ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಯಲ್ಲಿ ನೀರೂರಿಸುವ ಕಿರಣ ದೋಸೆ

‘ಸಾಯಿ ಟಿಫಿನ್‌ ಸೆಂಟರ್‌’ನಲ್ಲಿ ರುಚಿಯಾದ ಮಸಾಲೆ ದೋಸೆ, ಇಡ್ಲಿ, ವಡೆ, ಪುರಿ
Last Updated 31 ಜನವರಿ 2019, 19:46 IST
ಅಕ್ಷರ ಗಾತ್ರ

ಬೀದರ್: ನೀವು ಬಗೆ ಬಗೆಯ ದೋಸೆಗಳನ್ನು ತಿಂದು ನೋಡಿರಬಹುದು. ಆದರೆ, ಕೆಇಬಿ ರಸ್ತೆಯ ತಿರುವಿನಲ್ಲಿ ಕೆನರಾ ಬ್ಯಾಂಕ್‌ ಸಮೀಪ ಐದಾರು ಜನ ಕುಳಿತುಕೊಳ್ಳುವಷ್ಟು ಜಾಗದಲ್ಲಿರುವ ಸಾಯಿ ಟಿಫಿನ್‌ ಸೆಂಟರ್‌ನಲ್ಲಿ ತಯಾರಿಸುವ ದೋಸೆಯನ್ನು ಒಮ್ಮೆ ತಿಂದು ನೋಡಿ. ಇಲ್ಲಿಯ ದೋಸೆಯ ರುಚಿಯೇ ಭಿನ್ನವಾಗಿದೆ.

ಹೌದು! ಬೆಳಿಗ್ಗೆ 7 ಗಂಟೆಯಿಂದ 11ರ ವರೆಗೆ ಮಾತ್ರ ಇಲ್ಲಿ ಮೂರು ಬಗೆಯ ದೋಸೆಗಳು ದೊರೆಯುತ್ತವೆ. ಬೆಳಿಗ್ಗೆ ಶಾಲೆಗೆ ಹೋಗುವ ಮಕ್ಕಳು, ಕಚೇರಿಗಳಿಗೆ ಹೋಗುವ ಸಿಬ್ಬಂದಿ ಇಲ್ಲಿಯ ದೋಸೆ ಕಟ್ಟಿಸಿಕೊಂಡು ಹೋಗುತ್ತಾರೆ. ಮಸಾಲೆ ದೋಸೆ, ಪ್ಲೇನ್‌ ದೋಸೆ ಹಾಗೂ ಸೆಟ್‌ ದೋಸೆಗೆ ಇಲ್ಲಿ ಅಧಿಕ ಬೇಡಿಕೆ ಇದೆ.

ದೋಸೆ ತಿನ್ನಲು ಹೋಟೆಲ್‌ಗೆ ಬರುವ ವ್ಯಕ್ತಿ ತಮ್ಮ ಮನೆಯ ಸದಸ್ಯರಿಗೂ ದೋಸೆಗಾಗಿ ಆರ್ಡರ್‌ ಮಾಡುತ್ತಾರೆ. ದೋಸೆಯ ರುಚಿ ಗ್ರಾಹಕರನ್ನು ಅಂಗಡಿಯತ್ತ ಸೆಳೆದು ತರುತ್ತಿದೆ. ಕೆಇಬಿ ಕಚೇರಿ ಹಾಗೂ ಕೆನರಾ ಬ್ಯಾಂಕ್‌ ರಸ್ತೆಯಲ್ಲಿ ಹತ್ತಾರು ಹೋಟೆಲ್‌ಗಳು ಇದ್ದರೂ ಗ್ರಾಹಕರು ಇದೇ ಅಂಗಡಿಯನ್ನು ಹುಡುಕಿಕೊಂಡು ಬರುತ್ತಾರೆ.

ಔರಾದ್‌ ತಾಲ್ಲೂಕಿನ ಡೊಣಗಾಂವದ ಕಿರಣ ಪೇನೆ ಅವರು ಕಟ್ಟಡ ನಿರ್ಮಾಣದ ಕೆಲಸಕ್ಕೆ ಬೆಂಗಳೂರಿಗೆ ಹೋಗಿ ಕಷ್ಟ ನಷ್ಟ ಅನುಭವಿಸಿ ಮರಳಿ ಬೀದರ್‌ಗೆ ಬಂದು ಬದುಕು ಸಾಗಿಸಲು ಚಿಕ್ಕದಾದ ಟೀ ಸ್ಟಾಲ್‌ ತೆರೆದರು. ಗ್ರಾಹಕರು ಚಹಾ ರುಚಿ ಸವಿದು ಅಂಗಡಿಗೆ ಬರಲು ಆರಂಭಿಸಿದರು. ಜನ ಬೆಳಿಗ್ಗೆ ಉಪಾಹಾರವನ್ನೂ ಕೇಳಲಾರಂಭಿಸಿದಾಗ ದೋಸೆ ಹೆಂಚು ಖರೀದಿಸಿ ದೋಸೆ ಮಾಡಲು ಶುರು ಮಾಡಿದರು. ಗ್ರಾಹಕರ ಸಂಖ್ಯೆ ನಿಧಾನವಾಗಿ ಹೆಚ್ಚಿದ್ದರಿಂದ ಕೆಲಸದ ಒತ್ತಡ ಹೆಚ್ಚಾಯಿತು. ಭಾವ ಬಸವರಾಜ್‌ ಅವರನ್ನು ತನ್ನ ಜತೆಗೆ ಸೇರಿಸಿಕೊಂಡರು. ಈಗ ಭಾವಂದಿರು ಸೇರಿಕೊಂಡು ಅಂಗಡಿ ನಡೆಸುತ್ತಿದ್ದಾರೆ.

ದೋಸೆ ಜತೆಗೆ ಇಡ್ಲಿ, ವಡೆ, ಪುರಿ ಹಾಗೂ ಆಲೂಭಾತ್‌ ತಯಾರಿಸುತ್ತಾರೆ. ಇದನ್ನು ಬಿಟ್ಟು ಮಧ್ಯಾಹ್ನದ ನಂತರ ಬೇರಾವ ಕೆಲಸವನ್ನು ಮಾಡುವುದಿಲ್ಲ. ಮತ್ತೆ ಸಿದ್ಧತೆಯಲ್ಲಿ ತೊಡಗುತ್ತಾರೆ.

‘ಕೌಟುಂಬಿಕ ಕಾರ್ಯಕ್ರಮ, ಸರ್ಕಾರಿ ಕಚೇರಿಯಲ್ಲಿ ಸಭೆ, ಕಾರ್ಯಾಗಾರ ಇದ್ದರೆ ನಮ್ಮ ಅಂಗಡಿಯಿಂದಲೇ ಉಪಾಹಾರ ಒಯ್ಯುತ್ತಾರೆ. ಗುಣಮಟ್ಟ ಇರುವ ಕಾರಣ ಆರೋಗ್ಯ ಇಲಾಖೆಯ ಸಿಬ್ಬಂದಿ ನಮ್ಮ ಅಂಗಡಿಯ ಉಪಾಹಾರವನ್ನು ಹೆಚ್ಚು ಇಷ್ಟಪಡುತ್ತಾರೆ. ದಿನವಿಡೀ ದೋಸೆಯನ್ನೇ ಮಾಡುವುದಿಲ್ಲ. ಅರ್ಧದಿನ ಮಾತ್ರ ಈ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇವೆ. ದೋಸೆ ಹಿಟ್ಟು ಮುಗಿದ ಮೇಲೆ ನಿತ್ಯ ಸಂಜೆ ಮತ್ತೆ ನಾಳಿನ ತಯಾರಿ ನಡೆಸುತ್ತೇವೆ. ಹಣಕ್ಕೆ ಬೆನ್ನು ಹತ್ತಿದರೆ ಗುಣಮಟ್ಟ ಕಾಯ್ದುಕೊಳ್ಳುವುದು ಕಷ್ಟವಾಗುತ್ತದೆ. ಹೀಗಾಗಿ ಕಡಿಮೆ ಮಾಡಿದರೂ ಚೆನ್ನಾಗಿ ಮಾಡುತ್ತೇವೆ’ ಎಂದು ಹೆಮ್ಮೆಯಿಂದ ವಿವರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT