾಡುತ್ತಿದೆ. ರಾಜ್ಯದಲ್ಲಿ ಶೇ 60ರಷ್ಟು ವಾಡಿಕೆ ಮಳೆ ಕಡಿಮೆಯಾಗಿದೆ. 90ರ ದಶಕದ ನಂತರ ಇಷ್ಟೊಂದು ಕಡಿಮೆ ಮಳೆ ಎಂದೂ ಆಗಿರಲಿಲ್ಲ. ಭೀಕರವಾದ ಬರದ ಮುನ್ಸೂಚನೆಗಳಿವೆ’ ಎಂದರು.
105 ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಲು ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸುತ್ತೇವೆ ಎಂದು ಸಿ.ಎಂ ಹೇಳುತ್ತಿದ್ದಾರೆ. ಯಾವ ತಾಲ್ಲೂಕುಗಳಲ್ಲಿ ಪರಿಸ್ಥಿತಿ ಹೇಗಿದೆ? ಕುಡಿಯಲು ನೀರು ಇದೆಯೇ? ಜಾನುವಾರುಗಳಿಗೆ ಏನು ವ್ಯವಸ್ಥೆ ಮಾಡಬೇಕು? ಕನಿಷ್ಠ ಕುಡಿಯುವ ನೀರಿಗಾದರೂ ಗಂಭೀರ ಯೋಚನೆ ಮಾಡಬೇಕಿತ್ತು. ಈ ಕುರಿತು ಪ್ರಶ್ನಿಸಿದರೆ ಮುಖ್ಯಮಂತ್ರಿ, ಕಂದಾಯ ಸಚಿವರು ಪರಿಶೀಲಿಸುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಸಮರೋಪಾದಿಯಲ್ಲಿ ಕೆಲಸಗಳು ಆಗಬೇಕಿತ್ತು. ಆದರೆ, ಸರ್ಕಾರ ವರ್ಗಾವಣೆ ದಂಧೆಯಲ್ಲಿ ಮುಳುಗಿದೆ ಎಂದು ಗಂಭೀರ ಆರೋಪ ಮಾಡಿದರು.
ಈಗಿರುವ ಸ್ಥಳದಲ್ಲಿ ಮುಂದುವರೆಯಬೇಕಾದರೂ ಹಣ ಕೊಡಬೇಕಾದ ಪರಿಸ್ಥಿತಿ ಇದೆ ಎಂದು ಅನೇಕ ಅಧಿಕಾರಿಗಳು ಹೇಳಿದ್ದಾರೆ. ಸರ್ಕಾರದ ಕೃಪಾಕಟಾಕ್ಷದಲ್ಲಿಯೇ ವರ್ಗಾವಣೆ ನಡೆಯುತ್ತಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯೊಂದರಲ್ಲೇ 65 ಪಿಡಿಒಗಳು ವರ್ಗಾವಣೆಯ ವೇಟಿಂಗ್ ಲಿಸ್ಟ್‌ನಲ್ಲಿ ಇದ್ದಾರೆ. 120 ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿಂತಿದೆ. 60 ಜನ ಪಿಡಿಒಗಳು ರಿಪೋರ್ಟ್ ಮಾಡಿಕೊಳ್ಳಬೇಕು. ಅವರಿಗೆ ಸ್ಥಳ ನಿಯುಕ್ತಿ ಮಾಡಿಲ್ಲ. ಶೇ 6ರಷ್ಟು ವರ್ಗಾವಣೆ ಮಾಡಬಹುದು. ಆದರೆ, ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಶೇ 15ಕ್ಕಿಂತ ಹೆಚ್ಚಾಗಿದೆ ಎಂದರು.
ಮುಖ್ಯಮಂತ್ರಿಗಳಿಗೆ ಹೆಚ್ಚುವರಿ ವರ್ಗಾವಣೆ ಮಾಡಬೇಕೆಂದು ಕೊಟ್ಟಿರುವ ಪಟ್ಟಿ ಸೋರಿಕೆಯಾಗಿದೆ. ಈಗಿರುವ ಸ್ಥಳದಿಂದ ವರ್ಗಾವಣೆ ಮಾಡುತ್ತೇವೆ ಇಲ್ಲವಾದರೆ ಬಂದು ಮಾತಾಡಿ ಎನ್ನುವುದು ಇದರ ಅರ್ಥ. ಇಷ್ಟೊಂದು ವ್ಯಾಪಕವಾದ ಭ್ರಷ್ಟಾಚಾರ ವರ್ಗಾವಣೆಯಲ್ಲಿ ನಡೆದಿದೆ. ಮುಖ್ಯಮಂತ್ರಿ ಮೌನ ವಹಿಸಿದ್ದಾರೆ. ಅಧಿಕಾರಿಗಳು, ಸಚಿವರು ವರ್ಗಾವಣೆ ದಂಧೆಯಲ್ಲಿ ಪಾಲ್ಗೊಂಡಿರುವುದು ಆತಂಕಕಾರಿ ಸಂಗತಿ ಎಂದು ಹೇಳಿದರು.
ರಾಜ್ಯ, ಜಿಲ್ಲಾಧ್ಯಕ್ಷರ ನೇಮಕ:
‘ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರ ನೇಮಕ ಪ್ರಕ್ರಿಯೆ ಕೇಂದ್ರ ನಾಯಕತ್ವ ಮಾಡುತ್ತದೆ. ಅದಾದ ನಂತರ ಜಿಲ್ಲಾ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯುತ್ತದೆ. ಬೇರೆ ಬೇರೆ ಕಾರಣಗಳಿಂದ ತಡವಾಗಿದೆ. ಆದರೆ, ಎರಡೂ ಸದನಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದೇವೆ. ಪಕ್ಷ ಎಲ್ಲಾ ಹಂತಗಳಲ್ಲಿ ಪರಿಣಾಮಕಾರಿ, ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಚುನಾವಣೆಯಲ್ಲಿ ಸೋತ ನಂತರ ಸ್ವಲ್ಪ ವಿಳಂಬವಾಗಿದೆ ಎಂದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದರ ಬಗ್ಗೆ ಪಕ್ಷದ ಕೇಂದ್ರ ಚುನಾವಣಾ ಸಮಿತಿ ನಿರ್ಧಾರ ಕೈಗೊಳ್ಳುತ್ತದೆ. ಕಾಂಗ್ರೆಸ್ ಮುಕ್ತ ಆಗಬೇಕು ಅಂತ ನಾವು ಎಲ್ಲೂ ಹೇಳಿಲ್ಲ. ಕಾಂಗ್ರೆಸ್ ಮಾನಸಿಕತೆ ಮುಕ್ತವಾಗಬೇಕು ಅಂತ ಹೇಳಿದ್ದೆವು. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷ ಇರಬಾರದು ಎಂದು ಎಲ್ಲೂ ಹೇಳಿಲ್ಲ ಎಂದು ಸಚಿವ ಈಶ್ವರ ಬಿ. ಖಂಡ್ರೆಯವರ ಹೇಳಿಕೆಗೆ ಪ್ರತಿಕ್ರಿಯಿಸಿದರು.
ಮಳೆ ಬರುವ ಮುಂಚೆ ಗುಡುಗು, ಮಿಂಚು ಬರುತ್ತದೆ. ರಾಜಕಾರಣದಲ್ಲೂ ಹೀಗಾಗುತ್ತದೆ. ರಾಜ್ಯದ ಮುಖಂಡರು, ಕೇಂದ್ರದ ಮುಖಂಡರು, ಕೇಂದ್ರ ಸಚಿವ ಭಗವಂತ ಖೂಬಾ ಹಾಗೂ ಶಾಸಕ ಪ್ರಭು ಚವಾಣ್ ಅವರನ್ನು ಕರೆದು ಮಾತಾನಾಡುತ್ತಾರೆ. ಶೀಘ್ರವೇ ಸಮಸ್ಯೆ ಬಗೆಹರಿಯುತ್ತದೆ. ಪಕ್ಷದಲ್ಲಿ ಶಿಸ್ತು ಸಮಿತಿ ಇದೆ. ದೂರುಗಳು ಬಂದರೆ ಪಕ್ಷ ಕ್ರಮ ಕೈಗೊಳ್ಳುತ್ತದೆ. ಇದು ಕಾಲಕಾಲಕ್ಕೆ ನಡೆಯುತ್ತ ಇರುತ್ತದೆ ಎಂದರು.
ಬೀದರ್ ಡಿಸಿಸಿ ಬ್ಯಾಂಕ್ ಚುನಾವಣೆ ಬಗ್ಗೆ ನಾನೇನೂ ಹೇಳಲಾರೆ. ಪಕ್ಷದ ಜಿಲ್ಲಾ ಘಟಕ ಅದರ ಬಗ್ಗೆ ತೀರ್ಮಾನಿಸುತ್ತದೆ ಎಂದಷ್ಟೇ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವಾನಂದ ಮಂಠಾಳಕರ, ಕಲಬುರಗಿ ವಿಭಾಗ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಪಾಟೀಲ, ಒಬಿಸಿ ಮೋರ್ಚಾ ಅಧ್ಯಕ್ಷ ಅನಿಲ್ ಭೂಸಾರೆ, ವಿಜಯಕುಮಾರ ಪಾಟೀಲ ಕಣಜಿಕರ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.