ಮಂಗಳವಾರ, ಮಾರ್ಚ್ 21, 2023
29 °C
ಮುಲ್ಲಾಮಾರಿ ಜಲಾಶಯದಲ್ಲಿ ಶೇ 95ರಷ್ಟು ನೀರು ಸಂಗ್ರಹ

ಬೀದರ್‌: ಕಾರಂಜಾ ಜಲಾಶಯ ಶೇ 80ರಷ್ಟು ಭರ್ತಿ

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಈ ಬಾರಿ ಜಿಲ್ಲೆಯಲ್ಲಿ ಮುಂಗಾರು ಬೇಗ ಆರಂಭವಾಗಿದೆ. ಜಿಟಿಜಿಟಿ ಮಳೆ ಮುಂದುವರಿದಿದ್ದು, ಜಲಾಶಯ, ಬ್ಯಾರೇಜ್, ಕೆರೆಗಳಿಗೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಕಾರಂಜಾ ಜಲಾಶಯ ಆಗಲೇ ಶೇಕಡ 80ರಷ್ಟು ಭರ್ತಿಯಾಗಿದೆ.

ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಸಮೀಪದ ಕಾರಂಜಾ ಜಲಾಶಯದಲ್ಲಿ 5.707 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯದ ಒಳ ಹರಿವು 347 ಕ್ಯುಸೆಕ್‌ ಇದೆ. ನಿರಂತರ ಮಳೆಯಾದರೆ ಯಾವುದೇ ಕ್ಷಣದಲ್ಲೂ ಜಲಾಶಯ ಭರ್ತಿಯಾಗಲಿದೆ. ಹೀಗಾಗಿ, ಜಲಾಶಯದ ಮೇಲೆ ಕಾರಂಜಾ ಯೋಜನೆಯ ಎಂಜಿನಿಯರ್‌ಗಳು ನಿಗಾ ಇಟ್ಟಿದ್ದಾರೆ.

ಕಳೆದ ವರ್ಷ ಮಳೆಗಾಲ ಶುರುವಾಗಿ ಎರಡು ತಿಂಗಳಾದರೂ ಕಾರಂಜಾ ಜಲಾಶಯ ಅರ್ಧದಷ್ಟೂ ಭರ್ತಿಯಾಗಿರಲಿಲ್ಲ. ಅಕ್ಟೋಬರ್ ಎರಡನೇ ವಾರದಲ್ಲಿ ಅತಿವೃಷ್ಟಿಯಾಗಿ ಎರಡು ದಿನಗಳಲ್ಲೇ ಒಂದೂವರೆ ಟಿಎಂಸಿ ಅಡಿ ನೀರು ಜಲಾಶಯಕ್ಕೆ ಹರಿದು ಬಂದಿತ್ತು. ಅಕ್ಟೋಬರ್ 15ರಂದು ಜಲಾಶಯ ಭರ್ತಿಯಾಗಿ ನೀರನ್ನು ಹರಿಯ ಬಿಡಲಾಗಿತ್ತು.

ಬಸವಕಲ್ಯಾಣ ತಾಲ್ಲೂಕಿನ ಖೇರ್ಡಾ (ಬಿ) ಸಮೀಪದ ಮುಲ್ಲಾಮಾರಿ ಮೇಲ್ದಂಡೆ ಯೋಜನೆಯ ಜಲಾಶಯದಲ್ಲಿ ಶೇಕಡ 95.32ರಷ್ಟು ನೀರು ಸಂಗ್ರಹವಾಗಿದೆ. 0.714 ಟಿಎಂಸಿ ಅಡಿ ಪೈಕಿ 0.632 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಬಸವಕಲ್ಯಾಣ ತಾಲ್ಲೂಕಿನಲ್ಲಿ ಎರಡು- ಮೂರು ದಿನ ಮಳೆಯಾದರೆ ಜಲಾಶಯ ತುಂಬಿ ಹರಿಯಲಿದೆ.

ಚುಳಕಿ ನಾಲಾ ಜಲಾಶಯದಲ್ಲಿ 0.812 ಟಿಎಂಸಿ ಅಡಿ ಪೈಕಿ 0.752 ಟಿಎಂಸಿ ಅಡಿ ನೀರು ಸಂಗ್ರಹವಾಗಿದ್ದು, ಶೇಕಡ 85.94 ರಷ್ಟು ಭರ್ತಿಯಾಗಿದೆ.

ಕಾರಂಜಾ ಜಲಾಶಯದ ನೀರನ್ನು ಕುಡಿಯುವ ಉದ್ದೇಶಕ್ಕಾಗಿಯೇ ಕಾಯ್ದಿರಿಸಲಾಗುತ್ತದೆ. ಬೀದರ್‌ ನಗರ, ಭಾಲ್ಕಿ, ಹುಮನಾಬಾದ್‌, ಚಿಟಗುಪ್ಪ ಪಟ್ಟಣ ಹಾಗೂ ಈ ತಾಲ್ಲೂಕುಗಳ ನೂರಾರು ಹಳ್ಳಿಗಳಿಗೆ ಜಲಾಶಯದಿಂದ ನೀರು ಪೂರೈಕೆ ಮಾಡಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.