ಶುಕ್ರವಾರ, ಮಾರ್ಚ್ 24, 2023
22 °C
ಸಂತಾನಶಕ್ತಿ ನಿಯಂತ್ರಣ ಶಸ್ತ್ರಚಿಕಿತ್ಸೆ ಶಿಬಿರ ಸದುಪಯೋಗಕ್ಕೆ ಸಲಹೆ

ವಿಶ್ವ ಜನಸಂಖ್ಯಾ ದಿನಾಚರಣೆ: ಜನಸಂಖ್ಯೆ ನಿಯಂತ್ರಣ ಅಗತ್ಯ- ಜಹೀರಾ ನಸೀಮ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ಪ್ರಕೃತಿಯ ಸಂಪನ್ಮೂಲಗಳು ಸೀಮಿತವಾಗಿವೆ. ಹೀಗಾಗಿ ಜನಸಂಖ್ಯೆ ನಿಯಂತ್ರಣ ಅಗತ್ಯ’ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಹೀರಾ ನಸೀಮ್ ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಕೃತಿಯ ಸಂಪನ್ಮೂಲಗಳ ಸಮರ್ಪಕ ಬಳಕೆಗೆ ಜನಸಂಖ್ಯೆ ನಿಯಂತ್ರಿಸುವುದೊಂದೇ ಏಕ ಮಾತ್ರ ಮಾರ್ಗವಾಗಿದೆ. ಜನಸಂಖ್ಯೆ ನಿಯಂತ್ರಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಸಂತಾನ ನಿಯಂತ್ರಣಕ್ಕೆ ಮಾತ್ರೆಗಳು ಹಾಗೂ ಚುಚ್ಚುಮದ್ದುಗಳು ಬಂದಿವೆ. ಅವುಗಳ ಬಗ್ಗೆ ಅರಿತುಕೊಂಡು ಜನಸಂಖ್ಯೆ ನಿಯಂತ್ರಣಕ್ಕೆ ಸಹಕರಿಸಬೇಕು’ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಶಿವಶಂಕರ ಬಿ. ಮಾತನಾಡಿ, ‘ವಿಶ್ವ ಜನಸಂಖ್ಯಾ ದಿನದ
ಅಂಗವಾಗಿ ಸೇವಾ ಪೂರೈಕೆ ಪಾಕ್ಷಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಜುಲೈ 24ರ ವರೆಗೆ ನಡೆಯಲಿದೆ’ ಎಂದು ತಿಳಿಸಿದರು.

‘ಎಲ್ಲ ತಾಲ್ಲೂಕು ಆಸ್ಪತ್ರೆ, ನಗರದ 100 ಹಾಸಿಗೆಗಳ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ, ಆಯ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಂತಾನಶಕ್ತಿ ನಿಯಂತ್ರಣ ಶಸ್ತ್ರಚಿಕಿತ್ಸೆ ಶಿಬಿರಗಳು ನಿರಂತರವಾಗಿ ನಡೆಯುತ್ತವೆ. ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕು’ ಎಂದು ಹೇಳಿದರು.

‘ಜಿಲ್ಲೆಯ ಎಲ್ಲ ಆಸ್ಪತ್ರೆಗಳಲ್ಲಿ ಅಂತರ ಹೆಸರಿನ ಚುಚ್ಚುಮದ್ದು ಲಭ್ಯ ಇದೆ. ಎರಡು ಮಗುವಿನ ನಡುವೆ ಅಂತರ ಕಾಯ್ದುಕೊಳ್ಳಲು ಅನುಕೂಲವಾಗಿದೆ. ಹೊಸದಾಗಿ ಮದುವೆಯಾದವರು ತಕ್ಷಣಕ್ಕೆ ಮಗು ಬೇಡವೆಂದರೂ ಚುಚ್ಚುಮದ್ದು ಪಡೆಯಲು ಅವಕಾಶ ಇದೆ’ ಎಂದು ತಿಳಿಸಿದರು.

‘ಆರೋಗ್ಯ ಸಂಸ್ಥೆಗಳಲ್ಲಿ ಉಚಿತವಾಗಿ ಲಭ್ಯವಿರುವ ಛಾಯಾ ಮಾತ್ರೆ, ಕಾಂಡೋಮ್ಸ್, ಮಾಲಾ-ಎನ್ ಮಾತ್ರೆಗಳನ್ನು ಫಲಾನುಭವಿಗಳ ಮನೆ ಬಾಗಿಲ ವರೆಗೆ ತಲುಪಿಸುವ ಕೆಲಸವನ್ನು ಆಶಾ ಕಾರ್ಯಕರ್ತೆಯರು ಮಾಡುತ್ತಿದ್ದಾರೆ’ ಎಂದು ಹೇಳಿದರು.

ಕುಷ್ಠರೋಗ ನಿಯಂತ್ರಣಾಧಿಕಾರಿ ಡಾ.ಮಹೇಶ ಬಿರಾದರ ಮಾತನಾಡಿ, ‘ಜನಸಂಖ್ಯೆ ಇದೇ ವೇಗದಲ್ಲಿ ಹೆಚ್ಚುತ್ತ ಹೋದರೆ ಮುಂದೊಂದು ದಿನ ಕುಡಿಯಲು ನೀರು ಹಾಗೂ ಉಸಿರಾಡಲು ಶುದ್ಧ ಗಾಳಿಯೂ ಸಿಗುವುದು ಕಷ್ಟವಾಗಬಹುದು’ ಎಂದು ಎಚ್ಚರಿಸಿದರು.

‘ಕಡಿಮೆ ವಯಸ್ಸಿನಲ್ಲಿ ಮದುವೆ ಆಗುವುದರಿಂದ ಹೆಚ್ಚು ಮಕ್ಕಳಾಗುತ್ತವೆ. ಮದುವೆ ವಯಸ್ಸು ಮುಂದೆ ಹಾಕಿದರೆ ಕಡಿಮೆ ಮಕ್ಕಳನ್ನು ಪಡೆಯಲು ಸಾಧ್ಯವಾಗುತ್ತದೆ. ಮಹಿಳೆ ಶೈಕ್ಷಣಿಕ ಮತ್ತು ಆರ್ಥಿಕ ಸಬಲರವಾದರೆ ಕುಟುಂಬದ ಗಾತ್ರ ಕಡಿಮೆಯಾಗುತ್ತದೆ’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ. ರೆಡ್ಡಿ ಮಾತನಾಡಿ, ‘1987 ರಿಂದ ವಿಶ್ವ ಜನಸಂಖ್ಯಾ ದಿನ ಆಚರಿಸಲಾಗುತ್ತದೆ. ಪುರುಷರು ಸ್ವಯಂ ಪ್ರೇರಿತರಾಗಿ ಕುಟುಂಬ ಯೋಜನಾ ವಿಧಾನಗಳನ್ನು ಅಳವಡಿಸಿಕೊಳ್ಳಬೇಕು’ ಎಂದರು.

ಸಂಗಪ್ಪ ಕಾಂಬಳೆ ನಿರೂಪಿಸಿದರು. ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಸಂಜೀವಕುಮಾರ ಪಾಟೀಲ, ತಾಲೂಕು ಆರೋಗ್ಯ ಅಧಿಕಾರಿ ಡಾ.ಸಂಗಾರೆಡ್ಡಿ , ಡಾ.ಲಕ್ಷ್ಮೀಕಾಂತ ವಲ್ಲೆಪೂರೆ, ಮಹೇಶ ರಡ್ಡಿ, ರಾಬರ್ಟ್, ರೂಸ್ವೆಲ್ಟ್, ಶಾಲೂಬಾಯಿ ಇದ್ದರು.

ಆಶಾ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಸಹಾಯಕಿಯರು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯ ಸಿಬ್ಬಂದಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು