ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19 ಆತಂಕದಲ್ಲೇ ಹಂದಿ ಜ್ವರದ ಭೀತಿ: ಒಂದೇ ಗ್ರಾಮದಲ್ಲಿ 70 ಹಂದಿಗಳ ಸಾವು

Last Updated 19 ಮಾರ್ಚ್ 2020, 4:16 IST
ಅಕ್ಷರ ಗಾತ್ರ

ಬೀದರ್‌: ಕಲಬುರ್ಗಿಯಲ್ಲಿ ಕೋವಿಡ್ 19 ಸೋಂಕಿನಿಂದ ವೃದ್ಧರೊಬ್ಬರು ಮೃತಪಟ್ಟ ಸುದ್ದಿ ಇನ್ನೂ ಹಚ್ಚ ಹಸಿರಿರುವಾಗಲೇ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಹಕ್ಕಿ ಜ್ವರವೂ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿದೆ. ಇದೀಗ ಹುಮನಾಬಾದ್ ತಾಲ್ಲೂಕಿನ ನಂದಗಾಂವದಲ್ಲಿ ಹಂದಿ ಜ್ವರದಿಂದ 70 ಹಂದಿಗಳು ಮೃತಪಟ್ಟ ನಂತರ ಜಿಲ್ಲೆಯ ಜನರ ಆತಂಕ ಮತ್ತಷ್ಟು ಹೆಚ್ಚಾಗಿದೆ.

ನಂದಗಾಂವದಲ್ಲಿ ಒಬ್ಬರು ಮಾತ್ರ 150 ಹಂದಿಗಳನ್ನು ಸಾಕಿದ್ದಾರೆ. ಐದು ದಿನಗಳ ಅವಧಿಯಲ್ಲಿ ಅವರ 70 ಹಂದಿಗಳು ಮೃತಪಟ್ಟಿರುವ ಮಾಹಿತಿ ಇದೆ. ಆದರೆ, ನೂರಕ್ಕೂ ಅಧಿಕ ಹಂದಿಗಳು ಮೃತಪಟ್ಟಿರುವುದಾಗಿ ಗ್ರಾಮಸ್ಥರು ಆಡಿಕೊಳ್ಳುತ್ತಿದ್ದಾರೆ.

ಹಂದಿಗಳು ಸಾಮೂಹಿಕವಾಗಿ ಮೃತಪಟ್ಟಿರುವ ಸುದ್ದಿ ತಿಳಿಯುತ್ತಲೇ ಪಶು ವಿಜ್ಞಾನಿ ಡಾ.ಶಿವಮೂರ್ತಿ, ಡಾ.ಪೃಥ್ವಿರಾಜ್ ಹಾಗೂ ಪಶು ವೈದ್ಯಾಧಿಕಾರಿ ಡಾ.ಬಸವರಾಜ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ ಹಂದಿಗಳ ಶವ ಪರೀಕ್ಷೆ ನಡೆಸಿದೆ. ಅವುಗಳ ರಕ್ತ ಮಾದರಿಯನ್ನೂ ಪಡೆದು ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳಿಸಿದೆ.

2016ರ ಮೇನಲ್ಲಿ ಹುಮನಾಬಾದ್‌ ತಾಲ್ಲೂಕಿನ ಮೊಳಕೇರಾದಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಿತ್ತು. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಲಕ್ಷಾಂತರ ಕೋಳಿಗಳನ್ನು ಸಾಮೂಹಿಕವಾಗಿ ಸಂಹಾರ ಮಾಡಲಾಗಿತ್ತು. ವಾರದ ಹಿಂದೆಯೇ ಕೋವಿಡ್‌ 19 ಸೋಂಕಿನ ಭೀತಿಯಿಂದಾಗಿ ಈ ತಾಲ್ಲೂಕಿನ ಮೂವರ ರಕ್ತ ತಪಾಸಣೆ ನಡೆಲಾಗಿದೆ. ಇದೀಗ ಹಂದಿ ಜ್ವರದಿಂದ ಜನ ಇನ್ನಷ್ಟು ಭಯಭೀತರಾಗಿದ್ದಾರೆ.

‘ನಂದಗಾಂವ ಗ್ರಾಮಕ್ಕೆ ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಹಾಗೂ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲಿಸಿದೆ. ಇದು ಹಂದಿಯಿಂದ ಹಂದಿಗೆ ಮಾತ್ರ ಹರಡುವ ಕಾಯಿಲೆಯಾಗಿದೆ. ಇದು ಮನುಷ್ಯರಿಗೆ ಹರಡುವುದಿಲ್ಲ. ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ’ ಎಂದು ಜಿಲ್ಲಾಧಿಕಾರಿ ಎಚ್‌.ಆರ್.ಮಹಾದೇವ ತಿಳಿಸಿದ್ದಾರೆ.

‘ಸಾಮಾನ್ಯವಾಗಿ ಮನುಷ್ಯರಂತೆ ಹಂದಿಗಳಿಗೂ ಜ್ವರ ಬರುತ್ತದೆ. ಅವು ಒಂದರ ಮೇಲೊಂದು ಬಿದ್ದುಕೊಂಡು ಒಂದೇ ಕಡೆ ವಾಸ ಮಾಡುವ ಹಾಗೂ ಕಲುಷಿತ ಆಹಾರ ಸೇವಿಸುವ ಕಾರಣ ಸಾಂಕ್ರಾಮಿಕ ರೋಗ ಹರಡಿ ಸಾಯುತ್ತವೆ. ಒಂದು ವಾರದಲ್ಲಿ ನೈಸರ್ಗಿಕವಾಗಿ ಚೇತರಿಸಿಕೊಳ್ಳುವ ಶಕ್ತಿ ಅವುಗಳಿಗೆ ಇದೆ. ಹಂದಿಗಳಲ್ಲಿ ರೋಗ ನಿರೋಧಕ ಶಕ್ತಿ ಅಧಿಕವಾಗಿರುತ್ತದೆ. ಜನರು ಭಯಪಡುವ ಅಗತ್ಯ ಇಲ್ಲ’ ಎಂದು ಪಶು ಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ.ಗೋವಿಂದ ಹೇಳಿದ್ದಾರೆ.

‘ಹುಮನಾಬಾದ್‌ ತಾಲ್ಲೂಕಿನಲ್ಲಿ ಸುಮಾರು 10 ಸಾವಿರ ಹಂದಿಗಳು ಇವೆ. ಹಂದಿಗಳನ್ನು ಹಿಡಿಯಲು ಅವುಗಳ ಮಾಲೀಕರು ಸಹಕರಿಸುತ್ತಿಲ್ಲ. ಗ್ರಾಮ ಪಂಚಾಯಿತಿ ನೆರವಿನಿಂದ ಪಶು ಇಲಾಖೆಯ ವೈದ್ಯರು ಹಂದಿಗಳ ಶವ ಪರೀಕ್ಷೆ ನಡೆಸಿ ರಕ್ತ ಮಾದರಿ ಸಂಗ್ರಹಿಸಿ ಬೆಂಗಳೂರಿಗೆ ಕಳಿಸಿಕೊಟ್ಟಿದ್ದಾರೆ. ಎರಡು ದಿನಗಳಲ್ಲಿ ನಿಖರವಾದ ಮಾಹಿತಿ ಲಭ್ಯವಾಗಲಿದೆ’ ಎಂದು ತಿಳಿಸಿದ್ದಾರೆ.

‘ಜನರು ಯಾವುದೇ ಸಾರ್ವಜನಿಕ ಸ್ಥಳವನ್ನು ಮುಟ್ಟಿದರೆ ಸರಿಯಾಗಿ ಕೈ ತೊಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ಮೂಲಕ ಯಾವುದೇ ರೀತಿಯ ಸೋಂಕು ಬರದಂತೆ ಎಚ್ಚರಿಕೆ ವಹಿಸಬೇಕು ಎಂದು ಡಾ.ಗೋವಿಂದ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT