ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಸನಗಳಿಂದ ದೂರವಿರಿ: ಶಿಲ್ಪಾ

ಮಹಾಂತ ಶಿವಯೋಗಿ ಜಯಂತಿ ಆಚರಣೆ
Last Updated 1 ಆಗಸ್ಟ್ 2022, 13:50 IST
ಅಕ್ಷರ ಗಾತ್ರ

ಬೀದರ್‌: ‘ಪ್ರಸ್ತುತ ಬಹಳಷ್ಟು ಯುವಕ, ಯುವತಿಯರು ಅನೇಕ ಬಗೆಯ ವ್ಯಸನಗಳ ದಾಸರಾಗುತ್ತಿದ್ದಾರೆ. ಈ ಮೂಲಕ ತಮ್ಮ ಭವಿಷ್ಯವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಪ್ರತಿಯೊಬ್ಬರೂ ಇಂದು ಸ್ವಸ್ಥ ಪರಿವಾರ ಹಾಗೂ ಸಮಾಜಕ್ಕಾಗಿ ವ್ಯಸನಗಳಿಂದ ದೂರವಿರಬೇಕು‘ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಶಿಲ್ಪಾ ಎಂ. ಮನವಿ ಮಾಡಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಪೂಜ್ಯ ಚೆನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಮಹಾಂತ ಶಿವಯೋಗಿ ಜಯಂತಿ ಪ್ರಯುಕ್ತ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಯುವ ಜನಾಂಗ ಸ್ವಸ್ಥವಾಗಿದ್ದರೆ ಸಮಾಜ ಹಾಗೂ ದೇಶ ಸದೃಢವಾಗಿರುತ್ತದೆ. ಈ ದಿಸೆಯಲ್ಲಿ ಯುವಕರು ವ್ಯಸನಗಳಿಂದ ದೂರವಿರಲು ಪ್ರತಿಜ್ಞೆ ಮಾಡಬೇಕಿದೆ’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಶಿವಕುಮಾರ ಶೀಲವಂತ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ವ್ಯಸನ ಮುಕ್ತ ಪ್ರತಿಜ್ಞಾ ವಿಧಿ ಬೋಧಿಸಿದರು.

ಹುಲಸೂರಿನ ಗುರುಬಸವೇಶ್ವರ ಸಂಸ್ಥಾನ ಮಠದ ಶಿವನಾಂದ ಸ್ವಾಮೀಜಿ ಮಾತನಾಡಿ, ‘ಇಳಕಲ್ ತಾಲ್ಲೂಕಿನ ಚಿತ್ತೂರು ಮಠದ ಪೂಜ್ಯ ವಿಜಯ ಮಹಾಂತೇಶ ಶಿವಯೋಗಿಗಳ ಜನ್ಮದಿನದಂದು ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದರಿಂದ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲು ಸಾಧ್ಯವಾಗಿದೆ’ ಎಂದರು.


ಬಸವ ಕೇಂದ್ರದ ಜಿಲ್ಲಾ ಘಟಕದ ಅಧ್ಯಕ್ಷ ಶರಣಪ್ಪ ಮಿಠಾರೆ ಉಪನ್ಯಾಸ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ, ಕೈಗಾರಿಕೆ ಇಲಾಖೆಯ ಉಪ ನಿರ್ದೇಶಕ ರಮೇಶ ಮಠಪತಿ, ಅಬಕಾರಿ ಇಲಾಖೆಯ ಡಿ.ವೈ.ಎಸ್.ಪಿ ಅನಂದ ಉಕ್ಕಲಿ, ವಾಣಿಜ್ಯ ತೆರಿಗೆ ಇಲಾಖೆಯ ಅಧಿಕಾರಿ ಮಹೇಶ ಮಾಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶಟ್ಟಿ , ಇದ್ದರು.

ವ್ಯಸನ ಮುಕ್ತ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಚೆನ್ನಬಸವ ಹೇಡೆ ಕಾರ್ಯಕ್ರಮ ನಿರೂಪಿಸಿದರು. ವಿಜಯ ಮಹಾಂತೇಶ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮಕ್ಕೆ ಬಾರದ ಜನ

ಚೆನ್ನಬಸವ ಪಟ್ಟದ್ದೇವರು ರಂಗ ಮಂದಿರದಲ್ಲಿ ಮಹಾಂತ ಶಿವಯೋಗಿ ಜಯಂತಿ ಅಂಗವಾಗಿ ಆಯೋಜಿಸಿದ್ದ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ನಿರೀಕ್ಷೆಯಂತೆ ಸಾರ್ವಜನಿಕರು ಪಾಲ್ಗೊಳ್ಳಲಿಲ್ಲ.

ಜನರೇ ಇಲ್ಲದ ಕಾರಣ ಅಧಿಕಾರಿಗಳು ಮೂರು ತಾಸುಗಳ ವರೆಗೂ ಕಾಯಬೇಕಾಯಿತು. ಜಿಲ್ಲಾಡಳಿತ ಆಮಂತ್ರಣ ಪತ್ರಿಕೆ ಪ್ರಕಟಿಸಿದರೂ ಒಬ್ಬರೂ ಜನಪ್ರತಿನಿಧಿ ರಂಗ ಮಂದಿರದತ್ತ ಸುಳಿಯಲಿಲ್ಲ. ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆ ಸುಮಾರಿಗೆ ಆರಂಭವಾದರೂ ಆಮಂತ್ರಣ ಪತ್ರಿಕೆಯಲ್ಲಿದ್ದ ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರು ಮಾತ್ರ ಕಾರ್ಯಕ್ರಮಕ್ಕೆ ಬಂದಿದ್ದರು. ಉದ್ಘಾಟನೆ ಸಂದರ್ಭದಲ್ಲಿ ಇನ್ನಷ್ಟು ಅಧಿಕಾರಿಗಳು ಸೇರಿಕೊಂಡರು.

ನಂತರ ಅನಿವಾರ್ಯವಾಗಿ ಬೇರೆ ಬೇರೆ ಇಲಾಖೆಯ ಅಧಿಕಾರಿಗಳನ್ನು ವೇದಿಕೆ ಮೇಲೆ ಕರೆಸಬೇಕಾಯಿತು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳನ್ನು ಕರೆ ತರಬೇಕಾಯಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮಕ್ಕೂ ಇಂತಹದ್ದೇ ಸಮಸ್ಯೆ ಕಾಡಿತು. ಕಚೇರಿಯೊಳಗಿನ ಸಿಬ್ಬಂದಿಯನ್ನು ಕರೆಸಿ ಕಾರ್ಯಕ್ರಮ ಪೂರ್ಣಗೊಳಿಸಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT