ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಸಮಯಕ್ಕೆ ಸರಿಯಾಗಿ ಬಸ್‌ ಓಡಿಸಲು ಒತ್ತಾಯ

ಜಿಲ್ಲೆಯಲ್ಲಿ ವಸತಿ ಬಸ್‌ಗಳ ಸೇವೆ ಆರಂಭ
Last Updated 4 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಬೀದರ್: ಪ್ರೌಢ ಶಾಲೆ ಹಾಗೂ ಕಾಲೇಜುಗಳು ಪುನರಾರಂಭವಾಗಿ ತರಗತಿಗಳೂ ನಡೆಯುತ್ತಿವೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳು ಗ್ರಾಮೀಣ ಪ್ರದೇಶಕ್ಕೆ ಸಮಯಕ್ಕೆ ಸರಿಯಾಗಿ ಬಾರದ ಕಾರಣ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲೂ ಈ ಸಮಸ್ಯೆ ಎದುರಾಗಿದೆ.

ಚಿಟಗುಪ್ಪ ತಾಲ್ಲೂಕಿನ ಮನ್ನಾಎಖ್ಖೆಳ್ಳಿಯಿಂದ ನಿತ್ಯ ನೂರಾರು ವಿದ್ಯಾರ್ಥಿಗಳು ಬೀದರ್‌ನ ಶಾಲಾ, ಕಾಲೇಜುಗಳಿಗೆ ಬರುತ್ತಾರೆ. ಬಸ್‌ಗಳು ಸಮಯಕ್ಕೆ ಬಾರದ ಕಾರಣ ವಿದ್ಯಾರ್ಥಿಗಳು ಬಹಳ ಹೊತ್ತಿನವರೆಗೂ ಬಸ್‌ ನಿಲ್ದಾಣದಲ್ಲಿಯೇ ಕಾಯಬೇಕಾಗುತ್ತಿದೆ. ಕೆಲವೊಮ್ಮೆ ತರಗತಿಗಳೂ ತಪ್ಪುತ್ತಿವೆ.

ಔರಾದ್‌ ತಾಲ್ಲೂಕಿನ ವಡಗಾಂವ, ಸಂತಪುರ, ಕಂದಗೂಳ, ಬಸವಕಲ್ಯಾಣ ತಾಲ್ಲೂಕಿನ ಅನೇಕ ಗ್ರಾಮಗಳ ವಿದ್ಯಾರ್ಥಿಗಳು ಹೆಚ್ಚು ತೊಂದರೆ ಅನುಭವಿಸುತ್ತಿದ್ದಾರೆ. ಕೋವಿಡ್ ಕಾರಣ ಮೊದಲೇ ಶಾಲಾ ಕಾಲೇಜಗಳು ವಿಳಂಬವಾಗಿ ಆರಂಭವಾಗಿವೆ. ಬಸ್‌ಗಳು ಕೈಕೊಡುತ್ತಿರುವ ಕಾರಣ ಹೊಸ ಸಮಸ್ಯೆ ಶುರುವಾಗಿದೆ.

‘ಅನೇಕ ವಿದ್ಯಾರ್ಥಿಗಳು ಕಾದು ಸುಸ್ತಾಗಿ ಖಾಸಗಿ ವಾಹನಗಳಲ್ಲಿ ಸಂಜೆ ಮನೆ ಸೇರುತ್ತಿದ್ದಾರೆ. ಸಾರಿಗೆ ಸಂಸ್ಥೆಯ ಅಧಿಕಾರಿಗಳು ಸಮಯಕ್ಕೆ ಬಸ್‌ ಓಡಿಸಲು ಕ್ರಮ ಕೈಗೊಳ್ಳಬೇಕು ಎಂದು ಎಸ್‌ಎಫ್‌ಐ ಜಿಲ್ಲಾ ಘಟಕ ಅಧ್ಯಕ್ಷ ಅರುಣ ಕೋಡಗೆ ಆಗ್ರಹಿಸುತ್ತಾರೆ.

‘ಹಳೆಯ ಪಾಸ್‌ ಹೊಂದಿರುವ ವಿದ್ಯಾರ್ಥಿಗಳಿಗೆ ಫೆಬ್ರುವರಿ ಅಂತ್ಯದ ವರೆಗೆ ಸಂಚರಿಸಲು ಅವಕಾಶ ನೀಡಲಾಗಿದೆ. ಅದನ್ನು ವಾರ್ಷಿಕ ಪರೀಕ್ಷೆ ನಡೆಯುವ ವರೆಗೂ ವಿಸ್ತರಿಸಬೇಕು. ಹೊಸ ಪಾಸ್‌ಗಳನ್ನು ಆದಷ್ಟು ಬೇಗ ವಿತರಣೆ ಮಾಡಬೇಕು’ ಎಂದು ವಿದ್ಯಾರ್ಥಿ ರತ್ನದೀಪ ಕಸ್ತೂರೆ ಒತ್ತಾಯಿಸುತ್ತಾರೆ.

ಜಿಲ್ಲೆಯ ಆರು ಡಿಪೊಗಳ ಬಸ್‌ಗಳು ಮೊದಲು 548 ಮಾರ್ಗಗಳಲ್ಲಿ ಸಂಚರಿಸುತ್ತಿದ್ದವು. ಈಗಾಗಲೇ 493 ಮಾರ್ಗಗಳಲ್ಲಿ ಮರು ಸಂಚಾರ ಅರಂಭಿಸಿವೆ. ಕೋವಿಡ್‌ ಮುಂಚೆ ನಿತ್ಯ ಸರಾಸರಿ ₹ 55 ಲಕ್ಷ ಆದಾಯ ಸಂಗ್ರಹವಾಗುತ್ತಿತ್ತು. ಪ್ರಸ್ತುತ ₹ 50 ಲಕ್ಷ ಮಾತ್ರ ಸಂಗ್ರಹವಾಗುತ್ತಿದೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಇರುವ ಮಾರ್ಗಗಳಲ್ಲಿ ಹೆಚ್ಚು ಬಸ್‌ಗಳನ್ನು ಓಡಿಸುತ್ತಿಲ್ಲ.

‘ಗುರುವಾರ ಸಾರಿಗೆ ಸಂಸ್ಥೆಯ ಅಧಿಕಾರಿಗಳ ಸಭೆ ನಡೆಸಲಾಗಿದೆ. ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಸಮಯಕ್ಕೆ ಸರಿಯಾಗಿ ಬಸ್‌ಗಳನ್ನು ಓಡಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ’ ಎಂದು ಎನ್‌ಇಕೆಆರ್‌ಟಿಸಿ ಬೀದರ್‌ ವಿಭಾಗೀಯ ನಿಯಂತ್ರಣಾಧಿಕಾರಿ ಚಂದ್ರಕಾಂತ ಫುಲೇಕರ್‌ ಹೇಳುತ್ತಾರೆ.

‘ಮೊದಲಿನ ಮಾರ್ಗದಲ್ಲಿದ್ದ ಎಲ್ಲ ವಸತಿ ಬಸ್‌ಗಳನ್ನು ಆರಂಭಿಸಲಾಗಿದೆ. 150 ಸಿಬ್ಬಂದಿ ಕೊರತೆ ಇದ್ದರೂ ಹೊಂದಾಣಿಕೆ ಮಾಡಿಕೊಂಡು ಬಸ್‌ಗಳನ್ನು ಓಡಿಸಲಾಗುತ್ತಿದೆ. ಹಳೆಯ ಬಸ್‌ಪಾಸ್ ಹೊಂದಿರುವ ವಿದ್ಯಾರ್ಥಿಗಳಿಗೆ ಫೆಬ್ರುವರಿ 28ರ ವರೆಗೆ ಬಸ್‌ಗಳಲ್ಲಿ ಸಂಚರಿಸಲು ಅವಕಾಶ ನೀಡಲಾಗಿದೆ’ ಎನ್ನುತ್ತಾರೆ ಅವರು.

ಕೋವಿಡ್‌ ನಂತರ ಬಾರದ ಬಸ್
ಬೀದರ್‌:
ತಾಲ್ಲೂಕಿನ ಕಪಲಾಪುರ(ಎ) ಗ್ರಾಮಕ್ಕೆ ನಿತ್ಯ ಎರಡು ಬಾರಿ ಬಂದು ಹೋಗುತ್ತಿದ್ದ ಸಾರಿಗ್‌ ಬಸ್‌ ಕೋವಿಡ್‌ ನಂತರ ಬರುತ್ತಿಲ್ಲ. ಸರ್ಕಾರಿ ಕಚೇರಿ, ಮಾರುಕಟ್ಟೆ ಕೆಲಸಗಳಿಗೆ ನಗರಕ್ಕೆ ಬರುವ ಗ್ರಾಮಸ್ಥರು ಹಾಗೂ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಇದರಿಂದ ತೊಂದರೆಯಾಗಿದೆ.

ಗ್ರಾಮಕ್ಕೆ ಬಸ್‌ ಸಂಚಾರ ಆರಂಭಿಸುವಂತೆ ಈಗಾಗಲೇ ಬೀದರ್‌ ಸಾರಿಗೆ ಘಟಕದ ವ್ಯವಸ್ಥಾಪಕರಿಗೆ ಮನವಿಪತ್ರ ಸಲ್ಲಿಸಲಾಗಿದೆ. ಆದರೆ, ಅಧಿಕಾರಿಗಳು ಗ್ರಾಮಸ್ಥರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಯುವ ಕಾಂಗ್ರೆಸ್‌ ಬೀದರ್‌ ದಕ್ಷಿಣದ ಮುಖಂಡ ಇಮ್ರಾನ್‌ ಖಾನ್ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT