ಭಾಲ್ಕಿ: ‘ಪಠ್ಯ ಆಧಾರಿತ ನಾಟಕಗಳು ವಿದ್ಯಾರ್ಥಿಗಳ ಕಲಿಕೆಗೆ ಸಹಕಾರಿಯಾಗಿವೆ’ ಎಂದು ಹಿರೇಮಠ ಸಂಸ್ಥಾನ ವಿದ್ಯಾಪೀಠ ಟ್ರಸ್ಟ್‌ನ ಅಧ್ಯಕ್ಷ ಬಸವಲಿಂಗ ಪಟ್ಟದ್ದೇವರು ಹೇಳಿದರು.
ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲದ ಅನುಭವ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ಪಿಯುಸಿ ಪಠ್ಯ ಆಧಾರಿತ ಬೋಳೇಶಂಕರ, ಕೃಷ್ಣೇಗೌಡರ ಆನೆ ನಾಟಕ ಪ್ರದರ್ಶನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಲ್ಕು ಗೋಡೆಯ ಕೊಠಡಿ ಒಳಗೆ ಒಬ್ಬ ಶಿಕ್ಷಕ ಪಾಠ ಮಾಡುವುದಕ್ಕಿಂತ, ಆ ಪಾಠವನ್ನು ನಾಟಕ ಚಟುವಟಿಕೆಯ ಮೂಲಕ ಹೇಳುವುದರಿಂದ ವಿದ್ಯಾರ್ಥಿಗಳ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಇದರಿಂದ ಅವರ ಕಲಿಕೆಯಲ್ಲಿ ಸಾಕಷ್ಟು ಬದಲಾವಣೆ ಕಾಣಬಹುದು ಎಂದರು.
ಚಂದ್ರಶೇಖರ ಕಂಬಾರ ರಚಿಸಿದ ಬೋಳೇಶಂಕರ, ಪೂರ್ಣಚಂದ್ರ ತೇಜಸ್ವಿ ರಚಿಸಿದ ಕೃಷ್ಣೇಗೌಡರ ಆನೆ ನಾಟಕದ ಮೂಲಕ ಕಲಬುರಗಿಯ ರಂಗ ಕಲಾ ತಂಡದ ಕಲಾವಿದರು ಪಠ್ಯ ಆಧಾರಿತ ವಿಷಯಗಳನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ಬೇರೂರುವಂತೆ ಅಭಿನಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.