ಭಾನುವಾರ, ಜನವರಿ 26, 2020
24 °C

ಶರಣ ಸಂಸ್ಕೃತಿ ಉತ್ಸವಕ್ಕೆ ನಗರ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಶುಕ್ರವಾರದಿಂದ ಮೂರು ದಿನಗಳ ಕಾಲ ನಡೆಯಲಿರುವ ಸಹಜ ಶಿವಯೋಗ ಹಾಗೂ ಶರಣ ಸಂಸ್ಕೃತಿ ಉತ್ಸವಕ್ಕೆ ಪರಂಪರೆ ನಗರಿ ಸಜ್ಜುಗೊಂಡಿದೆ.

ಉತ್ಸವಕ್ಕೆ ಇಲ್ಲಿಯ ಬಿ.ವಿ.ಭೂಮರೆಡ್ಡಿ ಕಾಲೇಜು ಆವರಣದಲ್ಲಿ ಬೃಹತ್ ಶಾಮಿಯಾನ ಹಾಕಲಾಗಿದೆ. ವೇದಿಕೆ, ಮಂಟಪ, ಮಹಾದ್ವಾರಗಳನ್ನು ನಿರ್ಮಿಸಲಾಗಿದೆ.

ವೇದಿಕೆಗೆ ಇಳಕಲ್‌ನ ಲಿಂ.ಡಾ.ಮಹಾಂತ ಸ್ವಾಮೀಜಿ, ಮಂಟಪಕ್ಕೆ ಗದಗಿನ ಡಾ. ಸಿದ್ಧಲಿಂಗ ಸ್ವಾಮೀಜಿ, ಮೂರು ಮಹಾದ್ವಾರಗಳಿಗೆ ಇದೇ ವರ್ಷ ನಿಧನರಾದ ಬಸವ ಕೇಂದ್ರದ ಗುರುಶಾಂತಪ್ಪ ಲಿಂಗದಳ್ಳಿ, ಚಂದ್ರಪ್ಪ ಜಾಬಾ ಹಾಗೂ ವಿಶ್ವನಾಥ ಬಿರಾದಾರ ಅವರ ಹೆಸರು ಇಡಲಾಗಿದೆ.

ಶಾಮಿಯಾನದಲ್ಲಿ 2,500 ಕುರ್ಚಿಗಳನ್ನು ಹಾಕಲಾಗಿದೆ. ನೆಲದ ಮೇಲೆ ಕಾರ್ಪೇಟ್ ಕೂಡ ಹಾಸಲಾಗಿದೆ. ಕುರ್ಚಿಗಳೂ ಸೇರಿದಂತೆ ಒಟ್ಟು ಐದು ಸಾವಿರ ಜನ ಕುಳಿತುಕೊಳ್ಳಬಹುದಾಗಿದೆ.

ಕಾರ್ಯಕ್ರಮ ಸ್ಥಳದಲ್ಲಿ ಪುಸ್ತಕ, ಶರಣರ ಭಾವಚಿತ್ರ, ಇಷ್ಟಲಿಂಗ, ವಿಭೂತಿ, ರುದ್ರಾಕ್ಷಿ ಮಾರಾಟ ಮಳಿಗೆಗಳನ್ನು ನಿರ್ಮಿಸಲಾಗಿದೆ. ಮಂಟಪದಲ್ಲಿ ಶರಣರ ವಚನಗಳು ಹಾಗೂ ಭಾವಚಿತ್ರಗಳನ್ನು ಅಳವಡಿಸಲಾಗಿದೆ.

ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಮುರುಘರಾಜೇಂದ್ರ ಶರಣರ ಸಾನ್ನಿಧ್ಯದಲ್ಲಿ ಶರಣ ಸಂಸ್ಕೃತಿ ಉತ್ಸವ ಪ್ರಯುಕ್ತ ವಿವಿಧ ಗೋಷ್ಠಿಗಳು ನಡೆಯಲಿವೆ. ಮೂರು ದಿನಗಳ ಕಾರ್ಯಕ್ರಮದಲ್ಲಿ ಸುಮಾರು 25 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸುತ್ತಾರೆ ಯುವ ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ.

ನಗರದೆಲ್ಲೆಡೆ ಸ್ವಾಗತ ಕೋರುವ ಕಟೌಟ್, ಬ್ಯಾನರ್, ಫ್ಲೆಕ್ಸ್‌ಗಳನ್ನು ಅಳವಡಿಸಲಾಗಿದೆ. ಕಮಾನುಗಳನ್ನು ನಿರ್ಮಿಸಲಾಗಿದೆ. ಷಟ್‌ಸ್ಥಲ ಧ್ವಜಗಳನ್ನು ಕಟ್ಟಲಾಗಿದೆ ಎಂದು ಹೇಳುತ್ತಾರೆ.

ಉತ್ಸವದ ಯಶಸ್ಸಿಗೆ ಸ್ವಾಗತ ಸೇರಿದಂತೆ ವಿವಿಧ ಸಮಿತಿಗಳನ್ನು ರಚಿಸಲಾಗಿದೆ. ಎಲ್ಲ ಸಮಿತಿಗಳು ಉತ್ಸವದ ಯಶಸ್ಸಿಗೆ ಹಗಲಿರುಳು ಶ್ರಮಿಸುತ್ತಿವೆ. ಅತಿಥಿಗಳಿಗೆ ನಗರದ ವಸತಿಗೃಹಗಳಲ್ಲಿ ಹಾಗೂ ಹೊರಗಿನಿಂದ ಬರುವ ಭಕ್ತರಿಗೆ ಗುರುದ್ವಾರದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಭಕ್ತರ ಅನುಕೂಲಕ್ಕಾಗಿ ನಗರದ ವಿವಿಧೆಡೆಯಿಂದ ಬಿ.ವಿ.ಬಿ. ಕಾಲೇಜುವರೆಗೆ ನಗರ ಸಾರಿಗೆ ಬಸ್‌ಗಳ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ತಿಳಿಸುತ್ತಾರೆ.

ಸಹಜ ಶಿವಯೋಗದಲ್ಲಿ ಮೂರೂ ದಿನ ಉಪಾಹಾರದಲ್ಲಿ ಸರದಿಯಂತೆ ಶಿರಾ ಮತ್ತು ಉಪ್ಪಿಟ್ಟು, ಸುಸಲಾ, ಚಿತ್ರಾನ್ನ ಇರಲಿದೆ. ಮಧ್ಯಾಹ್ನ ಹಾಗೂ ಸಂಜೆ ಅನ್ನ, ಸಾಂಬಾರು, ಕುಟ್ಟಿದ ಗೋಧಿ ಹುಗ್ಗಿಯ ಪ್ರಸಾದ ಇರಲಿದೆ ಎಂದು ವಿವರಿಸುತ್ತಾರೆ.

ಪ್ರತಿಕ್ರಿಯಿಸಿ (+)