ಭಾನುವಾರ, ಆಗಸ್ಟ್ 25, 2019
20 °C
ಗೊಂಡ ಪರ ಸಂಘಟನೆಗಳ ಒಕ್ಕೂಟದ ಪ್ರತಿಭಟನೆ

ಆದಿವಾಸಿಗಳ ಸಮಸ್ಯೆ ಪರಿಹರಿಸಿ

Published:
Updated:
Prajavani

ಬೀದರ್: ಗೊಂಡ ಹಾಗೂ ಆದಿವಾಸಿಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ ಗೊಂಡ ಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಸದಸ್ಯರು ಶುಕ್ರವಾರ ಧರಣಿ ನಡೆಸಿದರು.

2011ರ ಜನಗಣತಿ ಪ್ರಕಾರ ದೇಶದಲ್ಲಿ ಗೊಂಡ ಸಮಾಜದ ಜನಸಂಖ್ಯೆ 2.50 ಕೋಟಿ ಇದೆ. ಗೊಂಡ ಸಮಾಜಕ್ಕೆ 2021ರ ಜನಗಣತಿಯಲ್ಲಿ ಪ್ರತ್ಯೇಕ ಕಾಲಂನಲ್ಲಿ ನೋಂದಣಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯದಲ್ಲಿರುವ ಗೊಂಡ ಹಾಗೂ ಕುರುಬ ಜನಾಂಗದವರು ಒಂದೇ ಸಮುದಾಯಕ್ಕೆ ಸೇರಿದವರು. ಗೊಂಡ ಬುಡಕಟ್ಟಿನ ಪರ್ಯಾಯ ಪದವೇ ಕುರುಬ. ರಾಜ್ಯ ಸರ್ಕಾರ ಈಗಾಗಲೇ ಒಪ್ಪಿಗೆ ಸೂಚಿಸಿ ಕೇಂದ್ರಕ್ಕೆ ವರದಿ ಕಳಿಸಿದೆ. ಕೇಂದ್ರ ಸರ್ಕಾರ ವರದಿಗೆ ಅನುಮೋದನೆ ನೀಡಬೇಕು ಎಂದು ಒತ್ತಾಯಿಸಿದರು.

ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಾರ್ಷಿಕ ಆದಾಯದ ಮಿತಿ ಕೇವಲ ₹ 2.50 ಲಕ್ಷ ಇದೆ. ಈ ಆದಾಯ ಮಿತಿಯನ್ನು ತಕ್ಷಣ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.

ಅನಿಲ್ ಬೆಲ್ದಾರ್‌, ಅಮೃತರಾವ್‌ ಚಿಮಕೋಡ, ಗೋವರ್ಧನ್‌ ರಾಠೋಡ್, ಲತಾ ರಾಠೋಡ್‌, ಮಾಣಿಕ ಬರೀದಾಬಾದ್, ಆನಂದ ದೇವಪ್ಪ, ಅಬ್ದುಲ್‌ ಮನ್ನಾನ್‌ ಶೇಠ್, ಮಾಳಪ್ಪ ಅಡಸಾರೆ, ಗೋಪಾಲ ಲದ್ದೆ, ಲೋಕೇಶ ಮೇತ್ರೆ, ದತ್ತು ಕಾಡವಾದ, ಮೋಹನ್‌ ಡಾಂಗೆ, ಶಿವಕುಮಾರ ನೀಲಕಟ್ಟೆ ಇದ್ದರು.

Post Comments (+)