ಹುಲಸೂರ: ಪತ್ರಕರ್ತರೆಂದು ಹೇಳಿ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ತರಲು ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಹುಲಸೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲ್ಲೂಕಿನ ಬೇಲೂರು ಗ್ರಾಮದ ನಿವಾಸಿ ಸುಧಾಕರ ಸೂರ್ಯವಂಶಿ ಹಾಗೂ ಬೇಟಬಾಲಕುಂದಾ ಗ್ರಾಮದ ನಿವಾಸಿ ವಿಶ್ವನಾಥ ಸಂಗಪ್ಪ ಕರಸಂಗ್ ಅವರ ವಿರುದ್ಧ ಪ್ರಕರಣ ದಾಖಲಾಗಿದೆ.
ಗೌರ್ ಸರ್ಕಾರಿ ಪ್ರೌಢಶಾಲೆ ಆವರಣದ ಸುತ್ತ ಈ ಇಬ್ಬರು ಆರೋಪಿಗಳು ಶಾಲೆಯ ದೃಶ್ಯವನ್ನು ಸೆರೆ ಹಿಡಿದು ಹಾಗೂ ಫೋಟೊ ತೆಗೆದು ಶಿಕ್ಷಕರಿಗೆ ಹೆದರಿಸುತ್ತಿದ್ದರು. ಶಾಲೆಯ ಸುರಕ್ಷತೆ ಮತ್ತು ಶಾಂತಿಗೆ ಭಂಗವನ್ನುಂಟು ಮಾಡುವ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.
ಆರೋಪಿತರು ಬೇಲೂರು, ಗೌರ್ ಸೇರಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ತಾವು ಪತ್ರಕರ್ತರೆಂದು ಹೇಳಿ ಜನರಿಗೆ ಹೆದರಿಸಿ, ಸಮಾಜದಲ್ಲಿ ಶಾಂತಿಗೆ ಭಂಗ ತರುವಂತಹ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ ಎಂದು ದಾಖಲಾದ ದೂರಿನಲ್ಲಿ ವಿವರಿಸಲಾಗಿದೆ.