ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ನಗ್ನ ವಿಡಿಯೊ ಪ್ರದರ್ಶಿಸಿ ಗಣ್ಯರ ಬ್ಲ್ಯಾಕ್‌ಮೇಲ್‌

ಫೇಸ್‌ಬುಕ್‌ ಗೆಳತಿಯರಿಂದ ನೆಮ್ಮದಿ ಕಳೆದುಕೊಂಡ ಬೀದರ್‌ನ 15 ಮಂದಿ
Last Updated 23 ಜೂನ್ 2022, 19:30 IST
ಅಕ್ಷರ ಗಾತ್ರ

ಬೀದರ್‌: ಸಾಮಾಜಿಕ ಜಾಲತಾಣದಲ್ಲಿ ಪ್ರಭಾವಿ ಪುರುಷರನ್ನು ಪರಿಚಯಿಸಿಕೊಂಡು ಸ್ನೇಹ ಬೆಳೆಸಿ ಅವರ ನಗ್ನ ವಿಡಿಯೊ ಚಿತ್ರೀಕರಿಸಿ ನಂತರ ಹಣ ವಸೂಲಿ ಮಾಡುವ ಜಾಲ ಸಕ್ರೀಯವಾಗಿದೆ. ಇಂತಹ ಜಾಲದಲ್ಲಿ ಜಿಲ್ಲೆಯ 15 ಮಂದಿ ಸಿಲುಕಿದ್ದು, ಮರ್ಯಾದೆ ಉಳಿಸಿಕೊಳ್ಳಲು ಹಣವನ್ನೂ ಕಳೆದುಕೊಂಡಿದ್ದಾರೆ.

ಉತ್ತರಭಾರತ ಮೂಲದ ಜಾಲವೊಂದು ಯುವತಿಯ ಚಂದದ ಚಿತ್ರದ ಡಿಪಿ ಇಟ್ಟುಕೊಂಡು ಮಧ್ಯ ವಯಸ್ಕರು, ರಾಜಕಾರಣಿಗಳು, ಉದ್ಯಮಿಗಳು ಹಾಗೂ ಪ್ರಭಾವಿಗಳನ್ನು ಗುರಿ ಮಾಡಿಕೊಂಡು ಹಣ ಕೀಳುವ ಕೆಲಸ ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪರಿಚಯಿಸಿಕೊಂಡ 15, 20 ದಿನಗಳಲ್ಲೇ ಎಲ್ಲ ಬಗೆಯ ಮಾಹಿತಿ ಕಲೆ ಹಾಕಿ ಬ್ಯಾಂಕ್‌ ಖಾತೆಗೂ ಕನ್ನ ಹಾಕುತ್ತಿದೆ.

ಜಾಲದ ತಂಡದಲ್ಲಿರುವ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ ಒಮ್ಮೆ ಪರಿಚಯಿಸಿಕೊಂಡರೆ ಸಾಕು. ಹಣ ಕಿತ್ತುಕೊಳ್ಳುವವರೆಗೂ ವಿಶ್ರಮಿಸುವುದಿಲ್ಲ. ಇಂತಹ ಜಾಲಕ್ಕೆ ಸಿಲುಕಿರುವ ಬೀದರ್‌ನ ಕೆಲವರು ಮಾನಸಿಕ ನೆಮ್ಮದಿ ಹಾಳು ಮಾಡಿಕೊಂಡಿದ್ದಾರೆ. ಒಬ್ಬರು ತೀವ್ರ ಆತಂಕಕ್ಕೆ ಒಳಗಾಗಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದಾರೆ.

ಬಿಜೆಪಿ ಮುಖಂಡ ಹಾಗೂ ಬಿಎಸ್‌ಎನ್‌ಎಲ್‌ ಸಲಹಾ ಸಮಿತಿ ಸದಸ್ಯರೂ ಆದ ಸಂಗಮೇಶ ನಾಸಿಗಾರ ಅವರನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿಕೊಂಡ ಯುವತಿಯೊಬ್ಬಳು ಬ್ಲ್ಯಾಕ್‌ಮೇಲ್‌ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

‘15 ದಿನಗಳ ಹಿಂದೆ ಫೇಸ್‌ಬುಕ್‌ ನೋಡುತ್ತ ಕುಳಿತಿದ್ದಾಗ ಯುವತಿಯೊಬ್ಬಳು ಫ್ರೆಂಡ್‌ ರಿಕ್ವೆಸ್ಟ್ ಕಳಿಸಿದಳು. ಅದಕ್ಕೆ ಪ್ರತಿಯಾಗಿ ನಾನು ಹಾಯ್.. ಎನ್ನುವ ಸಂದೇಶ ರವಾನಿಸಿದೆ. ಮರುದಿನ ಗುಡ್‌ ಮಾರ್ನಿಂಗ್‌, ಇನ್ನೊಂದು ದಿನ ಗುಡ್‌ ನೈಟ್‌ ಎನ್ನುವ ಸಂದೇಶ ಕಳಿಸಿದಳು. ನಾನು ಸಹ ಸಂದೇಶಕ್ಕೆ ಪ್ರತಿಕ್ರಿಯೆ ನೀಡಿದೆ’ ಎಂದು ಸಂಗಮೇಶ ನಾಸಿಗಾರ ತಿಳಿಸಿದರು.

‘ಫೇಸ್‌ಬುಕ್‌ನಲ್ಲಿ ಬೆಂಗಳೂರಿನವಳು ಎಂದು ಪರಿಚಯಿಸಿಕೊಂಡ ಯುವತಿ ನನ್ನ ವಾಟ್ಸ್‌ಆ್ಯಪ್‌ ನಂಬರ್‌ ಕೇಳಿದಳು. ನಂತರ ಚಾಟಿಂಗ್‌ ಸಹ ಶುರು ಮಾಡಿದಳು. ಎರಡು ದಿನಗಳ ನಂತರ ವಿಡಿಯೊ ಕಾಲ್‌ ಮಾಡಿ ಆತ್ಮೀಯವಾಗಿ ಮಾತನಾಡುತ್ತ ಒಮ್ಮೆಲೆ ನಗ್ನಳಾದಳು. ನನಗೂ ತನ್ನಂತೆಯೇ ಮಾಡುವಂತೆ ಹೇಳಿದಳು. ಆದರೆ, ನಾನು ಒಪ್ಪಲಿಲ್ಲ. ಸ್ಪಷ್ಟವಾಗಿ ನಿರಾಕರಿಸಿದೆ’ ಎಂದು ಹೇಳಿದರು.

‘ನೀನು ಬಟ್ಟೆ ಕಳಿಯದೇ ಇರಬಹುದು. ನಿನ್ನ ನಗ್ನ ಕೃತಕ ವಿಡಿಯೊ ರೆಡಿ ಮಾಡಿ ಅದನ್ನು ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿ ನಿನ್ನ ಗೆಳೆಯರೆಲ್ಲರಿಗೂ ಕಳಿಸಿಕೊಡುವೆ. ಸಾಮಾಜಿಕ ಜಾಲ ತಾಣದಲ್ಲಿ ವೈರಲ್‌ ಮಾಡುವೆ ಎಂದು ಬೆದರಿಕೆ ಹಾಕಿದಳು. ಹಣದ ಬೇಡಿಕೆಯನ್ನೂ ಇಟ್ಟಳು. ಇದೇ ಯುವತಿ ಹಲವರಿಗೆ ಈ ರೀತಿ ಬ್ಲ್ಯಾಕ್‌ಮೇಲ್ ಮಾಡಿರುವುದು ಗೊತ್ತಾಗಿದೆ. ಇಂತಹ ಬ್ಲ್ಯಾಕ್‌ಮೇಲರ್‌ಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಬೀದರ್‌ನ ಸೈಬರ್‌ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ’ ಎಂದು ತಿಳಿಸಿದರು.

ರಾಜಸ್ಥಾನ, ಜಾರ್ಖಂಡ್ ಮೂಲದ ಜಾಲದ ತಂಡದಲ್ಲಿರುವವರು ಯುವತಿಯರನ್ನು ಮುಂದೆ ಮಾಡಿಕೊಂಡು ಮೋಸ ಮಾಡುತ್ತಿದ್ದಾರೆ. ಬೀದರ್‌ನ 15 ಜನರಿಗೆ ಈ ರೀತಿ ಮೋಸ ಮಾಡಿರುವ ದೂರುಗಳು ಬಂದಿವೆ. ಸೈಬರ್ ‍ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಅಪರಾಧ ಕೃತ್ಯದಲ್ಲಿ ತೊಡಗಿದವರು ಬೇರೆಯವರ ನಂಬರ್, ವಿಳಾಸ ಕೊಟ್ಟು ತೆರೆಮರೆಯಲ್ಲಿ ಇಂತಹ ಕೆಲಸ ಮಾಡುತ್ತಿದ್ದಾರೆ. ಇಂಥವರನ್ನು ಹುಡುಕಿ ತೆಗೆಯಲು ಬಹಳ ಸಮಯ ಬೇಕಾಗುತ್ತದೆ. ಸಾರ್ವಜನಿಕರು ಅಪರಿಚಿತರಿಗೆ ಮೊಬೈಲ್‌ ನಂಬರ್‌ ಕೊಡಬಾರದು. ಯಾವುದೇ ರೀತಿಯ ಮಾಹಿತಿ ಹಂಚಿಕೊಳ್ಳಬಾರದು. ಹಣ ಹಾಗೂ ಮರ್ಯಾದೆ ಕಳೆದುಕೊಳ್ಳಬಾರದು ಎಂದು ಪೊಲೀಸರು ಹೇಳಿದ್ದಾರೆ.

‘ಮೊಬೈಲ್‌ ಕಳ್ಳತನವಾಗಿದ್ದರೆ ನಂಬರ್‌ ಅನ್ನು ತಕ್ಷಣ ಬ್ಲಾಕ್‌ ಮಾಡಿಸಬೇಕು. ಬ್ಯಾಂಕ್‌ಗೂ ಮಾಹಿತಿ ಕೊಟ್ಟು ಅಕೌಂಟ್ ಬ್ಲಾಕ್‌ ಮಾಡಿಸಬೇಕು. ಕಳ್ಳತನದ ಮೊಬೈಲ್‌ನಲ್ಲಿರುವ ಸಿಮ್‌ ಬಳಸಿ ಮೋಸ ಮಾಡುತ್ತಿರುವುದು ಹೆಚ್ಚಾಗುತ್ತಿದೆ. ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಿ.ಕಿಶೋರ್‌ಬಾಬು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT