ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ 19ರಿಂದ

Published 31 ಮಾರ್ಚ್ 2024, 5:43 IST
Last Updated 31 ಮಾರ್ಚ್ 2024, 5:43 IST
ಅಕ್ಷರ ಗಾತ್ರ

ಭಾಲ್ಕಿ: ಪಟ್ಟಣದಲ್ಲಿ ಏ. 19ರಿಂದ 23ರವರೆಗೆ ಹಿರೇಮಠ ಸಂಸ್ಥಾನದ ವತಿಯಿಂದ ನಡೆಯಲಿರುವ ವಚನ ಜಾತ್ರೆ-2024, ಅಕ್ಕಮಹಾದೇವಿ ಜಯಂತಿ ಉತ್ಸವ, ಚನ್ನಬಸವ ಪಟ್ಟದ್ದೇವರ 25ನೇ ಸ್ಮರಣೋತ್ಸವ ಮತ್ತು ಕರ್ನಾಟಕ ಸಂಭ್ರಮ 50ರ ಅಂಗವಾಗಿ ಪೂರ್ವಭಾವಿ ಸಭೆ ನಡೆಯಿತು.

ಹಿರೇಮಠ ಸಂಸ್ಥಾನದಲ್ಲಿ ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಜಿಲ್ಲೆಯ ರಾಜಕೀಯ ಗಣ್ಯರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಭಕ್ತರು ಪಾಲ್ಗೊಂಡು 5 ದಿನ ನಡೆಯುವ ಸಮಾರಂಭದ ಯಶಸ್ವಿಗೆ ವಿವಿಧ ಸಲಹೆ ಸೂಚನೆ ನೀಡಿದರು.

ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಮಾತನಾಡಿ, ‘ಚನ್ನಬಸವ ಪಟ್ಟದ್ದೇವರ 25ನೇ ಸ್ಮರಣೋತ್ಸವ ಅಂಗವಾಗಿ ಏ.19 ರಿಂದ 23ರ ವರೆಗೆ 5 ದಿನಗಳವರಗೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಭಕ್ತರಿಂದ ಉತ್ತಮ ಸಲಹೆಗಳು ವ್ಯಕ್ತವಾಗಿದ್ದು, ಅವುಗಳನ್ನು ಸ್ವೀಕರಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಮಾತನಾಡಿ, ‘20ನೇ ಶತಮಾನದಲ್ಲಿ ಬಸವತತ್ವವನ್ನು ಪುನರುತ್ಥಾನಗೊಳಿಸಿದ ಶ್ರೇಯಸ್ಸು ಚನ್ನಬಸವ ಪಟ್ಟದ್ದೇವರಿಗೆ ಸಲ್ಲುತ್ತದೆ. ಅವರ ಕಾಯಕ-ದಾಸೋಹ ನಮ್ಮೆಲ್ಲರಿಗೂ ಪ್ರೇರಣೆಯಾಗಿವೆ. ಬಸವಲಿಂಗ ಪಟ್ಟದ್ದೇವರ ಸಾನ್ನಿಧ್ಯದಲ್ಲಿ ಕಳೆದ 24 ವರ್ಷಗಳಿಂದ ರಚನಾತ್ಮಕ ಕಾರ್ಯಗಳು ನಡೆಯುತ್ತಿವೆ. ಸಮಾರಂಭದ ಯಶಸ್ವಿಗೆ ಅಗತ್ಯ ಸಹಾಯ ಸಹಕಾರ ನೀಡುತ್ತೇನೆ ಎಂದು ತಿಳಿಸಿದರು.

ಮಾಜಿ ಶಾಸಕ ಪ್ರಕಾಶ ಖಂಡ್ರೆ ಮಾತನಾಡಿ, ‘ಚನ್ನಬಸವ ಪಟ್ಟದ್ದೇವರು ತಮ್ಮ ಜನಪರ ಕಾರ್ಯಗಳ ಮೂಲಕ ಈ ಭಾಗಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ. ಅವರು ನಮ್ಮೊಂದಿಗೆ ದೈಹಿಕವಾಗಿ ಇರದಿದ್ದರೂ ಕೂಡ ಅವರ ಶ್ರೇಷ್ಠ ತತ್ವ-ಚಿಂತನೆಗಳು ಸದಾಕಾಲ ನಮ್ಮೊಂದಿಗೆ ಇರುತ್ತವೆ ಎಂದು ಹೇಳಿದರು.

ಬಸವಕಲ್ಯಾಣ ಶಾಸಕ ಶರಣು ಸಲಗರ ಮಾತನಾಡಿ, ಹಿರೇಮಠದ ಅಪ್ಪಟ ಭಕ್ತ, ಶಿಷ್ಯನಾಗಿ ನನಗೆ ವಹಿಸುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಲಾಗುವುದು ಎಂದು ಹೇಳಿದರು.

ಅನುಭವ ಮಂಟಪದ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಚನ್ನಬಸವ ಪಟ್ಟದ್ದೇವರ 25ನೇ ಸ್ಮರಣೋತ್ಸವ, ಅಕ್ಕಮಹಾದೇವಿ ಜಯಂತಿ, ಕರ್ನಾಟಕ 50ರ ಸಂಭ್ರಮ ಸಮಾರಂಭ ಅರ್ಥಪೂರ್ಣವಾಗಿ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. 5 ದಿನ ನಿರಂತರ ಪ್ರಸಾದ ವ್ಯವಸ್ಥೆ ಇರಲಿದೆ. ಸಹಸ್ರ ಸಂಖ್ಯೆಯ ಭಕ್ತರು ಸಮಾರಂಭಕ್ಕೆ ಸಾಕ್ಷಿಯಾಗಬೇಕು ಎಂದು ಮನವಿ ಮಾಡಿದರು.

ಪ್ರಮುಖರಾದ ಸಿದ್ರಾಮಪ್ಪ ವಂಕೆ, ರಾಚಪ್ಪ ಗೋರ್ಟೆ, ಬಾಬು ವಾಲಿ, ಬಸವರಾಜ ಧನ್ನೂರ, ಆನಂದ ದೇವಪ್ಪ, ಸುರೇಶ ಚನಶೆಟ್ಟಿ, ಶಿವು ಲೋಖಂಡೆ, ಶಂಭುಲಿಂಗ ಕಾಮಣ್ಣ, ಜಯರಾಜ ಖಂಡ್ರೆ, ಚಂದ್ರಕಾಂತ ಪಾಟೀಲ, ಓಂಪ್ರಕಾಶ ರೊಟ್ಟೆ, ಶಶಿಧರ ಕೋಸಂಬೆ, ಕಿರಣ ಖಂಡ್ರೆ, ಶಿವಾನಂದ ಗುಂದಗೆ, ಕಾಶಿನಾಥ ಭೂರೆ, ಶ್ರೀಕಾಂತ ಭೂರಾಳೆ, ಬಸವರಾಜ ಭತಮೂರ್ಗೆ, ನಾಗಭೂಷಣ ಮಾಮಡಿ, ಬಸವರಾಜ ಮರೆ ಇದ್ದರು.

ಸ್ವಾಗತ ಸಮಿತಿಗೆ ಆಯ್ಕೆ: ಸ್ಮರಣೋತ್ಸವ ಸ್ವಾಗತ ಸಮಿತಿ ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಮಾಜಿ ಶಾಸಕ ಪ್ರಕಾಶ ಖಂಡ್ರೆ ಮತ್ತು ಅಧ್ಯಕ್ಷರಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರ ಹೆಸರನ್ನು ಬಸವಲಿಂಗ ಪಟ್ಟದ್ದೇವರು ಪ್ರಕಟಿಸಿದರು.

ಕಾರ್ಯಕ್ರಮದ ವಿವರ: ಏ. 10ರಿಂದ 21ರವರೆಗೆ ಸಂಜೆ 5 ಗಂಟೆಗೆ ವೈರಾಗ್ಯನಿಧಿ ಅಕ್ಕಮಹಾದೇವಿ ಕುರಿತು ಪ್ರವಚನ ನಡೆಯಲಿದೆ. 15ರಿಂದ 21ರವರೆಗೆ ಬೆಳಿಗ್ಗೆ 6 ಗಂಟೆಗೆ ವಚನ ಪಾರಾಯಣ, 19ರಿಂದ 21ರವರೆಗೆ ವಿವಿಧ ಗೋಷ್ಠಿ, 22ರಂದು ಬೆಳಿಗ್ಗೆ 6 ಗಂಟೆಗೆ ಪ್ರಭಾತಫೇರಿ, ಬೆಳಿಗ್ಗೆ 11ಕ್ಕೆ ಕಾರ್ಯಕ್ರಮ ಉದ್ಘಾಟನೆ, ಸಂಜೆ 6ಕ್ಕೆ ಕರ್ನಾಟಕ 50ರ ಸಂಭ್ರಮ ಕಾರ್ಯಕ್ರಮ, 23ರಂದು ವೈರಾಗ್ಯನಿಧಿ ಅಕ್ಕಮಹಾದೇವಿ ಜಯಂತಿ ಆಚರಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT