ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಟಗುಪ್ಪ | ಸೊಯಾಬಿನ್‌ ಕೊರತೆ: ರೈತರ ಪರದಾಟ

ನಿರ್ಣಾ ಹೋಬಳಿ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ
Last Updated 5 ಜೂನ್ 2020, 4:41 IST
ಅಕ್ಷರ ಗಾತ್ರ

ಚಿಟಗುಪ್ಪ: ಮುಂಗಾರು ಬಿತ್ತನೆ ಆರಂಭವಾಗಿದ್ದು, ರೈತರು ಬೀಜ ಖರೀದಿಗೆ ರೈತ ಸಂಪರ್ಕ ಕೇಂದ್ರಗಳಲ್ಲಿ ಮುಗಿಬೀಳುತ್ತಿದ್ದಾರೆ. ಸಮರ್ಪಕವಾಗಿ ಬೀಜ ಲಭ್ಯವಾಗುತ್ತಿಲ್ಲ. ಇದರಿಂದ ರೈತರು ಪರದಾಡುವಂತಾಗಿದೆ.

ಕಳೆದ ಮೂರ್ನಾಲ್ಕು ದಿನಗಳಿಂದ ಪಟ್ಟಣ ಸೇರಿ ತಾಲ್ಲೂಕಿನೆಲ್ಲೆಡೆ ಉತ್ತಮ ಮಳೆ ಆಗಿದೆ. ನಿರ್ಣಾ ಹೋಬಳಿ ವ್ಯಾಪ್ತಿಯ ನಿರ್ಣಾ ರೈತ ಸಂಪರ್ಕ ಕೇಂದ್ರದಲ್ಲಿ ನಿತ್ಯ ರೈತರು ಬೀಜ ಖರೀದಿಗಾಗಿ ಬೆಳಿಗ್ಗೆಯಿಂದ ಸಂಜೆಯವರೆಗೂ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ.

'ರೈತ ಸಂಪರ್ಕ ಕೇಂದ್ರದಲ್ಲಿ ಇಲಾಖೆಯಿಂದ ಇದುವರೆಗೂ 8.1 ಕ್ವಿಂಟಲ್‌ ತೊಗರಿ, 3.3 ಕ್ವಿಂಟಲ್‌ ಉದ್ದು, 1.8 ಕ್ವಿಂಟಲ್ ಹೈಬ್ರಿಡ್ ಜೋಳ, 4.8 ಕ್ವಿಂಟಲ್‌ ಹೆಸರು, 4 ಕ್ವಿಂಟಲ್‌ ಮೆಕ್ಕೆ ಜೋಳ, 850 ಕ್ವಿಂಟಲ್ ಸೊಯಾಬಿನ್ ದಾಸ್ತಾನು ಇದೆ. ಇದರಲ್ಲಿ ಸೋಯಾಬಿನ್ ಸಂಪೂರ್ಣವಾಗಿ ಖಾಲಿ ಆಗಿದೆ. ಈ ಬಾರಿ ಸೊಯಾಬಿನ್‌ಗೆ ಹೆಚ್ಚು ಬಂದಿದೆ. ನಿರೀಕ್ಷೆಗೂ ಮೀರಿ ಬೇಡಿಕೆ ಬರುತ್ತಿರುವುದರಿಂದ ಸೊಯಾಬಿನ್ ಬೀಜದ ಕೊರತೆ ಆಗುತ್ತಿದೆ' ಎಂದು ಕೃಷಿ ಅಧಿಕಾರಿ ನಿಲಾಂಬಿಕಾ ತಿಳಿಸಿದರು.

'ರೈತರು ಕಬ್ಬು ಬೆಳೆ ಕೈ ಬಿಟ್ಟು ಅಲ್ಪಾವಧಿ ಬೇಳೆಯಾಗಿರುವ ಹೆಚ್ಚು ಆದಾಯ ಕೊಡುವ ಸೊಯಾಬಿನ್‌ ಬೆಳೆಯಲು ಒಲವು ತೋರುತ್ತಿರುವುದರಿಂದ ಬೇಡಿಕೆ ಹೆಚ್ಚಾಗಿದೆ. ಒಂದು ವಾರದಲ್ಲಿ ರೈತರ ಬೇಡಿಕೆಗೆ ತಕ್ಕಷ್ಟು ಬೀಜ ಬರಲಿದೆ ಎಂದು ಅವರು ಹೇಳಿದರು.

ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ನಿರ್ಣಾ, ಬನ್ನಳ್ಳಿ, ನಾಗನಕೇರಾ, ಮಂಗಲಗಿ, ಮುತ್ತಂಗಿ, ಮದರಗಿ, ಬಸಿಲಾಪುರ್, ಅಲ್ಲಿಪುರ್, ದೇವಗಿರಿ, ಭಾದ್ರಾಪುರ್ ಗ್ರಾಮಗಳ ಒಂದು ಸಾವಿರಕ್ಕೂ ಹೆಚ್ಚು ರೈತರು ಈಗಾಗಲೇ ಸೊಯಾಬಿನ್ ಬೀಜಕ್ಕಾಗಿ ಹೆಸರು ನೋಂದಾಯಿಸಿದ್ದಾರೆ. ಎಲ್ಲರಿಗೂ ನಿಗದಿತ ಸಮಯದಲ್ಲಿ ಬೀಜ ಪೂರೈಕೆ ಮಾಡಲಾಗುತ್ತದೆ ಎಂದರು.

ಈ ಬಾರಿ ಬೀಜ ಪಡೆಯಲು ಸಾಮಾನ್ಯ ರೈತರು ಆಧಾರ್‌ ಕಾರ್ಡ್‌, ಪಹಣಿ ಕಡ್ಡಾಯವಾಗಿ ತರಬೇಕು. ಪರಿಶೀಷ್ಟ ಜಾತಿ, ಪರಿಶಿಷ್ಟ ಪಂಗಡದ ರೈತರು ಆಧಾರ್ ಕಾರ್ಡ್‌, ಪಹಣಿ ಜತೆಗೆ ಜಾತಿ ಪ್ರಮಾಣ ಪತ್ರ ಕಡ್ಡಾಯವಾಗಿ ಒದಗಿಸಬೇಕಾಗಿದೆ.

ಖಾಸಗಿ ಬೀಜ ಮಾರಾಟ ಕೇಂದ್ರಗಳಲ್ಲೂ ಸೊಯಾಬಿನ್ ಬೀಜ ಮಾರಾಟವಾಗುತ್ತಿದ್ದು, ಹಲವು ರೈತರು ರೈತಸಂಪರ್ಕ ಕೇಂದ್ರಗಳಲ್ಲಿ ಬೀಜ ಲಭ್ಯವಾಗದಕ್ಕೆ ಖಾಸಗಿ ಮಾರಾಟ ಕೇಂದ್ರಗಳಿಂದಲೂ ಖರಿದಿಸುತ್ತಿದ್ದಾರೆ.

'ಹವಾಮಾನ ಬಿತ್ತನೆಗೆ ಸಕಾಲವಾಗಿದ್ದರಿಂದ ಬೇಗ ಬಿತ್ತನೆ ಮುಗಿಸಬೇಕಾಗಿದೆ. ಹೀಗಾಗಿ ಬೆಲೆ ಹೆಚ್ಚಾದರೂ ಬೀಜ ಖರಿದಿಸಲೇಬೇಕಾಗಿದೆ. ಕೃಷಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಎಲ್ಲೆಡೆ ಸೊಯಾಬಿನ್ ಬೀಜ ಕೊರತೆ ಉಂಟಾಗಿದೆ' ಎಂದು ರೈತ ಮಲ್ಲಪ್ಪ ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT