ಸೋಮವಾರ, ಆಗಸ್ಟ್ 8, 2022
21 °C
ಮಾಜಿ ಸಂಸದ, ಆರೋಗ್ಯ ಹಸ್ತ ಸಮಿತಿ ಅಧ್ಯಕ್ಷ ಧ್ರುವನಾರಾಯಣ ಆರೋಪ

ಸೋಂಕು ನಿಯಂತ್ರಿಸುವಲ್ಲಿ ಸರ್ಕಾರ ವಿಫಲ: ಧ್ರುವನಾರಾಯಣ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಭಾಲ್ಕಿ: ರಾಜ್ಯ ಹಾಗೂ ದೇಶದಲ್ಲಿ ಕೊರೊನಾ ಸೋಂಕು ನಿಯಂತ್ರಿಸವಲ್ಲಿ ಬಿಜೆಪಿ ನೇತೃತ್ವದ ಸರ್ಕಾರಗಳು ವಿಫಲವಾಗಿದೆ ಎಂದು ಆರೋಗ್ಯ ಹಸ್ತ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಧ್ರುವನಾರಾಯಣ ಆರೋಪಿಸಿದರು.

ಪಟ್ಟಣದ ಬಿಕೆಐಟಿ ಕಾಲೇಜಿನಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಕಾಂಗ್ರೆಸ್ ಘಟಕದ ವತಿಯಿಂದ ಭಾನುವಾರ ಆಯೋಜಿಸಿದ್ದ ಆರೋಗ್ಯ ಹಸ್ತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಸರ್ಕಾರದ ಆಡಳಿತದ ವೈಫಲ್ಯದಿಂದ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 40 ಲಕ್ಷ ದಾಟಿದ್ದು, ವಿಶ್ವದಲ್ಲಿ ಎರಡನೇ ಸ್ಥಾನಕ್ಕೆ ತಲುಪಿದ್ದೇವೆ. ರಾಜ್ಯದಲ್ಲಿ 6,500ಕ್ಕೂ ಅಧಿಕ ಜನ ಸೋಂಕಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿದರು.

ಆರಂಭದಲ್ಲಿ ಸೋಂಕು ನಿಯಂತ್ರಿಸಲು ಸರ್ಕಾರಕ್ಕೆ ಕಾಂಗ್ರೆಸ್ ಸಹಕಾರ ನೀಡಿತು. ಲಾಕ್‌ಡೌನ್ ಸಂದರ್ಭದಲ್ಲಿ ಕಾಂಗ್ರೆಸ್ ನಿಯೋಗ ಸಿಎಂ ಬಿಎಸ್‍ವೈ ಅವರನ್ನು ಮೂರು ಬಾರಿ ಭೇಟಿ ಮಾಡಿ ಅಸಂಘಟಿತ ಕಾರ್ಮಿಕರು, ರೈತರು, ಬಡವರಿಗೆ ಸಹಾಯಧನ ನೀಡುವಂತೆ ಒತ್ತಾಯಿಸಿತು. ಆದರೆ ಬಿಜೆಪಿ ಸರ್ಕಾರ ಸ್ಪಂದನೆ ಮಾಡಲಿಲ್ಲ. ಇಂತಹ ಸಂದರ್ಭದಲ್ಲಿ ರಾಜ್ಯದಾದ್ಯಂತ ಕಾಂಗ್ರೆಸ್ ನಾಯಕರು ಬಡಜನರ ನೆರವಿಗೆ ಧಾವಿಸಿರುವುದು ಯಾರು ಮರೆಯುವಂತಿಲ್ಲ ಎಂದರು.

ಜನರ ಆರೋಗ್ಯ ರಕ್ಷಣೆಯಲ್ಲಿ ಬಿಜೆಪಿ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಇಂತಹ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಆರೋಗ್ಯ ಹಸ್ತ ಎನ್ನುವ ವಿನೂತನ ಕಾರ್ಯಕ್ರಮ ಆಯೋಜಿಸಿ ಸೋಂಕು ನಿಯಂತ್ರಣಕ್ಕೆ ಮುಂದಾಗಿದೆ. ಪ್ರತಿ ಪಂಚಾಯಿತಿಗೆ ಇಬ್ಬರಿಗೆ ತರಬೇತಿ ನೀಡಿ ಮನೆ ಮನೆಗೂ ಕಳುಹಿಸಿ ಕೊಡಲಾಗುತ್ತಿದೆ. ಸುಮಾರು 15 ಸಾವಿರ ಕಾರ್ಯಕರ್ತರು ವಾರಿಯರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ. 8500ಕ್ಕೂ ಅಧಿಕ ಕಿಟ್ ನೀಡಲಾಗುತ್ತಿದೆ. 320 ಹಿರಿಯ ವೈದ್ಯರು, ತಜ್ಞರು ತರಬೇತಿ ನೀಡುತ್ತಿದ್ದಾರೆ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ, ಸರ್ಕಾರ ಪೂರ್ವ ಸಿದ್ಧತೆ ಇಲ್ಲದೇ ಲಾಕ್‍ಡೌನ್ ಘೋಷಣೆ ಮಾಡಿದರ ಪರಿಣಾಮ ಇವತ್ತು ರಾಜ್ಯದಲ್ಲಿ ಕೊರೊನಾ ನಿಯಂತ್ರಣ, ನಿರ್ವಹಣೆ ಮಾಡಲು ಬಿಜೆಪಿ ವಿಫಲವಾಗಿದೆ. ಕೊರೊನಾ ಉಪಕರಣ ಖರೀದಿಯಲ್ಲಿ ಸಾಕಷ್ಟು ಲೂಟಿ ನಡೆದಿದೆ ಎಂದು ಆಪಾದಿಸಿದರು.

ಇದರ ಜತೆಗೆ ಸರ್ಕಾರ ಭೂ ಸುಧಾರಣೆ, ಎಪಿಎಂಸಿ ಕಾಯ್ದೆ, ಕಾರ್ಮಿಕ ನೀತಿ ತಿದ್ದುಪಡಿ ತಂದು ರೈತರು, ಬಡ ಜನರ ಮೇಲೆ ಬರೆ ಎಳೆಯುವಂತಹ ಕೆಲಸ ಮಾಡುತ್ತಿದೆ. ಇಂತಹ
ವ್ಯವಸ್ಥೆ ವಿರುದ್ಧ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು
ಎಂದು ತಿಳಿಸಿದರು.

ಕಲಬುರ್ಗಿ ಮಾಜಿ ಮೆಯರ್ ಶರಣು ಮೋದಿ, ಜಿ.ಪಂ ಮಾಜಿ ಅಧ್ಯಕ್ಷ ಶಿವರಾಜ ಹಾಸನಕರ್, ಎಪಿಎಂಸಿ ಅಧ್ಯಕ್ಷ ಬನಸಿಲಾಲ್, ತಾ.ಪಂ ಉಪಾಧ್ಯಕ್ಷ ಶಿವರಾಜ ಪಾಟೀಲ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ನಜೀರ್, ಆರೋಗ್ಯ ಹಸ್ತದ ವೈದ್ಯರಾದ ಡಾ.ಸಂಗಮೇಶ್, ಡಾ.ಯುವರಾಜ ಜಾಧವ್, ಪ್ರಮುಖರಾದ ಅಶೋಕಕುಮಾರ ಸೋನಜಿ, ಪ್ರಕಾಶ ಮಾಶೆಟ್ಟೆ, ಅಶೋಕ ಮಡ್ಡೆ ಇದ್ದರು. ತಾಲ್ಲೂಕು ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ್ ಚವ್ಹಾಣ ನಿರೂಪಿಸಿ, ವಂದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು