ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಊರಲ್ಲಿರದ 139 ಜನರಿಗೆ ಮನೆ ಮಂಜೂರು

ವಸತಿ ಹಂಚಿಕೆಯಲ್ಲಿ ಅಧಿಕಾರಿಗಳಿಂದ 21 ಬಗೆಯ ಲೋಪ
Last Updated 8 ಮೇ 2020, 2:28 IST
ಅಕ್ಷರ ಗಾತ್ರ

ಬೀದರ್‌: ಭಾಲ್ಕಿ ತಾಲ್ಲೂಕಿನಲ್ಲಿ ವಿವಿಧ ವಸತಿ ಯೋಜನೆಗಳಡಿ ಫಲಾನುಭವಿಗಳ ಆಯ್ಕೆಯಲ್ಲಿ ಕೆಳ ಹಂತದ ಅಧಿಕಾರಿಗಳು 21 ಬಗೆಯ ಲೋಪಗಳನ್ನು ಎಸಗಿ ಸರ್ಕಾರದ ಉದ್ದೇಶವನ್ನೇ ಬುಡಮೇಲು ಮಾಡಿದ್ದಾರೆ.

ಬೀದರ್‌ ಹಾಗೂ ಚಿತ್ರದುರ್ಗ ಜಿಲ್ಲೆಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ರಾಜೀವ್‌ ಗಾಂಧಿ ವಸತಿ ನಿಗಮದ ಮಾರ್ಗಸೂಚಿಯನ್ನು ಬದಿಗಿರಿಸಿ ಪರ್ಯಾಯ ವಿಧಾನಗಳನ್ನು ಅನುಸರಿಸಿರುವುದು ತನಿಖೆಯ ಸಂದರ್ಭದಲ್ಲಿ ಬಹಿರಂಗವಾಗಿದೆ. ಭಾಲ್ಕಿ ತಾಲ್ಲೂಕಿನ 40 ಗ್ರಾಮ ಪಂಚಾಯಿತಿಗಳು ಯಾವ ಬಗೆಯ ತಪ್ಪುಗಳನ್ನು ಮಾಡಿವೆ ಎನ್ನುವುದನ್ನು ತನಿಖಾ ತಂಡವು ವರದಿಯಲ್ಲಿ ಅಂಕಿ ಅಂಶಗಳ ಸಮೇತ ಉಲ್ಲೇಖಿಸಿದೆ.

ತನಿಖಾ ತಂಡ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ 324 ಫಲಾನುಭವಿಗಳು ತಮ್ಮ ಮನೆ ಎಲ್ಲಿದೆ ಎನ್ನುವುದನ್ನು ತೋರಿಸಿಯೇ ಇಲ್ಲ. ಪ್ರತಿ ಮನೆಯ ಘಟಕ ವೆಚ್ಚ ₹ 1.20 ಲಕ್ಷ ಆಗಿದ್ದು, ಈ ಎಲ್ಲ ಮನೆಗಳ ಅಂದಾಜು ಮೊತ್ತ ₹ 3.88 ಕೋಟಿ ಆಗಿದೆ.

ಡಾ.ಬಿ.ಆರ್.ಅಂಬೇಡ್ಕರ್‌ ನಿವಾಸ್‌ ಯೋಜನೆ ಸೇರಿದಂತೆ ಮೂರು ಯೋಜನೆಗಳಲ್ಲಿ ತಾಲ್ಲೂಕಿಗೆ 14,495 ಮನೆಗಳು ಮಂಜೂರಾಗಿವೆ. ತಂಡದ ಸದಸ್ಯರು 14,080 ಮನೆಗಳಿಗೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ. ಇದರಲ್ಲಿ 6,138 ಮನೆಗಳು ಸರಿಯಾಗಿರುವುದು ಕಂಡು ಬಂದಿದೆ. 681 ಫಲಾನುಭವಿಗಳು ಮತ್ತೆ ವಸತಿ ಯೋಜನೆಯ ಲಾಭ ಪಡೆದಿದ್ದಾರೆ. ಕೆಳ ಹಂತದ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸದೆ ಅನುದಾನ ಬಿಡುಗಡೆಗೆ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

625 ಫಲಾನುಭವಿಗಳು ತಾವು ವಾಸವಾಗಿರುವ ಮನೆಗಳನ್ನೇ ದಾಖಲೆಯಲ್ಲಿ ತೋರಿಸಿದ್ದಾರೆ. 139 ಜನರು ಗ್ರಾಮಗಳಲ್ಲಿ ವಾಸವಾಗಿಲ್ಲ. ಒಟ್ಟು 40 ಗ್ರಾಮ ಪಂಚಾಯಿತಿಗಳಲ್ಲಿ 2015–2016 ಹಾಗೂ 2018–2019ರ ವಸತಿ ಯೋಜನೆ ಫಲಾನುಭವಿಗಳ ಆಯ್ಕೆಯಲ್ಲಿ ಲೋಪವಾಗಿದೆ.

ಒಂದೇ ಮನೆಗೆ ಇಬ್ಬರು ಫಲಾನುಭವಿಗಳು

ಭಾಲ್ಕಿ ತಾಲ್ಲೂಕಿನಲ್ಲಿ ವಸತಿ ಯೋಜನೆಗಳ ಅಡಿ ಒಂದೇ ಮನೆಗೆ ಇಬ್ಬರು ಫಲಾನುಭವಿಗಳ ಹೆಸರು ಉಲ್ಲೇಖಿಸಿರುವುದು ತನಿಖಾ ತಂಡವನ್ನು ಬೆರಗುಗೊಳಿಸಿದೆ. ಇಂತಹ 339 ಪ್ರಕರಣಗಳು ಇವೆ. ನಿಟ್ಟೂರ್‌(ಬಿ), ಸಿದ್ಧೇಶ್ವರ, ಮೊರಂಬಿ, ತಳವಾಡ(ಕೆ), ವರವಟ್ಟಿ, ಎಣಕೂರ್, ಅಟ್ಟರಗಾ, ಹಲಬರ್ಗಾ ಹಾಗೂ ಜ್ಯಾಂತಿಯಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿವೆ.

ತಾಲ್ಲೂಕಿನ 155 ಅವಿಭಕ್ತ ಕುಟುಂಬಗಳ ಸದಸ್ಯರಿಗೆ ಮನೆಗಳನ್ನು ಮಂಜೂರು ಮಾಡಲಾಗಿದೆ. ಖಟಕಚಿಂಚೋಳಿ, ಬ್ಯಾಲಹಳ್ಳಿ, ಚಳಕಾಪುರ ಹಾಗೂ ಲಂಜವಾಡದಲ್ಲಿ ಇಂತಹ ಪ್ರಕರಣಗಳು ಪತ್ತೆಯಾಗಿವೆ.

ಅಪೂರ್ಣ ಮನೆಗೆ ಪೂರ್ಣ ಹಣ

ಬೀದರ್: ಭಾಲ್ಕಿ ತಾಲ್ಲೂಕಿನಲ್ಲಿ ವಿವಿಧ ವಸತಿ ಯೋಜನೆಗಳ ಅಡಿಯಲ್ಲಿ ಮಂಜೂರಾದ 361 ಮನೆಗಳು ಈವರೆಗೂ ಪೂರ್ಣವಾಗಿಲ್ಲ. ಆದರೂ ಮನೆಗಳು ನಿರ್ಮಾಣವಾಗಿವೆ ಎಂದು ಕೆಳ ಹಂತದ ಅಧಿಕಾರಿಗಳು ಸಮೀಕ್ಷಾ ವರದಿ ಸಲ್ಲಿಸಿ ಅನುದಾನ ಬಿಡುಗಡೆ ಮಾಡಲು ಸಹಕರಿಸಿದ್ದಾರೆ.

ಬಾಳೂರು, ಬೀರಿ, ಬ್ಯಾಲಹಳ್ಳಿ, ಚಳಕಾಪುರ, ಗೋರಚಿಂಚೋಳಿ, ಹಲಬರ್ಗಾ, ಇಂಚೂರ್, ಕೋನಮೇಳಕುಂದಾ, ಲಂಜವಾಡ, ವಾಂಜರಖೇಡ, ಮೋರಂಬಿ, ಸಾಯಗಾಂವ, ಶಿವಣಿ, ಸಿದ್ಧೇಶ್ವರ ಹಾಗೂ ತಳವಾಡ(ಕೆ) ಗ್ರಾಮಗಳು ಮುಂಚೂಣಿಯಲ್ಲಿ ಇವೆ ಎಂದು ತನಿಖಾ ತಂಡವು ಗ್ರಾಮಗಳ ಹೆಸರನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಕ್ರಮಕ್ಕೆ ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT