ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆ: ಬೀದಿಬದಿ ವ್ಯಾಪಾರಸ್ಥರ ಬದುಕಿಗೆ ಆಸರೆ

ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಯಶಸ್ಸಿಗೆ ಬಸವಕಲ್ಯಾಣ ನಗರಸಭೆಗೆ ಪ್ರಶಸ್ತಿ
Published : 24 ಆಗಸ್ಟ್ 2024, 5:51 IST
Last Updated : 24 ಆಗಸ್ಟ್ 2024, 5:51 IST
ಫಾಲೋ ಮಾಡಿ
Comments

ಬಸವಕಲ್ಯಾಣ: ಬೀದಿಬದಿ ವ್ಯಾಪಾರಸ್ಥರಿಗೆ ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯಲ್ಲಿ ಸಾಲ ದೊರಕಿಸಿದ ಕಾರಣಕ್ಕೆ ಬಸವಕಲ್ಯಾಣ ನಗರಸಭೆಗೆ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಪ್ರಶಂಸಾ ಪ್ರಶಸ್ತಿ ದೊರೆತಿದೆ.

ಕಲಬುರಗಿ ವಿಭಾಗ ಮಟ್ಟದಲ್ಲಿ ಇಲ್ಲಿನ ನಗರಸಭೆ ಮಾತ್ರ ಈ ಪ್ರಶಸ್ತಿಗೆ ಭಾಜನವಾಗಿದೆ. ಆಗಸ್ಟ್ 22ರಂದು ಬೆಂಗಳೂರಿನ ವಿಕಾಸ ಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ, ಜೀವನೋಪಾಯ ಸಚಿವ ಡಾ.ಶರಣ ಪ್ರಕಾಶ ಪಾಟೀಲ ಪ್ರಶಸ್ತಿ ಪ್ರದಾನ ಮಾಡಿದರು. ಪೌರಾಯುಕ್ತ ರಾಜೀವ ಬಣಕಾರ್, ಸಂಪನ್ಮೂಲ ವ್ಯಕ್ತಿಗಳಾದ ಜ್ಯೋತಿ ರಘು, ರಾಣಿ ವಡ್ಡೆ, ಸರಸ್ವತಿ ಅಮರಪಾಲ್ ಪ್ರಶಸ್ತಿ ಸ್ವೀಕರಿಸಿದ್ದಾರೆ.

ರಾಷ್ಟ್ರೀಯ ಜೀವನೋಪಾಯ ಅಭಿಯಾನದ ಅಡಿಯಲ್ಲಿ ವ್ಯಾಪಾರಸ್ಥರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದೇ ಈ ಯೋಜನೆಯ ಧ್ಯೇಯೋದ್ದೇಶವಾಗಿದೆ. ಬೀದಿಬದಿ ವ್ಯಾಪಾರಸ್ಥರಿಗೆ ಸ್ವಂತ ಮನೆ, ಸ್ವಂತ ಅಂಗಡಿ, ವ್ಯಾಪಾರಕ್ಕಾಗಿ ಜಾಗ ಇರುವುದಿಲ್ಲ. ತಳ್ಳು ಬಂಡಿ, ಬುಟ್ಟಿ, ಚಾಪೆಯ ಮೇಲೆ ಅಲ್ಪಸ್ವಲ್ಪ ತರಕಾರಿ, ಹಣ್ಣು, ತಿನಿಸು, ಅಲ್ಲದೆ ವಿವಿಧ ಸಾಮಾನುಗಳನ್ನು ಹರಡಿಕೊಂಡು ಇಡೀ ದಿನ ಅತ್ತಿಂದಿತ್ತ ಓಡಾಡುತ್ತಾರೆ. ಲಾಭವೂ ಅಷ್ಟಕ್ಕಷ್ಟೇ, ಕುಟುಂಬಕ್ಕೆ ಎರಡು ಹೊತ್ತಿನ ಊಟವೂ ಸಿಗದಂಥ ಪರಿಸ್ಥಿತಿ ಇದೆ. ಅಂಥವರ ಬದುಕಿಗೆ ಈ ಯೋಜನೆ ಆಸರೆಯಾಗಿದೆ.

‘ಸಾಮಾನ್ಯ ಜನರು ಆರ್ಥಿಕವಾಗಿ ಸದೃಢರಾಗಲಿ ಎಂಬ ಸದುದ್ದೇಶದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸ್ವ-ನಿಧಿ ಯೋಜನೆ ಆರಂಭಿಸಿದ್ದಾರೆ. ನಗರಸಭೆ ಬರೀ ನಾಗರಿಕ ಸೌಲಭ್ಯ ನೀಡುವುದಕ್ಕೆ ಅಷ್ಟೇ ಅಲ್ಲ, ಈ ಯೋಜನೆಯ ಅನುಷ್ಠಾನದಲ್ಲಿಯೂ ಹೆಚ್ಚಿನ ಕಾಳಜಿ ವಹಿಸುತ್ತಿದೆ’ ಎಂದು ಪೌರಾಯುಕ್ತ ರಾಜೀವ ಬಣಕಾರ್ ತಿಳಿಸಿದ್ದಾರೆ.

‘2023-24ನೇ ಸಾಲಿನಲ್ಲಿ ನಗರದ 1,090 ಫಲಾನುಭವಿಗಳಿಗೆ ಸಾಲ ಸೌಲಭ್ಯ ಒದಗಿಸಲಾಗಿದೆ’ ಎಂದು ನಗರಸಭೆ ಸಮುದಾಯ ಸಂಘಟಕ ಶಿವಕುಮಾರ ರಾಗಾ ತಿಳಿಸಿದ್ದಾರೆ.

ಬಸವಕಲ್ಯಾಣ ನಗರಸಭೆಯ ಸಂಪನ್ಮೂಲ ವ್ಯಕ್ತಿಗಳು ಬೀದಿಬದಿ ವ್ಯಾಪಾರಸ್ಥರಿಗೆ ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಿರುವುದು
ಬಸವಕಲ್ಯಾಣ ನಗರಸಭೆಯ ಸಂಪನ್ಮೂಲ ವ್ಯಕ್ತಿಗಳು ಬೀದಿಬದಿ ವ್ಯಾಪಾರಸ್ಥರಿಗೆ ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯ ಬಗ್ಗೆ ಮಾಹಿತಿ ನೀಡುತ್ತಿರುವುದು

‘ತರಕಾರಿ, ಬಟ್ಟೆ, ಹಣ್ಣು ಮಾರಾಟಗಾರರು ಹಾಗೂ ಕಿರಾಣಿ ಅಂಗಡಿಯವರನ್ನು ಹುಡುಕಿಕೊಂಡು ಹೋಗಿ ಸಾಲ ಸೌಲಭ್ಯ ನೀಡಿದ್ದೇವೆ. ಪ್ರಥಮ ಹಂತದಲ್ಲಿ ₹10 ಸಾವಿರ, ನಂತರದಲ್ಲಿ ₹20 ಸಾವಿರ, ಅದಾದ ಮೇಲೆ ಇನ್ನೂ ಹೆಚ್ಚಿನ ಸಾಲ ದೊರಕಿಸಿ ಕೊಡಲಾಗಿದೆ’ ಎಂದು ಸಂಪನ್ಮೂಲ ವ್ಯಕ್ತಿ ಜ್ಯೋತಿ ರಘು ತಿಳಿಸಿದ್ದಾರೆ.

‘ಸಾಲ ಸೌಲಭ್ಯದ ಜೊತೆಗೆ ಪಡಿತರ ಚೀಟಿ ಮತ್ತು ಕಾರ್ಮಿಕರ ಗುರುತಿನ ಚೀಟಿಗಳನ್ನು ಸಹ ಮಾಡಿಸಿ ಕೊಡಲಾಗಿದೆ. ಇದಲ್ಲದೆ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆಯೂ ಜನಸಾಮಾನ್ಯರಿಗೆ ಮಾಹಿತಿ ನೀಡಲಾಗಿದೆ’ ಎಂದು ಸಂಪನ್ಮೂಲ ವ್ಯಕ್ತಿಗಳಾದ ರಾಣಿ ವಡ್ಡೆ ಹಾಗೂ ಸರಸ್ವತಿ ಅಮರಪಾಲ್ ಮಾಹಿತಿ ನೀಡಿದ್ದಾರೆ.

ರಾಜೀವ ಬಣಕಾರ್
ರಾಜೀವ ಬಣಕಾರ್
ನಗರಸಭೆಗೆ ರಾಜ್ಯಮಟ್ಟದ ಪ್ರಶಸ್ತಿ ಬಂದಿದ್ದರಿಂದ ಇನ್ನೂ ಹೆಚ್ಚಿನ ಸಾಧನೆಗೆ ಪ್ರೇರಣೆ ದೊರೆತಿದೆ. ಇದರಲ್ಲಿ ಸಂಘಟಕರು ಮತ್ತು ಸಂಪನ್ಮೂಲ ವ್ಯಕ್ತಿಗಳ ಶ್ರಮ ಅಡಗಿದೆ
ರಾಜೀವ ಬಣಕಾರ್ ಪೌರಾಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT