ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿಗಳಿಗೂ ಆದಾಯ ತೆರಿಗೆ ವಿನಾಯಿತಿ

ಸಂಯುಕ್ತ ಸೌಹಾರ್ದ ಸಹಕಾರಿ ನಿರ್ದೇಶಕ ಜ್ಯಾಂತಿಕರ್ ಹೇಳಿಕೆ
Last Updated 24 ಜನವರಿ 2020, 13:36 IST
ಅಕ್ಷರ ಗಾತ್ರ

ಬೀದರ್: ‘ರಾಜ್ಯದ ಸೌಹಾರ್ದ ಸಹಕಾರಿಗಳು ಆದಾಯ ತೆರಿಗೆ ಕಲಂ 80ಪಿ(2)ರ ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹವೆಂದು ರಾಜ್ಯ ಹೈಕೋರ್ಟ್ ತೀರ್ಪು ನೀಡಿದೆ’ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ನಿರ್ದೇಶಕ ಗುರುನಾಥ ಜ್ಯಾಂತಿಕರ್ ತಿಳಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನ್ಯಾಯಾಲಯದ ತೀರ್ಪಿನಿಂದಾಗಿ ಸಂಯುಕ್ತ ಸೌಹಾರ್ದ ಸಹಕಾರಿಗಳ ಆದಾಯ ತೆರಿಗೆ ತೊಂದರೆಗೆ ಪರಿಹಾರ ದೊರಕಿದೆ’ ಎಂದು ಹೇಳಿದರು.

‘ಈ ಮೊದಲು ಸೌಹಾರ್ದ ಸಹಕಾರಿ ಅಧಿನಿಯಮದ ಅಡಿ ನೋಂದಣಿಯಾದ ಸೌಹಾರ್ದ ಸಹಕಾರಿಗಳನ್ನು ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಸಹಕಾರ ಸಂಘಗಳೆಂದು ಪರಿಗಣಿಸಿರಲಿಲ್ಲ. ತೆರಿಗೆ ಪಾವತಿಗೆ ನೋಟಿಸ್ ಕೊಡುತ್ತಿದ್ದರು’ ಎಂದು ತಿಳಿಸಿದರು.

‘ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯು ಎರಡು ವರ್ಷಗಳಿಂದ ಸಮಸ್ಯೆಯ ಪರಿಹಾರಕ್ಕೆ ನಿರಂತರ ಪ್ರಯತ್ನ ನಡೆಸಿತ್ತು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಗಮನ ಸೆಳೆದಿತ್ತು. ತಜ್ಞರೊಂದಿಗೆ ಸಮಾಲೋಚನೆ ನಡೆಸಿ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿತ್ತು’ ಎಂದು ಹೇಳಿದರು.

‘ಸೌಹಾರ್ದ ಸಹಕಾರ ಕ್ಷೇತ್ರದ ಆದಾಯ ತೆರಿಗೆ ತೊಂದರೆಗಳನ್ನು ನಿವಾರಿಸುವ ದಿಸೆಯಲ್ಲಿಸೌಹಾರ್ದ ಸಹಕಾರಿ ಕಾಯ್ದೆ ತಿದ್ದುಪಡಿಗೂ ಪ್ರಯತ್ನ ನಡೆಸಲಾಗುತ್ತಿದೆ.
ಈ ಕುರಿತು ಮುಖ್ಯಮಂತ್ರಿ ಹಾಗೂ ಸಹಕಾರ ಸಚಿವರ ಗಮನ ಸೆಳೆಯಲಾಗಿದೆ. ಸಕಾರಾತ್ಮಕ ಸ್ಪಂದನೆ ದೊರಕಿದೆ. ಈಗಾಗಲೇ ಕಾಯ್ದೆ ತಿದ್ದುಪಡಿ ಪ್ರಕ್ರಿಯೆ ಶುರುವಾಗಿದೆ’ ಎಂದರು.

‘ಸಮಗ್ರ ಸಹಕಾರ ಕ್ಷೇತ್ರದ ಅನೇಕ ಆದಾಯ ತೆರಿಗೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸೌಹಾರ್ದ ಸಹಕಾರಿಯು ರಾಷ್ಟ್ರಮಟ್ಟದ ಸಂಸ್ಥೆಯಾದ ಸಹಕಾರ ಭಾರತಿಯೊಂದಿಗೆ ಪ್ರಯತ್ನಗಳನ್ನು ನಡೆಸುತ್ತಿದೆ. ಈ ಸಂಬಂಧ ಕೇಂದ್ರ ಹಣಕಾಸು ಸಚಿವರಿಗೆ ಮನವಿಯನ್ನೂ ಸಲ್ಲಿಸಲಾಗಿದೆ’ ಎಂದು ತಿಳಿಸಿದರು. ಜಿಲ್ಲಾ ಸೌಹಾರ್ದ ಸಂಯುಕ್ತ ಸಹಕಾರಿಯ ಉಪಾಧ್ಯಕ್ಷ ಸಂಜೀವ ಕುಮಾರ ಪಾಟೀಲ, ನಿರ್ದೇಶಕರಾದ ಜಗನ್ನಾಥ ಕರಂಜೆ, ನಂದಾ ವಿವೇಕಾನಂದ, ಶ್ರೀಕಾಂತ ಸ್ವಾಮಿ, ಸಂಯೋಜಕ ವೀರಶೆಟ್ಟಿ ಕಾಮಣ್ಣ, ಅಮೃತ ಹೊಸಮನಿ ಸುದ್ದಿಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT