ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಸಮುದಾಯಕ್ಕೆ ತೋರಬೇಕಿದೆ ಸನ್ಮಾರ್ಗ

ಯುವ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷ ನಿಜಲಿಂಗ ರಗಟೆ ಹೇಳಿಕೆ
Last Updated 21 ಜನವರಿ 2021, 15:36 IST
ಅಕ್ಷರ ಗಾತ್ರ

ಬೀದರ್‌: ‘ಯಾಂತ್ರಿಕ ಬದುಕಿಗೆ ಒತ್ತು ಕೊಟ್ಟು ದಾರಿ ತಪ್ಪುತ್ತಿರುವ ಯುವ ಜನಾಂಗಕ್ಕೆ ಸನ್ಮಾರ್ಗ ತೋರಿಸುವ ಕಾರ್ಯ ನಿರಂತರವಾಗಿ ನಡೆಯಬೇಕಿದೆ. ಸಾಹಿತ್ಯ, ಆಟ, ಪಾಠಗಳಲ್ಲಿ ತೊಡಗಿಸಿಕೊಳ್ಳಲು ಅನುಕೂಲವಾಗುವಂತಹ ವಾತಾವರಣ ಸೃಷ್ಟಿಸುವ ಅಗತ್ಯ ಇದೆ’ ಎಂದು ಸಮ್ಮೇಳನಾಧ್ಯಕ್ಷ ನಿಜಲಿಂಗ ರಗಟೆ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ಬೀದರ್‌ ತಾಲ್ಲೂಕು ಘಟಕದ ವತಿಯಿಂದ ಇಲ್ಲಿಯ ಡಾ.ಚನ್ನಬಸವ ಪಟ್ಟದ್ದೇವರ ಜಿಲ್ಲಾ ರಂಗ ಮಂದಿರದಲ್ಲಿ ಗುರುವಾರ ನಡೆದ ನಡೆದ ತಾಲ್ಲೂಕು ಮಟ್ಟದ ಯುವ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಇಂದಿನ ಯುವ ಸಮುದಾಯವು ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆಯಿಂದ ದೂರ ಸರಿಯುತ್ತಿದೆ. ಮೊಬೈಲ್‌, ಫೇಸ್‌ಬುಕ್‌ ಹಾಗೂ ವಾಟ್ಸ್‌ಆ್ಯಪ್‌ಗಳಲ್ಲಿ ಮುಳುಗಿ ನಿರುತ್ಸಾಹಿ ಆಗುತ್ತಿದೆ. ಇನ್ನೊಂದೆಡೆ ಪಟ್ಟಭದ್ರ ಹಿತಾಸಕ್ತಿಗಳು ಯುವಕರಲ್ಲಿ ಜಾತಿಯ ಬೀಜ ಬಿತ್ತುತ್ತಿವೆ. ಬಲತ್ಕಾರದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದ ಯುವ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಕನ್ನಡ ನಾಡಿನ ನಕ್ಷೆಯಲ್ಲಿ ಕಿರೀಟ ಪ್ರಾಯವಾದ ಬೀದರ್ ಜಿಲ್ಲೆಯು ಬಹುಭಾಷೆಗಳ ಸಂಗಮವಾಗಿದ್ದು, ಭಾಷೆ ಸಾಮರಸ್ಯಕ್ಕೆ ಮನೆಮಾತಾಗಿದೆ’ ಎಂದು ಬಣ್ಣಿಸಿದರು.

‘ಮರಾಠಿ. ತೆಲುಗು, ಉರ್ದು, ಪಾರ್ಸಿ, ಅರಬ್ಬಿ, ಹಿಂದಿ, ಇಂಗ್ಲಿಷ್, ಸಂಸ್ಕೃತ, ಮೋಡಿ ಭಾಷೆಗಳು ಬೀದರ್‌ನಲ್ಲಿ ಆಡಳಿತ ಭಾಷೆಯಾಗಿ ಬಂದು ಹೋದರೂ ಕನ್ನಡ ಭಾಷೆಯನ್ನು ಉಳಿಸಿಕೊಂಡು ಬಂದಿರುವ ಇಲ್ಲಿನ ಜನರು ನಿಜಕ್ಕೂ ಧನ್ಯರು, ಕನ್ನಡದ ಮೊದಲ ಗದ್ಯ ಗ್ರಂಥ ವಡ್ಡಾರಾಧನೆ ರಚನೆಯಾಗಿದ್ದು ಜಿಲ್ಲೆಯ ಹಳ್ಳಿಖೇಡ (ಬಿ) ಗ್ರಾಮದಲ್ಲಿ ಎಂದು ಹೇಳಿಕೊಳ್ಳಲು ಜಿಲ್ಲೆಯ ಪ್ರತಿಯೊಬ್ಬರಿಗೂ ಹೆಮ್ಮೆಯೆನಿಸುತ್ತದೆ’ ಎಂದರು.

‘12ನೇ ಶತಮಾನದ ವಚನ ಸಾಹಿತ್ಯ ಇಡೀ ವಿಶ್ವ ಸಾಹಿತ್ಯಕ್ಕೆ ಕನ್ನಡ ಭಾಷೆ ನೀಡಿರುವ ಅಮೂಲ್ಯ ಕೊಡುಗೆಯಾಗಿದೆ.
ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯವನ್ನು ತೆಗೆದು ಹಾಕಿದರೆ ಸತ್ವಹೀನತೆ ಕಾಣಿಸಿಕೊಳ್ಳುತ್ತದೆ’ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಕಾವ್ಯಶ್ರೀ ಮಹಾಗಾಂವಕರ್, ಕಸಾಪ ಸಂಘ ಸಂಸ್ಥೆಗಳ ಪ್ರತಿನಿಧಿ ಸಿದ್ರಾಮಪ್ಪ ಮಾಸಿಮಾಡೆ, ಸಮ್ಮೇಳನದ ನಿಕಟಪೂರ್ವ ಅಧ್ಯಕ್ಷ ಬಸವರಾಜ ಬಲ್ಲೂರ ಮಾತನಾಡಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎಸ್. ಮನೋಹರ್, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೀದರ್‌ ಘಟಕದ ಅಧ್ಯಕ್ಷ ರಾಜು ಸಾಗರ, ಬೀದರ್‌ ಜಿಲ್ಲಾ ಲೇಖಕಿಯರ ಸಂಘದ ಅಧ್ಯಕ್ಷೆ ಕಸ್ತೂರಿ ಪಟಪಳ್ಳಿ, ವಿದ್ಯಾವತಿ ಬಲ್ಲೂರ, ಶಿವಕುಮಾರ ಕಟ್ಟೆ, ಟಿ.ಎಂ.ಮಚ್ಚೆ, ಶ್ರೀಮಂತ ಸಪಾಟೆ, ವಿಜಯಕುಮಾರ ಸೋನಾರೆ, ಎಂ.ಪಿ.ಮುದಾಳೆ, ಪ್ರಶಾಂತ ಮಠಪತಿ, ವಿಜಯಕುಮಾರ ಗೌರೆ, ವೀರಶೆಟ್ಟಿ ಪಟ್ನೆ, ದೀಪಿಕಾ ರಗಟೆ ಇದ್ದರು.

ಸ್ವಾಗತ ಸಮಿತಿ ಅಧ್ಯಕ್ಷ ವಿರೂಪಾಕ್ಷ ಗಾದಗಿ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೈಜನಾಥ ಸಜ್ಜನಶೆಟ್ಟಿ ಹಾಗೂ ಸಂಗಡಿಗರು ನಾಡಗೀತೆ ಹಾಡಿದರು. ವಿದ್ಯಾವತಿ ನಿರೂಪಿಸಿದರು. ವೀರಶೆಟ್ಟಿ ಚೆನಶೆಟ್ಟಿ ವಂದಿಸಿದರು.

ಮಯೂರಿ ಬಸವರಾಜ ಹಾಗೂ ಆಕಾಂಕ್ಷಾ ಬಿರಾದಾರ ನೃತ್ಯ ಪ್ರದರ್ಶಿಸಿದರು. ವಿಶೇಷ ಉಪನ್ಯಾಸ, ಗೋಷ್ಠಿ, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನಿಯರ ಸನ್ಮಾನ ಕಾರ್ಯಕ್ರಮ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT