ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಕ್ಷಣ ಸರ್ವರ ಹಕ್ಕು ಆಗಲಿ: ಶ್ರೀನಾಥ ಪೂಜಾರಿ

ಶಾಹೂ ಮಹಾರಾಜ ಜಯಂತಿ ಆಚರಣೆ, ಪ್ರತಿಭಾ ಪುರಸ್ಕಾರ
Published 8 ಜುಲೈ 2024, 16:25 IST
Last Updated 8 ಜುಲೈ 2024, 16:25 IST
ಅಕ್ಷರ ಗಾತ್ರ

ಬೀದರ್‌: ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಮಿತಿಯಿಂದ ನಗರದಲ್ಲಿ ಭಾನುವಾರ ಮೀಸಲಾತಿಯ ಜನಕ ಶಾಹೂ ಮಹಾರಾಜರ ಜಯಂತಿ ಹಾಗೂ ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯ ಘಟಕದ ಅಧ್ಯಕ್ಷ ಶ್ರೀನಾಥ ಪೂಜಾರಿ, ಶಿಕ್ಷಣವು ದುಬಾರಿಯಾಗಿದೆ. ಅದೀಗ ಉದ್ಯಮವಾಗಿದೆ. ಶಿಕ್ಷಣ ಸರ್ವರ ಹಕ್ಕು ಆಗಬೇಕು. ಆಗ ಸಮಾಜದಲ್ಲಿ ಬದಲಾವಣೆ ಕಾಣಲು ಸಾಧ್ಯ ಎಂದು ಹೇಳಿದರು.

ಅಂಬೇಡ್ಕರ್‌ ಅವರು ಅವರ ವಿಧ್ಯಾರ್ಥಿ ಜೀವನದಲ್ಲಿ ಎಷ್ಟು ಕಷ್ಟಪಟ್ಟು ಓದುತ್ತಿದ್ದರು? ಎಷ್ಟು ಗಂಟೆಗಳ ಕಾಲ ಓದುತ್ತಿದ್ದರು? ನಾವೆಲ್ಲ ವಿಚಾರ ಮಾಡಬೇಕಿದೆ. ಅವರ ವಿಚಾರಗಳಲ್ಲಿ ನಾವು ನಿಜವಾಗಲೂ ನಡೆಯುತ್ತಿದ್ದೇವೆಯೇ ಎನ್ನುವುದನ್ನು ಪ್ರಶ್ನೆ ಮಾಡಿಕೊಳ್ಳಬೇಕು. ಬಾಬಾ ಸಾಹೇಬರು ತಮ್ಮ ಹೊಟ್ಟೆಗಾಗಿ, ಬಟ್ಟೆಗಾಗಿ, ಸ್ವಂತ ಜೀವನಕ್ಕಾಗಿ ಓದಿದರೆ ನಮ್ಮ ಪರಿಸ್ಥಿತಿ ಏನಿರುತ್ತಿತ್ತು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ಶಿಕ್ಷಣಕ್ಕಾಗಿ ಸಮಾಜವನ್ನು ಎಬ್ಬಿಸುವ ಕೆಲಸ ಮಾಡಬೇಕಿದೆ. ನಮ್ಮನ್ನಾಳುವ ಸರ್ಕಾರಗಳು ಮಹಾ ಪುರುಷರ ಇತಿಹಾಸವನ್ನು ಅಳಿಸಿ ಹಾಕುತ್ತಿವೆ. ಶಿಕ್ಷಣ ಎನ್ನುವುದು ಪ್ರಮಾಣ ಪತ್ರಕ್ಕಾಗಿ ಸೀಮಿತವಾಗುತ್ತಿದೆ. ಸಮಾಜದ ಪ್ರತಿಯೊಬ್ಬರೂ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಶೀಘ್ರದಲ್ಲೇ ದಲಿತ ವಿದ್ಯಾರ್ಥಿ ಪರಿಷತ್‌ನಿಂದ ರಾಜ್ಯದಾದ್ಯಂತ ಉಚಿತ ಅಂಬೇಡ್ಕರ್‌ ಆಫೀಸರ್ಸ್ ಅಕಾಡೆಮಿ ಹೆಸರಿನಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು.

ವಿಚಾರವಾದಿ ವಿಠಲದಾಸ ಪ್ಯಾಗೆ ಮಾತನಾಡಿ, ಶಿಕ್ಷಣ ಇಂದು ಎಲ್ಲರಿಗೂ ಸಿಗುತ್ತಿಲ್ಲ. ಅನೇಕರು ಅದರಿಂದ ವಂಚಿತರಾಗುತ್ತಿದ್ದಾರೆ. ಶಿಕ್ಷಣದಿಂದ ಕೆಳವರ್ಗದವರನ್ನು ದೂರವಿಡುವ ಹುನ್ನಾರ ನಡೆಯುತ್ತಿದೆ. ಜಾತಿಯ ಭಯ ಹುಟ್ಟಿಸುತ್ತಿದ್ದಾರೆ. ಜಾತಿಯ ಹೆಸರಲ್ಲೇ ನಮ್ಮನ್ನು ಕುಗ್ಗಿಸಲಾಗುತ್ತಿದೆ. ಆದರೆ, ಅದಕ್ಕೆ ಹೆದರದೆ, ಕುಗ್ಗದೇ ಶಿಕ್ಷಣ ಪಡೆದು ಮುಖ್ಯ ವಾಹಿನಿಗೆ ಬರಬೇಕೆಂದು ಸಲಹೆ ಮಾಡಿದರು.

ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಸಂದೀಪ ಕಾಂಟೆ ಮಾತನಾಡಿ, ಶಾಹೂ ಮಹಾರಾಜರು ಬಹಳ ದೊಡ್ಡ ಶೈಕ್ಷಣಿಕ ಕ್ರಾಂತಿಕಾರಿ, ಸಾಮಾಜಿಕ ಬದಲಾವಣೆಯ ಹರಿಕಾರರು. ಶೋಷಿತರಿಗೆ ಮೊಟ್ಟ ಮೊದಲ ಬಾರಿಗೆ ಮೀಸಲಾತಿ ಕಲ್ಪಿಸಿದವರು ಎಂದರು ನೆನೆದರು.

ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಯಲ್ಲಿ ಶೇ 85ಕ್ಕಿಂತ ಹೆಚ್ಚಿನ ಅಂಕ ಪಡೆದ 60ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅಂಬೇಡ್ಕರ್‌ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು. 

ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸುಭಾಷ ನಾಗೂರೆ, ಮುಖಂಡರಾದ ಬಾಬುರಾವ್‌ ಪಾಸ್ವಾನ್‌, ಶ್ರೀಪತರಾವ್‌ ದೀನೆ, ಶಿವಕುಮಾರ ನೀಲಿಕಟ್ಟಿ, ಅಂಬಾದಾಸ ಗಾಯಕವಾಡ, ಸಾಯಿ ಸಿಂಧೆ, ರಮೇಶ ಮಾಲೆ, ಆನಂದ ಕಾಂಬಳೆ, ಪಂಢರಿನಾಥ ವಾಸುದೇವ, ಶ್ರೀಕಾಂತ ಮೂಲಭಾರತಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT