ಸೋಮವಾರ, ಜನವರಿ 27, 2020
17 °C
ಶಾಸ್ತ್ರೀಯ ನೃತ್ಯ ವೈಭವ ಪೌರಾಣಿಕ ನೃತ್ಯ ರೂಪಕ

ರಾಜ್ಯಮಟ್ಟದ ಕಲಾ ಸಂಭ್ರಮೋತ್ಸವ 12ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ನಾಟ್ಯಶ್ರೀ ನೃತ್ಯಾಲಯವು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಇಲ್ಲಿಯ ಜಿಲ್ಲಾ ರಂಗಮಂದಿರದಲ್ಲಿ ಜನವರಿ 12ರಂದು ರಾಜ್ಯಮಟ್ಟದ ಕಲಾ ಸಂಭ್ರಮೋತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಿದೆ.

‘ಕಲಾ ಸಂಭ್ರಮೋತ್ಸವದಲ್ಲಿ ಭರತನಾಟ್ಯ, ಕಥಕ್, ಕೂಚಿಪುಡಿ, ಜಾನಪದ ನೃತ್ಯ, ಸಂಗೀತ ಹಾಗೂ ಉಪನ್ಯಾಸ ಕಾರ್ಯಕ್ರಮಗಳು ನಡೆಯಲಿವೆ’ ಎಂದು ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ನಗರದಲ್ಲಿ ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಬೆಳಿಗ್ಗೆ 10.30ಕ್ಕೆ ನಡೆಯಲಿರುವ ‘ಶಾಸ್ತ್ರೀಯ ನೃತ್ಯ ವೈಭವ’ದಲ್ಲಿ ನಾಟ್ಯಶ್ರೀ ನೃತ್ಯಾಲಯದ ಕಲಾವಿದರು ಭರತನಾಟ್ಯ ಪ್ರದರ್ಶಿಸಲಿದ್ದಾರೆ. ಶ್ವೇತಾ ವಿ., ಅವರ ನಿರ್ದೇಶನದಲ್ಲಿ ಪೌರಾಣಿಕ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ’ ಎಂದು ತಿಳಿಸಿದರು.

‘ಅಂದು ಮಧ್ಯಾಹ್ನ 12.30ಕ್ಕೆ ಉಡುಪಿಯ ಕೊಡವೂರು ನೃತ್ಯ ನಿಕೇತನದ ನಿರ್ದೇಶಕ ಕೆ.ಸುಧೀರರಾವ್ ಶಾಸ್ತ್ರೀಯ ನೃತ್ಯ ಮತ್ತು ವ್ಯಕ್ತಿತ್ವ ವಿಕಸನ ಕುರಿತ ವಿಶೇಷ ಉಪನ್ಯಾಸ ನೀಡುವರು. ಜಾನಪದ ಅಕಾಡೆಮಿ ಸದಸ್ಯ ರಾಜೇಂದ್ರ ಯರನಾಳೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಹಾಗೂ ಹಿರಿಯ ಸಾಹಿತಿ ಪ್ರೊ. ಶಿವಕುಮಾರ ಕಟ್ಟೆ ಉಪಸ್ಥಿತರಿರುವರು’ ಎಂದು ಹೇಳಿದರು.

‘ಮಧ್ಯಾಹ್ನ 2.45ಕ್ಕೆ ಬಳ್ಳಾರಿಯ ಅಂತರರಾಷ್ಟ್ರೀಯ ಕಲಾವಿದ ಮಯೂರಿ ಬಸವರಾಜ ಅವರು ‘ತರಂಗಂ’ ಮತ್ತು ‘ಭಾಮಾಕಲಾಪ’ ಕೂಚಿಪುಡಿ ನೃತ್ಯ ಪ್ರದರ್ಶಿಸಲಿದ್ದಾರೆ’ ಎಂದು ತಿಳಿಸಿದರು.

‘ಮಧ್ಯಾಹ್ನ 3.30ಕ್ಕೆ ವಿಜಯಪುರದ ಖ್ಯಾತ ಅಂತರರಾಷ್ಟ್ರೀಯ ಕಲಾವಿದ ರಂಗನಾಥ ಬತ್ತಾಸಿ ನಿರ್ದೇಶನದಲ್ಲಿ ಶಾಸ್ತ್ರೀಯ ನೃತ್ಯ ಕಥಕ್ ಪ್ರದರ್ಶನ ನಡೆಯಲಿದೆ. ಕಲಾವಿದರಾದ ಶಂಭುಲಿಂಗ ವಾಲ್ದೊಡ್ಡಿ, ಭಾನುಪ್ರಿಯಾ ಅರಳಿ, ಮಹೇಶ ಕುಂಬಾರ, ಮಹೇಶ್ವರಿ ಪಾಂಚಾಳ, ರೇಣುಕಾ ಎನ್.ಬಿ, ಪ್ರವೀಣಕುಮಾರ, ಇಮಾನುವೆಲ್, ಶೈಲಜಾ ದಿವಾಕರ್, ಭಾಗ್ಯಲಕ್ಷ್ಮಿ ಗುರುಮೂರ್ತಿ ಹಾಗೂ ರಮ್ಯ ಜೋಶಿ ಅವರು ಜಾನಪದ ಗೀತೆ, ದಾಸರ ಪದ, ಸುಗಮ ಸಂಗೀತ ಹಾಗೂ ವಚನ ಗಾಯನ ನಡೆಸಿಕೊಡುವರು’ ಎಂದು ವಿವರಿಸಿದರು.

‘ಸಂಜೆ 4ಕ್ಕೆ ಸಭಾ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಅವರು ಕಲಾ ಸಂಭ್ರಮೋತ್ಸವಕ್ಕೆ ಚಾಲನೆ ನೀಡುವರು. ಹಾರಕೂಡದ ಚನ್ನವೀರ ಶಿವಾಚಾರ್ಯರು ಸಾನಿಧ್ಯ ವಹಿಸುವರು’ ಎಂದರು.

‘ಸಂಸದ ಭಗವಂತ ಖೂಬಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಲವಂತರಾವ್ ಪಾಟೀಲ, ರಾಯಚೂರು ಕೃಷಿ ವಿಶ್ವವಿದ್ಯಾಲಯದ ಡಾ.ಕೆ. ಭವಾನಿ, ಬೀದರ್‌ನ ದಕ್ಷಿಣ ಕರಾವಳಿ ಕನ್ನಡ ಸಂಘದ ಅಧ್ಯಕ್ಷ ಪ್ರೊ.ಪಿ.ಎನ್.ದಿವಾಕರ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಉಡುಪಿಯ ಕೊಡವೂರು ನೃತ್ಯ ನಿಕೇತನದ ನಿರ್ದೇಶಕ ಕೆ. ಸುಧೀರರಾವ್ ಉಪಸ್ಥಿತರಿರುವರು. ನಾಟ್ಯಶ್ರೀ ನೃತ್ಯಾಲಯದ ನಿರ್ದೇಶಕಿ ರಾಣಿ ಸತ್ಯಮೂರ್ತಿ ಅಧ್ಯಕ್ಷತೆ ವಹಿಸುವರು’ ಎಂದು ಹೇಳಿದರು.

‘ಸಂಜೆ 5.30ಕ್ಕೆ ಜನಪದ ಸಂಭ್ರಮ ಕಾರ್ಯಕ್ರಮ ನಡೆಯಲಿದೆ. ನಾಟ್ಯಶ್ರೀ ನೃತ್ಯಾಲಯದ ಕಲಾವಿದರಿಂದ ವೈವಿಧ್ಯಮಯ ಸಮೂಹ ನೃತ್ಯ, ಶಾಂಭವಿ ತಂಡದಿಂದ ನೃತ್ಯ ರೂಪಕ ಹಾಗೂ ನಾಟ್ಯಶ್ರೀ ನೃತ್ಯಾಲಯದ ಪಾಲಕರು ಕೋಲಾಟ ಪ್ರದರ್ಶಿಸಲಿದ್ದಾರೆ’ ಎಂದು ತಿಳಿಸಿದರು.

ನಾಟ್ಯಶ್ರೀ ನೃತ್ಯಾಲಯದ ಅಧ್ಯಕ್ಷ ಸತ್ಯಮೂರ್ತಿ ಹಾಗೂ ಪ್ರತಿಭಾ ಚಾಮಾ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)