ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮನ್ವಯದಿಂದ ಕಾರ್ಯ ನಿರ್ವಹಿಸಿ

ಪ್ರಗತಿ ಪರಿಶೀಲನಾ ಸಭೆ: ಅಧಿಕಾರಿಗಳಿಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೂಚನೆ
Last Updated 4 ಸೆಪ್ಟೆಂಬರ್ 2021, 3:52 IST
ಅಕ್ಷರ ಗಾತ್ರ

ಬೀದರ್‌: ‘ಕೃಷಿ, ತೋಟಗಾರಿಕೆ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಅಧಿಕಾರಿಗಳು ರೈತರಿಗಾಗಿಯೇ ಇರುವ ಕಾರಣ ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು. ಕೃಷಿ ಕ್ಷೇತ್ರದಲ್ಲಾದ ಸಂಶೋಧನೆ ಹಾಗೂ ಹೊಸ ತಂತ್ರಜ್ಞಾನಗಳ ಕುರಿತು ಗ್ರಾಮ ಮಟ್ಟದಲ್ಲಿ ರೈತರಿಗೆ ತಿಳಿವಳಿಕೆ ನೀಡುವ ಕೆಲಸ ಮಾಡಬೇಕು’ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಸೂಚಿಸಿದರು.

ಇಲ್ಲಿಯ ಜಿಲ್ಲಾ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಂಬಂಧ ಇಲ್ಲದಂತೆಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಜಿಲ್ಲಾ ಪಂಚಾಯಿತಿ ಸಿಇಒ ಇಲಾಖೆಗಳ ಅಧಿಕಾರಿಗಳನ್ನು ಜೋಡಿಸಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮುಂದಾಗಬೇಕು’ ಎಂದರು.

‘ದೇಶದಲ್ಲಿ ಮಿಶ್ರ ಬೆಳೆ ಹಾಗೂ ಉಪ ಕಸುಬು ಮಾಡಿಕೊಂಡಿರುವ ಒಬ್ಬ ರೈತ ಕೂಡ ಆತ್ಮಹತ್ಯೆ ಮಾಡಿಕೊಂಡಿಲ್ಲ ಎನ್ನುವುದು ಸಮೀಕ್ಷೆಯಿಂದ ದೃಢಪಟ್ಟಿದೆ.ಹೀಗಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇರುವಂತಹ ಕೃಷಿ ಉತ್ಪನ್ನಗಳನ್ನು ಬೆಳೆದು ಬ್ರ್ಯಾಂಡಿಂಗ್ ಮಾಡಿ ಮಾರಾಟ ಮಾಡಿ ಹೆಚ್ಚಿನ ಆದಾಯ ಪಡೆದುಕೊಳ್ಳಲು ಅನುಕೂ ಲವಾಗುವಂತೆ ರೈತರಿಗೆ ಮಾರ್ಗದರ್ಶನ ನೀಡಬೇಕಿದೆ’ ಎಂದು ತಿಳಿಸಿದರು.

‘ಅಧಿಕಾರಿಗಳು ತಂಡ ರಚಿಸಿಕೊಂಡು ಪ್ರತಿ ವಾರ ಒಂದು ವಿಷಯವನ್ನು ಆಯ್ಕೆ ಮಾಡಿಕೊಂಡು ಗ್ರಾಮ ಪಂಚಾಯಿತಿಗಳ ನೋಟಿಸ್‌ ಬೋರ್ಡ್‌ಗಳಲ್ಲಿ ಮಾಹಿತಿ ಬರೆಯಬೇಕು. ನಂತರ ರೈತರಿಗೆ ಗ್ರಾಮದಲ್ಲೇ ತಿಳಿವಳಿಕೆ ನೀಡಬೇಕು’ ಎಂದು ಸಲಹೆ ನೀಡಿದರು.

‘ರಾಯಚೂರು ತಾಲ್ಲೂಕಿನ ಸಿಂಧನೂರಿನ ರೈತರೊಬ್ಬರು ನುಗ್ಗೆಕಾಯಿ ಸೊಪ್ಪು ಒಣಗಿಸಿ ವಿದೇಶಕ್ಕೆ ರಫ್ತು ಮಾಡಿ ಉತ್ತಮ ಆದಾಯ ಪಡೆಯುತ್ತಿದ್ದಾರೆ. ನುಗ್ಗೆ ಸೊಪ್ಪು ಪ್ರತಿ 100 ಎಂಎಲ್‌ಗೆ ₹ 1,500ಗೆ ಮಾರಾಟವಾಗುತ್ತಿದೆ. ಸಿರಿಧಾನ್ಯ ಹಾಗೂ ಎಣ್ಣೆಕಾಳಿಗೂ ವಿದೇಶದಲ್ಲಿ ಅಪಾರ ಬೇಡಿಕೆ ಇದೆ. ಗುಣಮಟ್ಟದ ಉತ್ಪನ್ನ ಬೆಳೆಸಿ ವಿದೇಶಕ್ಕೆ ರಫ್ತು ಮಾಡಲು ರೈತರಿಗೆ ಉತ್ತೇಜನ ನೀಡಬೇಕು’ ಎಂದು ಹೇಳಿದರು.

‘ಕೇಂದ್ರ ಸರ್ಕಾರ ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಯ ಉದ್ದೇಶದಿಂದ ಕೃಷಿ ಮೂಲಸೌಕರ್ಯ ನಿಧಿಯ ಅಡಿಯಲ್ಲಿ ₹ 1 ಲಕ್ಷ ಕೋಟಿ ಅನುದಾನವನ್ನು ಮೀಸಲಿಟ್ಟಿದೆ. ಸಹಕಾರ ಸಂಘಗಳು ಹಾಗೂ ಸ್ವಸಹಾಯ ಸಂಘಗಳು ಈ ಯೋಜನೆಯ ಪ್ರಯೋಜನ ಪಡೆದು ಸಂಸ್ಕರಣಾ ಘಟಕಗಳನ್ನು ಆರಂಭಿಸಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಬೇಕು ಹಾಗೂ ಆದಾಯ ಹೆಚ್ಚಿಸಿಕೊಳ್ಳಬೇಕು’ ಎಂದು ಹೇಳಿದರು.

ತೋಟಗಾರಿಕೆ ಉಪ ನಿರ್ದೇಶಕ ವಿಶ್ವನಾಥ ಝಿಳ್ಳೆ ಮಾತನಾಡಿ, ‘ಜಿಲ್ಲೆಯಲ್ಲಿ 31 ಪಾಲಿಹೌಸ್‌ಗಳಿವೆ. ದ್ರಾಕ್ಷಿ, ಬಾಳೆ ಹಾಗೂ ದಾಳಿಂಬೆ ವಿದೇಶಕ್ಕೆ ರಫ್ತು ಆಗುತ್ತಿದೆ’ ಎಂದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ತಾರಾಮಣಿ ಹಾಗೂ ಜನವಾಡ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಸುನೀಲಕುಮಾರ್ ಎನ್‌.ಎಂ. ಅವರು ಕೃಷಿ ಹಾಗೂ ತೋಟಗಾರಿಕೆಗೆ ಸಂಬಂಧಿಸಿದ ಮಾಹಿತಿಯನ್ನು ಸಚಿವರಿಗೆ ನೀಡಿದರು.

ಸಚಿವ ಪ್ರಭು ಚವಾಣ್, ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬು ವಾಲಿ, ಜಿ.ಪಂ ಸಿಇಒ ಜಹೀರಾ ನಸೀಮ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೋಪಾಲ ಬ್ಯಾಕೋಡ್‌ ಇದ್ದರು.

ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸೋಯಾಬಿನ್ ಬಿತ್ತನೆ: ಮೆಚ್ಚುಗೆ

ಬೀದರ್‌: ಮಾರುಕಟ್ಟೆಯಲ್ಲಿ ಲಾಭದಾಯಕ ಎಣ್ಣೆ ಕಾಳು ಬೆಳೆ ಎಂದು ಗುರುತಿಸಿಕೊಂಡಿರುವ ಸೋಯಾಬಿನ್ ಬೆಳೆಯನ್ನು ಬೀದರ್ ಜಿಲ್ಲೆಯಲ್ಲಿ 2,02 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿರುವುದು ಪ್ರಗತಿಯ ಲಕ್ಷಣವಾಗಿದೆ’ ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ದೇಶದಲ್ಲಿ ಎಣ್ಣೆ ಕಾಳು ಬೆಳೆಗಳಿಗೆ ಹೆಚ್ಚಿನ ಬೇಡಿಕೆ ಇದೆ. ವಿವಿಧ ಎಣ್ಣೆ ಕಾಳುಗಳನ್ನು ಬೆಳೆಯುವಂತಹ ವಾತಾವರಣವು ನಮ್ಮ ದೇಶದಲ್ಲಿದೆ. ಅಂತಹ ಮಣ್ಣು ಕೂಡ ಇದೆ. ಇಂತಹ ವಿಷಯಗಳನ್ನು ರೈತರಿಗೆ ತಿಳಿಸಿ ಲಾಭದಾಯಕ ಎಣ್ಣೆ ಕಾಳುಗಳ ಬೆಳೆಗಳನ್ನು ಬೆಳೆಯಲು ಪ್ರೋತ್ಸಾಹ ನೀಡಬೇಕು’ ಎಂದರು.

ರೈತರ ಆದಾಯ ದ್ವಿಗುಣವಾಗಲು ಒಳ್ಳೆಯ ಮಾರುಕಟ್ಟೆ ಕಲ್ಪಿಸಬೇಕು. ಕೃಷಿ ಮತ್ತು ತೋಟಗಾರಿಕಾ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಚಿಂತನ ಮಂಥನ ನಡೆಸಿ ರೈತರಿಗೆ ಸಹಾಯ ಮಾಡಬೇಕು. ಲಾಭದಾಯಕ ಬೆಳೆ ತೆಗೆಯುವ ಮತ್ತು ಮಾರುಕಟ್ಟೆಯ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸಲು ಮುಂದಾಗಬೇಕು’ ಎಂದು ಸಲಹೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT