ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದರ್‌: ಜನಪರ ಉತ್ಸವದಲ್ಲಿ ಜನಪದ ಕಲೆಯ ಅನಾವರಣ

Last Updated 18 ಡಿಸೆಂಬರ್ 2020, 19:30 IST
ಅಕ್ಷರ ಗಾತ್ರ

ಬೀದರ್‌: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಇಲ್ಲಿಯ ಡಾ. ಚನ್ನಬಸವ ಪಟ್ಟದೇವರು ಜಿಲ್ಲಾ ರಂಗ ಮಂದಿರದಲ್ಲಿ ಶುಕ್ರವಾರ ನಡೆದ ಪರಿಶಿಷ್ಟ ಜಾತಿ ಕಲಾವಿದರ ಜನಪರ ಉತ್ಸವದಲ್ಲಿ ಗ್ರಾಮೀಣ ಸೊಗಡಿನೊಂದಿಗೆ ಜನಪದ ಕಲೆ ಅನಾವರಣಗೊಂಡಿತು.

ರಾಜ್ಯದ ವಿವಿಧೆಡೆಯ 37 ಕಲಾ ತಂಡಗಳು ಜನಪರ ಉತ್ಸವದಲ್ಲಿ ಪ್ರದರ್ಶನ ನೀಡಿ ಪ್ರೇಕ್ಷಕರು ಪುಳಕಿತರಾಗುವಂತೆ ಮಾಡಿದವು. ಕಾರ್ಯಕ್ರಮ ಎರಡು ತಾಸು ವಿಳಂಬವಾದರೂ ರಂಗ ಮಂದಿರದಲ್ಲಿ ಪ್ರೇಕ್ಷಕರ ಕೊರತೆ ಕಂಡು ಬರಲಿಲ್ಲ. ಪ್ರೇಕ್ಷಕರು ಆಸಕ್ತಿಯಿಂದ ಜನಪದ ಕಲಾ ಪ್ರದರ್ಶನ ವೀಕ್ಷಿಸಿದರು.

ಕಲಬುರ್ಗಿ ಜಿಲ್ಲೆ ಜೇವರ್ಗಿಯ ಭೀಮರಾಯ ಭಜಂತ್ರಿ ತಂಡದ ಚಿಟ್ಟೆ ಮೇಳ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ಹಲಗೆ ಹಾಗೂ ತಮಟೆಯ ಜುಗಲ್‌ ಬಂದಿಗೆ ತಾಳದ ಸಾಥ್‌ ಕಲಾವಿದರಲ್ಲಿ ಇನ್ನಷ್ಟು ಹುರುಪು ತುಂಬಿತು. ಇದರೊಂದಿಗೆ ಶಹನಾಯಿ ವಾದನ ಕಲಾ ಸಂಭ್ರಮಕ್ಕೆ ಮೆರುಗು ತುಂಬಿತು. ಕಲಾವಿದರು ಹೆಜ್ಜೆ ಹಾಕುತ್ತ ಕಲೆಯ ಪ್ರದರ್ಶನ ನೀಡಿದ್ದು ಜನಮನ ಸೆಳೆಯುವಂತೆ ಮಾಡಿತು.

‌ಚಿಕ್ಕಮಗಳೂರಿನ ನಾಗೂಬಾಯಿ ತಂಡದವರು ನಂದಿಧ್ವಜ, ತರೀಕೆರೆಯ ಸಂಗೀತಾ ಎಸ್‌. ತಂಡದ ವೀರಗಾಸೆ ತಂಡದ ಕಲಾವಿದರು ಕತ್ತಿವರಸೆಯೊಂದಿಗೆ ಹೆಜ್ಜೆ ಹಾಕಿದರು. ಯುವಕರಿಬ್ಬರು ನಂದಿಕೋಲು ಹಿಡಿದುಕೊಂಡೇ ಕುಣಿಯುವ ಮೂಲಕ ದೈಹಿಕ ಸಾಮರ್ಥ್ಯ ಪ್ರದರ್ಶಿಸಿದರು. ಈ ನೃತ್ಯಗಳು ಪ್ರೇಕ್ಷಕರಿಗೆ ಹೊಸ ಅನುಭವ ನೀಡಿದವು.

ಕಲಬುರ್ಗಿಯ ಹನುಮಂತಪ್ಪ ಹಾಗೂ ತಂಡದ ಹೆಜ್ಜೆ ಮೇಳ ತಂಡದ ಕಲಾವಿದರು ಕೋಲಿಗೆ ರಿಬ್ಬನ್‌ ಹಾಗೂ ಝರಿ ಕಟ್ಟಿಕೊಂಡು ಕೈಯಲ್ಲಿ ತಿರುಗಿಸುತ್ತ ಹಾಡಿಗೆ ಸಿಳ್ಳೆ ಹಾಕುತ್ತ ಕುಣಿದರು.

ಬೀದರ್‌ನ ರಾಜಕುಮಾರ ಶೇರಿಕಾರ ತಂಡ, ಚಿಕ್ಲಿಯ ಅರ್ಜುನ ಪೂಜಾರಿ ತಂಡದ ಕೋಲಾಟ, ಔರಾದ್‌ ತಾಲ್ಲೂಕಿನ ಚಿಕ್ಲಿ (ಜೆ) ಗ್ರಾಮದ ಕಮಲಾಬಾಯಿ ತಂಡದ ಮಹಿಳಾ ತಮಟೆ, ಭಾಲ್ಕಿ ತಾಲ್ಲೂಕಿನ ಖಟಕಚಿಂಚೋಳಿಯ ಝರೆಪ್ಪ ತಂಡದ ಹುಲಿ ಕುಣಿತ, ಭಾಲ್ಕಿಯ ಕವಿತಾ ತಂಡದವರು ಲಮಾಣಿ ನೃತ್ಯ ಪ್ರದರ್ಶಿಸಿದರು.

ಯಾದಗಿರಿಯ ಶಂಕರ ಶಾಸ್ತ್ರಿ, ಚಿಮಕೋಡದ ದೇವದಾಸ ಚಿಮಕೋಡ, ಸಿರ್ಸಿಯ ರಮೇಶ, ಕಮಲನಗರದ ರಾಣಿ ಹಾಗೂ ತಂಡದವರು ತತ್ವಪದ, ಸುನೀಲ ಕಡ್ಡೆ, ಶಿವಾಜಿ ಮಾನಕರೆ, ಶಿವರಾಜ ತಡಪಳ್ಳಿ ಕ್ರಾಂತಿಗೀತೆ, ಕಾಂಶೆಪುರದ ನಾಗಪ್ಪ ತಂಡದವರು ಸಾಂಪ್ರದಾಯಿಕ ಪದ ಹಾಡಿದರು.

ಬೀದರ್‌ ತಾಲ್ಲೂಕಿನ ಚೊಂಡಿಯ ಶಂಕರ ಚೊಂಡಿ, ಅಫ್ಜಲಪುರದ ಶಿವಪ್ಪ ಭಂಡಾರಿ ತಂಡದವರು ಹಂತಿ ಪದ, ನಾಗೇಂದ್ರ ದಂಡೆ ಸುಗಮ ಸಂಗೀತ, ರಮೇಶ ದೊಡ್ಡಿ ವಚನ ಗಾಯನ, ಔರಾದ್‌ ತಾಲ್ಲೂಕಿನ ಲಾಧಾದ ಚನ್ನಮ್ಮ ಹಾಗೂ ತಂಡದವರು ಗೀಗಿ ಪದ ಹಾಡಿದರು.

ಬಸವಕಲ್ಯಾಣದ ವಿಜಯಲಕ್ಷ್ಮಿ ಜಾನಪದ ಗೀತೆ, ಕಮಲನಗರದ ವಿಶಾಲ ಡೊಂಗ್ರೆ ತಬಲಾ ಸೋಲೊ, ಬೀದರ್‌ನ ಜೈಶೀಲಾ, ಔರಾದ್‌ನ ಬಸಮ್ಮ, ಬೆಳಕುಣಿಯ ಕೇಶವರಾವ್ ತಂಡದವರು ಭಜನೆ, ಬೀದರ್‌ನ ಸಂಗೀತಾ ಸುಗಮ ಸಂಗೀತ, ಜೋಜನಾದ ಇಂದಿರಾಬಾಯಿ ಮೊಹರಂ ಪದ, ಬೇಮಳಖೇಡದ ಶಂಕ್ರಮ್ಮ ಡಪ್ಪಿನ ಪದಗಳು,

ಬೀದರ್‌ನ ರಮೇಶ ಬಾಬು ಭಾವಗೀತೆ, ಹುಮನಾಬಾದ್‌ನ ವಿಠ್ಠಲ್ ಹಾಗೂ ತಂಡದವರು ಜಾನಪದ ಗೀತೆ, ಬಸವಕಲ್ಯಾಣದ ಅವಿನಾಶ ಹಾಗೂ ತಂಡದವರು ತಬಲಾ ಸೋಲೊ ಪ್ರಸ್ತುತ ಪಡಿಸಿದರು.

ಎಂ.ಎಸ್.ಮನೋಹರ ಹಾಗೂ ತಂಡದವರು ‘ಮಾದರಿ ಶಾಲೆ’ ನಾಟಕ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT