ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್: ಗುಣಮುಖವಾದವರು ನೆರವಿಗೆ ನಿಂತರು

ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಬಡ ಸೋಂಕಿತರ ಸಂಕಷ್ಟ ಕಂಡು ಆಹಾರ ಸೇವೆ
Last Updated 7 ಮೇ 2021, 5:19 IST
ಅಕ್ಷರ ಗಾತ್ರ

ಬೀದರ್: ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬೀದರ್ ತಾಲ್ಲೂಕಿನ ಅಯಾಸಪುರ ಗ್ರಾಮದ ಶಿವರಾಜ ಪಾಟೀಲ ಪರಿವಾರವು ಸೋಂಕಿತರು, ಅವರ ಆರೈಕೆಯಲ್ಲಿರುವ ಸಂಬಂಧಿಕರು ಹಾಗೂ ಕೋವಿಡ್ ವಾರಿಯರ್ಸ್‍ಗೆ ನಿತ್ಯ ಉಚಿತ ಆಹಾರ ವಿತರಿಸುವ ಮೂಲಕ ಮಾನವೀಯತೆ ಮೆರೆಯುತ್ತಿದೆ.

ಬೀದರ್‌ನ ವಂದೇ ಮಾತರಂ ಸ್ಕೂಲ್ ಅಧ್ಯಕ್ಷರೂ ಆದ ಶಿವರಾಜ ಪಾಟೀಲ, ವೀರಭದ್ರ ಎಂಟರ್‌ಪ್ರೈಸೆಸ್‍ನ ಶ್ರೀ ಸಿಮೆಂಟ್ ವಿತರಕರಾದ ಅವರ ಹಿರಿಯ ಪುತ್ರ ಆಕಾಶ ಪಾಟೀಲ ಹಾಗೂ ನ್ಯೂ ಝೀರಾ ಮಿನರಲ್ ವಾಟರ್ಸ್‍ನ ಅವರ ಕಿರಿಯ ಪುತ್ರ ಸಂತೋಷ ಪಾಟೀಲ 10 ದಿನಗಳಿಂದ ಅನ್ನ ದಾಸೋಹ ನಡೆಸಿಕೊಂಡು ಬರುತ್ತಿದ್ದಾರೆ.

ನಿತ್ಯ ತಮ್ಮ ಮನೆಯಲ್ಲೇ ಆಹಾರ ತಯಾರಿಸಿ, ಪ್ಯಾಕ್ ಮಾಡಿ ವಾಹನದಲ್ಲಿ ಶುದ್ಧ ಕುಡಿಯುವ ನೀರಿನ ಪಾಕೇಟ್‍ನೊಂದಿಗೆ ಪ್ರತಿದಿನ ಮಧ್ಯಾಹ್ನ ಬೀದರ್‌ನ ಕೋವಿಡ್ ಆಸ್ಪತ್ರೆ ಆವರಣದಲ್ಲಿ ಸೋಂಕಿತರು, ಅವರ ಸಂಬಂಧಿಕರು ಹಾಗೂ ಕೋವಿಡ್ ವಾರಿಯರ್ಸ್‌ಗಳಿಗೆ ವಿತರಿಸುತ್ತಿದ್ದಾರೆ.

ಗುಣಮಟ್ಟದ ಆಹಾರಧಾನ್ಯ, ತರಕಾರಿ ಬಳಸಿ ಕುಟುಂಬದ ಸದಸ್ಯರೇ ಬಿಸಿಬಿಸಿಯಾದ, ಸ್ವಾದಿಷ್ಟ ಆಲೂಭಾತ್ ತಯಾರಿಸಿ ಅಗತ್ಯ ಇರುವವರ ಹಸಿವು ನೀಗಿಸುತ್ತಿರುವುದು ವಿಶೇಷ.‌

‘ನನ್ನ ತಂದೆ, ತಾಯಿ, ನನಗೆ ಹಾಗೂ ನನ್ನ ಪತ್ನಿಗೆ ಕೋವಿಡ್ ಸೋಂಕು ತಗುಲಿತು. ನಾವು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದೆವು. ಆದರೆ, ಚಿಕಿತ್ಸೆ ಪಡೆಯುವ ಸಂದರ್ಭದಲ್ಲಿ ಬಡ ಸೋಂಕಿತರು ಹಾಗೂ ಅವರ ಕುಟುಂಬದ ಸದಸ್ಯರ ಸಂಕಷ್ಟ ಮನ ಕಲುಕಿತು. ಬಡ ಸೋಂಕಿತರಿಗೆ ನೆರವಾಗಲು ನಿರ್ಧರಿಸಿ, ಉಚಿತ ಆಹಾರ ಸೇವೆ ಆರಂಭಿಸಿದ್ದೇವೆ’ ಎಂದು ಆಕಾಶ ಪಾಟೀಲ ತಿಳಿಸಿದರು.

‘ನಿತ್ಯ 500 ಆಹಾರ ಪೊಟ್ಟಣಗಳನ್ನು ವಿತರಿಸುತ್ತಿದ್ದೇವೆ. ಕರ್ಫ್ಯೂ ಮುಕ್ತಾಯದವರೆಗೆ ಆಹಾರ ವಿತರಣೆ ನಡೆಯಲಿದೆ’ ಎಂದು ಹೇಳಿದರು.

‘ಕೋವಿಡ್‍ನಿಂದ ಬಡವರು ಕಷ್ಟಕ್ಕೆ ಸಿಲುಕಿದ್ದಾರೆ. ಸಂಘ– ಸಂಸ್ಥೆಗಳು, ದಾನಿಗಳು ಅವರ ಸಂಕಷ್ಟಕ್ಕೆ ಮಿಡಿದು, ಕೈಲಾದ ನೆರವು ಕಲ್ಪಿಸಬೇಕಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT