ಬುಧವಾರ, ಮೇ 18, 2022
25 °C
ಕಾಲೇಜಿನ ಪ್ರವೇಶದ್ವಾರದ ಎದುರಲ್ಲಿ ನೀರು ಸಂಗ್ರಹಗೊಂಡರೂ ನಿರ್ಲಕ್ಷ್ಯ

ವಿದ್ಯಾರ್ಥಿಗಳಿದ್ದರೂ, ಉಪನ್ಯಾಸಕರಿಲ್ಲ

ಮಾಣಿಕ ಆರ್.ಭುರೆ Updated:

ಅಕ್ಷರ ಗಾತ್ರ : | |

Prajavani

ಬಸವಕಲ್ಯಾಣ: ನಗರದ ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಸುಸಜ್ಜಿತ ಕೊಠಡಿಗಳಿದ್ದರೂ, ಉಪನ್ಯಾಸಕರ ಐದು ಹುದ್ದೆಗಳು ಖಾಲಿ ಇರುವುದರಿಂದ ತೊಂದರೆ ಆಗಿದೆ.

ಇಲ್ಲಿ ವಿಜ್ಞಾನ, ಕಲಾ ಹಾಗೂ ವಾಣಿಜ್ಯ ಕೋರ್ಸ್‌ಗಳ ತರಗತಿಗಳು ನಡೆಯುತ್ತವೆ. ಆದರೆ, ಕನ್ನಡ, ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಜೀವಶಾಸ್ತ್ರದ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ. ಕೆಲ ತಿಂಗಳುಗಳ ನಂತರ ಹಿಂದಿ ಭಾಷಾ ಉಪನ್ಯಾಸಕರ ಹುದ್ದೆಯೂ ಖಾಲಿ ಆಗಲಿದೆ. ಆದ್ದರಿಂದ ಖಾಲಿ ಹುದ್ದೆ ಭರ್ತಿಗಾಗಿ ಸಂಬಂಧಿತರಿಗೆ ಪ್ರಸ್ತಾವ ಕಳುಹಿಸಲಾಗಿದೆ ಎಂದು ಪ್ರಾಂಶುಪಾಲ ಸಿದ್ದಣ್ಣ ಮರ್ಪಳ್ಳೆ ತಿಳಿಸಿದ್ದಾರೆ.

ಕಸ ಗುಡಿಸುವುದಕ್ಕೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಇತರೆ ಅಗತ್ಯ ಕೆಲಸಗಳಿಗೆ ಸಿಬ್ಬಂದಿ ಇಲ್ಲದೆ ಅಡೆತಡೆ ಆಗುತ್ತಿದೆ. ವಿಜ್ಞಾನ ಸಹಾಯಕರು ಇಲ್ಲ. ಸಿಬ್ಬಂದಿ ಕೊರತೆಯ ಕಾರಣ ಎನ್.ಎಸ್.ಎಸ್. ಹಾಗೂ ಎನ್.ಸಿ.ಸಿ ವಿಭಾಗಗಳನ್ನು ಕೂಡ ಆರಂಭಿಸಲಾಗಿಲ್ಲ. ಈಚೆಗೆ ಸ್ಕೌಟ್ಸ್ ಮತ್ತು ಗೈಡ್ಸ್ ಘಟಕ ಮಾತ್ರ ಆರಂಭ
ಆಗಿದೆ.

ಕಾಲೇಜಿನಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಕಾಲೇಜಿನ ಪ್ರವೇಶ ದ್ವಾರದಲ್ಲಿ ಅಂಚೆ ಕಚೇರಿ ಎದುರಲ್ಲಿ ಮಳೆ ಹಾಗೂ ಮನೆ ಬಳಕೆಯ ನೀರು ಅನೇಕ ದಿನಗಳವರೆಗೆ ಸಂಗ್ರಹಗೊಂಡು ನೊಣ ಮತ್ತು ಸೊಳ್ಳೆಗಳ ಕಾಟ ಹೆಚ್ಚುತ್ತಿದೆ. ವಿದ್ಯಾರ್ಥಿಗಳು ಕೆಸರಿನಲ್ಲಿಯೇ ನಡೆದುಕೊಂಡು ಬರಬೇಕಾಗುತ್ತಿದೆ. ಆದ್ದರಿಂದ ಇಲ್ಲಿ ನೀರು ಸಂಗ್ರಹಗೊಳ್ಳದಂತೆ ವ್ಯವಸ್ಥೆ ಕೈಗೊಳ್ಳಬೇಕು ಎಂದು ಕಾಲೇಜು ಸುಧಾರಣಾ ಸಮಿತಿ ಉಪಾಧ್ಯಕ್ಷ ದೀಪಕ ಗಾಯಕವಾಡ ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಬೆಳೆಸುವುದಕ್ಕೆ ಆಟಿಕೆಗಳನ್ನು ಪೂರೈಸಬೇಕು ಹಾಗೂ ದೈಹಿಕ ಶಿಕ್ಷಕರ ನೇಮಕಾತಿ ಆಗಬೇಕು ಎಂಬುದು ಕೂಡ ಆಗ್ರಹವಾಗಿದೆ. 259 ವಿದ್ಯಾರ್ಥಿಗಳಿದ್ದಾರೆ. ಕೋವಿಡ್ ಕಾರಣ ಶೇ 70 ರಷ್ಟು ಹಾಜರಾತಿ ಇರುತ್ತದೆ. ಆದರೆ, ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ ಇಲ್ಲ. ಪ್ರತ್ಯೇಕ ಗ್ರಂಥಾಲಯ ಕಟ್ಟಡವಿಲ್ಲ. ಆವರಣ ಗೋಡೆ ಇಲ್ಲ. ಕಂಪ್ಯೂಟರ್ ಕೋಣೆಯೂ ಇಲ್ಲ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗಿದೆ ಎನ್ನುತ್ತಾರೆ ಪಾಲಕ ವೀರಾರೆಡ್ಡಿ.

ಮುಖ್ಯವೆಂದರೆ, ಕಾಲೇಜು ಕಟ್ಟಡದ ಎದುರಲ್ಲಿನ ಆವರಣದಲ್ಲಿ ಪ್ರೌಢಶಾಲೆಯ ಹಳೆಯ ಶಿಥಿಲ ಕೊಠಡಿಗಳಿವೆ. ಇವು ಬೀಳುವ ಸ್ಥಿತಿಗೆ ತಲುಪಿದ್ದರಿಂದ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಆದ್ದರಿಂದ ಅವನ್ನು ನೆಲಸಮಗೊಳಿಸಬೇಕು ಎಂದು ಸಹ ಅವರು ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು