ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್ನ ಭಾಗ್ಯ ನೀಡಿದ ಕಾಂಗ್ರೆಸ್ ಕೈ ಹಿಡಿಯಿರಿ

ಉಪಚುನಾವಣೆ ಪ್ರಚಾರದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿ
Last Updated 13 ಏಪ್ರಿಲ್ 2021, 6:07 IST
ಅಕ್ಷರ ಗಾತ್ರ

ಬಸವಕಲ್ಯಾಣ: `ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ ಮುಂತಾದ ಯೋಜನೆಗಳನ್ನು ನೀಡಿ ಬಡವರ ಏಳಿಗೆಗಾಗಿ ಶ್ರಮಿಸಿದ್ದೇವೆ. ಆದ್ದರಿಂದ ಕಾಂಗ್ರೆಸ್ ಕೈ ಹಿಡಿಯಿರಿ' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.

ತಾಲ್ಲೂಕಿನ ಸಸ್ತಾಪುರದಲ್ಲಿ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ.ನಾರಾಯಣರಾವ್ ಅವರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

`ನಾನು ಮುಖ್ಯಮಂತ್ರಿ ಆಗಿದ್ದಾಗ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ಮೀಸಲಾತಿ ಕಲ್ಪಿಸಿದ್ದೆ. ಅದನ್ನು ಈ ಸರ್ಕಾರ ರದ್ದುಗೊಳಿಸಿದೆ. ಹಿಂದುಳಿದವರ ಹಾಗೂ ಅಲ್ಪಸಂಖ್ಯಾತರ ವಿಕಾಸಕ್ಕಾಗಿ ಜಾರಿಗೊಳಿಸಿದ ಯೋಜನೆಗಳ ಅನುದಾನ ಕಡಿತಗೊಳಿಸಲಾಗಿದೆ. 2023ರಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು 5 ಕೆ.ಜಿ ಬದಲಾಗಿ 10 ಕೆ.ಜಿ ಅಕ್ಕಿಯನ್ನು ಉಚಿತವಾಗಿ ಕೊಡುತ್ತೇವೆ. ಅಲ್ಪಸಂಖ್ಯಾತರ ಅಭಿವೃದ್ಧಿಗೆ ₹10 ಸಾವಿರ ಕೋಟಿ ಮೀಸಲಿಡುತ್ತೇವೆ’ ಎಂದರು.

‘ಬಿಜೆಪಿ ಸರ್ಕಾರ ರೈತ ವಿರೋಧಿಯಾಗಿದ್ದು ಸಾಲಮನ್ನಾ ಮಾಡಿಲ್ಲ. ಯಡಿಯೂರಪ್ಪ ಹಾಗೂ ಅವರ ಮಗ ಲೂಟಿ ಹೊಡೆಯುತ್ತಿದ್ದಾರೆ ಎಂದು ಅವರದೇ ಪಕ್ಷದ ಮುಖಂಡ ಬಸವರಾಜ ಪಾಟೀಲ ಯತ್ನಾಳ ಆರೋಪಿಸಿದ್ದಾರೆ. ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ.ನಾರಾಯಣರಾವ್ ಅವರನ್ನು ಗೆಲ್ಲಿಸಬೇಕು’ ಎಂದು ಕೇಳಿಕೊಂಡರು.

ಶಾಸಕ ಎಚ್.ಕೆ.ಪಾಟೀಲ ಮಾತನಾಡಿ, `ಬಿಜೆಪಿ ಸರ್ಕಾರ ಜನವಿರೋಧಿ ಧೋರಣೆ ಅನುಸರಿಸುತ್ತಿದ್ದು ಚುನಾವಣೆಯಲ್ಲಿ ಅದನ್ನು ಸೋಲಿಸಿ ತಕ್ಕ ಪಾಠ ಕಲಿಸಬೇಕು’ ಎಂದರು.

ಶಾಸಕ ರಾಜಶೇಖರ ಪಾಟೀಲ ಹುಮನಾಬಾದ್ ಮಾತನಾಡಿ, `ಶಾಸಕ ಬಿ.ನಾರಾಯಣರಾವ್ ಅವರು ಕ್ಷೇತ್ರದ ಅಭಿವೃದ್ಧಿ ಬಗ್ಗೆ ಸಾಕಷ್ಟು ಕಾಳಜಿ ಹೊಂದಿದ್ದರು. ನೂತನ ಅನುಭವ ಮಂಟಪಕ್ಕೆ ರಾಷ್ಟ್ರಪತಿ ಅವರಿಂದ ಶಂಕುಸ್ಥಾಪನೆ ನೆರವೇರಬೇಕು ಎಂಬ ಕನಸು ಅವರದ್ದಾಗಿತ್ತು’ ಎಂದರು.

ಶಾಸಕ ಅಜಯಸಿಂಗ್ ಮಾತನಾಡಿ, `ಅನುಭವ ಮಂಟಪ ನಿರ್ಮಾಣಕ್ಕೆ ರೂಪುರೇಷೆ ಸಿದ್ಧಪಡಿಸಲು ಸಮಿತಿ ರಚಿಸಿದ ಸಿದ್ದರಾಮಯ್ಯ ಹಾಗೂ ಮಂಟಪ ನಿರ್ಮಾಣದ ಕನಸು ಕಂಡಿದ್ದ ಬಿ.ನಾರಾಯಣರಾವ್ ಇಬ್ಬರೂ ಅಪ್ಪಟ ಬಸವ ಭಕ್ತರು. ಆದರೆ, ಬಿಜೆಪಿಯವರು ಢೋಂಗಿ ಬಸವ ಭಕ್ತರಾಗಿದ್ದಾರೆ’ ಎಂದರು.

ಅಭ್ಯರ್ಥಿ ಮಾಲಾ ಬಿ.ನಾರಾಯಣ ರಾವ್ ಅವರು ಮಾತನಾಡಿ, `ಬಿ.ನಾರಾಯಣರಾವ್ ಅವರದ್ದು ಹೋರಾಟದ ಜೀವನವಾಗಿತ್ತು. ಬಡವರ, ಹಿಂದುಳಿದವರ ಬಗ್ಗೆ ಕಾಳಜಿ ಹೊಂದಿದ್ದರು. ಅವರನ್ನು ಶಾಸಕರನ್ನಾಗಿ ಮಾಡಿದಂತೆಯೇ ನನಗೂ ಮತನೀಡಿ ಅವರ ಕನಸು ಪೂರ್ಣಗೊಳಿಸಲು ಶಕ್ತಿ ನೀಡಬೇಕು’ ಎಂದು ಕೇಳಿಕೊಂಡರು.

ಮಾಜಿ ಸಚಿವ ಎಚ್.ಆಂಜನೇಯ, ಪಕ್ಷದ ಮುಖಂಡರಾದ ದತ್ತು ಮೂಲಗೆ, ಶಿವರಾಜ ನರಶೆಟ್ಟಿ, ರವಿ ನಾಗೀನಕೆರೆ ಮಾತನಾಡಿದರು. ವಿಧಾನಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ, ಬಿ.ಆರ್.ಪಾಟೀಲ, ಅಲ್ಲಮಪ್ರಭು ಪಾಟೀಲ, ತಿಪ್ಪಣ್ಣಪ್ಪ ಕಮ್ಮಕನೂರ್, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಬಾಬು ಹೊನ್ನಾನಾಯಕ್, ಆನಂದ ದೇವಪ್ಪ, ಶಿವಶರಣ ಬಿರಾದಾರ, ಅನುರಾಧಾ ತಪಲಿ, ಬಸವರಾಜ ತಪಲಿ, ಯುವರಾಜ ಭೆಂಡೆ, ಗಿರೀಶ ತಾಂಬೋಳೆ, ಮನೋಜ ಮಾಶೆಟ್ಟೆ, ಶರಣು ಆಲಗೂಡ, ಧನರಾಜ ದೊಡ್ಮನಿ, ಗೌತಮ ನಾರಾಯಣರಾವ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT