ಸೋಮವಾರ, ಅಕ್ಟೋಬರ್ 18, 2021
22 °C

ಖಟಕಚಿಂಚೋಳಿ: ವಿದ್ಯಾರ್ಥಿಗಳಿಗೆ ತಪ್ಪದ ಸಂಕಷ್ಟ- ಗ್ರಾಮೀಣ ಭಾಗಕ್ಕೆ ಬಾರದ ಬಸ್

ಗಿರಿರಾಜ ಎಸ್.ವಾಲೆ Updated:

ಅಕ್ಷರ ಗಾತ್ರ : | |

Prajavani

ಖಟಕಚಿಂಚೋಳಿ: ರಾಜ್ಯದಾದ್ಯಂತ ಶಾಲಾ ಕಾಲೇಜುಗಳು ಪ್ರಾರಂಭವಾಗಿ ಎರಡು ತಿಂಗಳುಗಳೇ ಕಳೆದಿವೆ. ಆದರೆ, ಸಾರಿಗೆ ಅಧಿಕಾರಿಗಳು ಗ್ರಾಮೀಣ ಪ್ರದೇಶಗಳಿಗೆ ಬಸ್ ಓಡಿಸದಿರುವುದರಿಂದ ವಿದ್ಯಾರ್ಥಿಗಳ ಪರದಾಟ ನಿಂತಿಲ್ಲ.

ಹೋಬಳಿಯ ಸುಲ್ತಾನಬಾದ್ ವಾಡಿ, ನಾವದಗಿ, ಚಳಕಾಪುರ ವಾಡಿ ಸೇರಿದಂತೆ ಅನೇಕ ಗ್ರಾಮಗಳಿಗೆ ಬಸ್ ವ್ಯವಸ್ಥೆ ಇಲ್ಲದಿರುವುದರಿಂದ ನಗರ, ಪಟ್ಟಣ ಪ್ರದೇಶಗಳ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ನಮ್ಮದು ಪುಟ್ಟ ಗ್ರಾಮ. ಇಲ್ಲಿ ಕೇವಲ ಐದನೇ ತರಗತಿವರೆಗೆ ಶಾಲೆ ಇದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ಖಟಕಚಿಂಚೋಳಿ ಅಥವಾ ಭಾಲ್ಕಿ ಪಟ್ಟಣಕ್ಕೆ ತೆರಳುವ ಅನಿವಾರ್ಯವಿದೆ. ಪ್ರತಿ ದಿನ ಬೆಳಿಗ್ಗೆ ನಮ್ಮೂರಿಗೆ ಬಸ್ ಬರುವುದಿಲ್ಲ. ಹೀಗಾಗಿ ನಾಲ್ಕೈದು ಕಿಲೋಮೀಟರ್ ನಡೆದುಕೊಂಡು ಹೋಗುತ್ತಿದ್ದೇವೆ. ಇದರಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ಸುಲ್ತಾನಬಾದ್ ವಾಡಿ ಗ್ರಾಮದ ವಿದ್ಯಾರ್ಥಿನಿ ರೇಣುಕಾ ಅಸಮಾಧಾನ ವ್ಯಕ್ತಪಡಿಸುತ್ತಾಳೆ.

ಪ್ರತಿ ದಿನ ಬೆಳಿಗ್ಗೆ ನಾಲ್ಕೈದು ಕಿಲೋಮೀಟರ್ ನಡೆದುಕೊಂಡು ಹೋಗುವುದು ಹಾಗೂ ಮನೆಗೆ ಬರುವುದು ಸೇರಿ ಹತ್ತು ಕಿ.ಮೀ. ಆಗುತ್ತಿದೆ. ಇದರಿಂದ ತುಂಬಾ ಆಯಾಸವಾಗುತ್ತಿದೆ. ಓದಬೇಕೆಂಬ ಆಸಕ್ತಿಯೇ ಕಡಿಮೆಯಾಗುತ್ತಿದೆ. ಬಸ್ ವ್ಯವಸ್ಥೆ ಇದ್ದರೆ ಸಮಯವು ಉಳಿಯುತ್ತದೆ ಆಯಾಸವು ಆಗುವುದಿಲ್ಲ ಎಂದು ವಿದ್ಯಾರ್ಥಿ ಬಸವರಾಜ ಅಸಹಾಯಕತೆ ಹೊರಹಾಕುತ್ತಾನೆ.

ಬಸ್ಸಿನ ಕೆಲವು ಚಾಲಕರು ವಿದ್ಯಾರ್ಥಿಗಳನ್ನು ಕಂಡರೆ ಸಾಕು ಬಸ್ ನಿಲ್ಲಿಸದೇ ಹಾಗೆಯೇ ಹೋಗುತ್ತಾರೆ. ಇನ್ನು ಕೆಲವರು ದೂರದಲ್ಲಿಯೇ ಪ್ರಯಾಣಿಕರನ್ನು ಇಳಿಸುತ್ತಾರೆ. ಇದರಿಂದ ವಿದ್ಯಾರ್ಥಿಗಳು ಮಳೆ, ಬಿಸಿಲು ಎನ್ನದೆ ಕಾಯುತ್ತಾ ನಿಲ್ಲಬೇಕಾಗಿದೆ ಎಂದು ವಿದ್ಯಾರ್ಥಿಗಳು ನೋವು ವ್ಯಕ್ತಪಡಿಸುತ್ತಾರೆ.

ವಾರದಿಂದ ಆಗಾಗ ಮಳೆ ಸುರಿಯುತ್ತಿದೆ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ಶಾಲೆಗೆ ಬರಲು ಆಗದೆ ತರಗತಿಯಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರ ಹಲವಾರು ಯೋಜನೆಗಳಲ್ಲಿ ಕೋಟಿ ಕೋಟಿ ರೂಪಾಯಿ ಅನುದಾನ ನೀಡುತ್ತಿದೆ. ಅದೇ ರೀತಿ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುವುದನ್ನು ತಪ್ಪಿಸಲು ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು ಎಂದು ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ ಮುಗನೂರ ಒತ್ತಾಯಿಸುತ್ತಾರೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಸ್ ಗಾಗಿ ಪರದಾಡುತ್ತಿರುವುದು ಹೊಸತೇನಲ್ಲ. ಸಾರಿಗೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ಜನ್ಮ ಭೂಮಿ ಕನ್ನಡ ರಕ್ಷಣಾ ಪಡೆ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಕೆನಾಡೆ ತಿಳಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು