ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬೀದರ್‌: ಮೂವರು ಅಂತರರಾಜ್ಯ ಎಟಿಎಂ ದರೋಡೆಕೋರರ ಬಂಧನ

Published 13 ಫೆಬ್ರುವರಿ 2024, 16:00 IST
Last Updated 13 ಫೆಬ್ರುವರಿ 2024, 16:00 IST
ಅಕ್ಷರ ಗಾತ್ರ

ಬೀದರ್‌: ಮೂವರು ಅಂತರರಾಜ್ಯ ಎಟಿಎಂ ದರೋಡೆಕೋರರನ್ನು ಜಿಲ್ಲಾ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

‘ಎಟಿಎಂ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ 7 ಆರೋಪಿಗಳ ಪೈಕಿ ಹರಿಯಾಣ ರಾಜ್ಯದ ಶಾಹಿದ್ ಕಮಲ್ ಖಾನ್, ರಿಹಾನ್ ಅಕ್ಬರ್ ಖಾನ್ ಹಾಗೂ ಇಲಿಯಾಸ್ ಅಬ್ದುಲ್ ರೆಹಮಾನ್‌ನನ್ನು ಬಂಧಿಸಲಾಗಿದೆ. ತಲೆಮರೆಸಿಕೊಂಡ 4 ಜನ ಆರೋಪಿತರ ಪತ್ತೆ ಕಾರ್ಯ ಮುಂದುವರಿದಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌.ಎಲ್‌. ನಗರದಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ರಾಜ್ಯದ 8 ಕಡೆ, ನೆರೆಯ ತೆಲಂಗಾಣದ 1 ಕಡೆ ಮತ್ತು ಮಹಾರಾಷ್ಟ್ರದ 3 ಕಡೆ ಎಟಿಎಂನಲ್ಲಿನ ಹಣ ಕದ್ದೊಯ್ದ ತಂಡದ ಮೂವರನ್ನು ಬೀದರ್ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. 

‘ಬೀದರ್ ಜಿಲ್ಲೆಯ ಹಳ್ಳಿಖೇಡ್‌ (ಬಿ) , ಬಸವಕಲ್ಯಾಣ, ಚಿಟಗುಪ್ಪ , ವಿಜಯಪುರ ಜಿಲ್ಲೆಯ 2 ಕಡೆ ಮತ್ತು ಬೆಳಗಾವಿಯ ಯಮಕನಮರಡಿ, ಅಂಕಲಿ, ಚಿಕ್ಕೋಡಿ ಸೇರಿದಂತೆ ಒಟ್ಟು 8 ಕಡೆ ಮತ್ತು ನೆರೆಯ ತೆಲಂಗಾಣದ ಸದಾಶಿವಪೇಟ, ಮಹಾರಾಷ್ಟ್ರದ ಉಮರ್ಗಾ ಮತ್ತು ಮುರುಮ ಸೇರಿದಂತೆ 4 ಕಡೆ ಒಟ್ಟು 12 ಎಟಿಎಂಗಳಲ್ಲಿ ₹ 1.58 ಕೋಟಿ ದೋಚಿ ಪರಾರಿಯಾಗಿದ್ದ ಮೇವತ ಗ್ಯಾಂಗಿನ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ’ ಎಂದು ಮಾಹಿತಿ ಹಂಚಿಕೊಂಡರು.

ಬಂಧಿತರಿಂದ ₹9.50 ಲಕ್ಷ ನಗದು, ಬಿಳಿ ಬಣ್ಣದ ಕ್ರೆಟಾ ಕಾರು ಜಪ್ತಿ ಮಾಡಲಾಗಿದೆ. ಆರೋಪಿಗಳು ಗೂಗಲ್ ಮ್ಯಾಪ್ ಸಹಾಯದಿಂದ ಟೋಲ್ ಗೇಟ್ ಇಲ್ಲದ ರಸ್ತೆಯಲ್ಲಿ ನಕಲಿ ನಂಬರ್ ಪ್ಲೇಟ್ ಇರುವ ಕಾರು ಬಳಸಿ ಗ್ಯಾಸ್ ವೆಲ್ಡಿಂಗ್ ಮೂಲಕ ಎಟಿಎಂ ಕತ್ತರಿಸಿ ಕೃತ್ಯ ಎಸಗುತ್ತಿದ್ದರು ಎಂದು ವಿವರಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣವರ, ಡಿವೈಎಸ್ಪಿಗಳಾದ ಶಿವನಗೌಡ ಪಾಟೀಲ, ಜೆ.ಎಸ್.ನ್ಯಾಮೇಗೌಡ, ಸಿಪಿಐ ಹನುಮರೆಡ್ಡಿ ಹಾಜರಿದ್ದರು.

ಖೋಟಾ ನೋಟು ಜಪ್ತಿ: ಐವರ ಬಂಧನ

ಬೀದರ್‌: ನಗರದ ಗಾಂಧಿಗಂಜ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ₹500 ಮುಖಬೆಲೆಯ 13 ಖೋಟಾ ನೋಟುಗಳನ್ನು ಜಪ್ತಿ ಮಾಡಿ ಐವರನ್ನು ಬಂಧಿಸಲಾಗಿದೆ ಎಂದು ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದರು. ಆರೋಪಿಗಳಿಂದ ಲ್ಯಾಪ್‌ಟಾಪ್‌ ಪ್ರಿಂಟರ್ ಪ್ರಿಂಟಿಂಗ್‌ ಬೋರ್ಡ್‌ ಹಾಗೂ ₹25 ಸಾವಿರ ನಗದು ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ನಗರದ ಮದ್ಯದಂಗಡಿಯಲ್ಲಿ ಖೋಟಾ ನೋಟಿನ ಮೂಲಕ ಮದ್ಯ ಖರೀದಿಸಲು ಪ್ರಯತ್ನಿಸಿದ್ದಾರೆ. ಅನುಮಾನಗೊಂಡ ಮದ್ಯದ ಮಾಲೀಕ ಹಿಡಿದು ಪೊಲೀಸರಿಗೆ ಮಾಹಿತಿ ತಿಳಿಸಿದ್ದರಿಂದ ಇತರೆ ನಾಲ್ವರನ್ನು ಬಂಧಿಸಲು ಸಹಾಯವಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಂತರ ಇನ್ನಷ್ಟು ವಿವರ ಗೊತ್ತಾಗಲಿದೆ ಎಂದು ಹೇಳಿದರು.

ಟ್ರ್ಯಾಕ್ಟರ್‌ 12 ಬೈಕ್‌ ಜಪ್ತಿ

ಬೀದರ್‌: ಹುಮನಾಬಾದ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳುವಾಗಿದ್ದ ₹4.60 ಲಕ್ಷ ಮೌಲ್ಯದ 12 ಬೈಕ್‌ಗಳನ್ನು ಜಪ್ತಿ ಮಾಡಿ ಸಲ್ಮಾನ್‌ ಸುಲೇಮಾನ್‌ ಎಂಬಾತನನ್ನು ಬಂಧಿಸಲಾಗಿದೆ. ಚಿಟಗುಪ್ಪ ತಾಲ್ಲೂಕಿನ ಚಾಂಗಲೇರ ಗ್ರಾಮದ ಸಲ್ಮಾನ್‌ ಒಬ್ಬನೇ ಬೈಕ್‌ಗಳನ್ನು ಕದ್ದು ಮಾರಾಟ ಮಾಡುತ್ತಿದ್ದ ಎಂದು ಎಸ್ಪಿ ತಿಳಿಸಿದರು. ಬೀದರ್‌ ನೂತನ ನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಕಳುವಾಗಿದ್ದ ₹3.75 ಲಕ್ಷದ ಮಹೀಂದ್ರಾ ಅರ್ಜುನ ಟ್ರ್ಯಾಕ್ಟರ್‌ ಜಪ್ತಿ ಮಾಡಿ ಬೀದರ್‌ ತಾಲ್ಲೂಕಿನ ಚೊಂಡಿ ನಿವಾಸಿ ಅಶೋಕ ಲಾಲಸಿಂಗ್‌ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ನಿಗರಾಣಿ’ ಯೋಜನೆ ಜಾರಿಗೆ

‘ಬೀಗ ಹಾಕಿಕೊಂಡು ಮನೆಯವರು ಬೇರೆ ಊರಿಗೆ ಹೋದಾಗ ಕಳ್ಳತನವಾಗದಂತೆ ತಡೆಯಲು ‘ನಿಗರಾಣಿ’ ಎಂಬ ವಿನೂತನ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಇದರಿಂದ ಮನೆ ಕಳ್ಳತನ ನಿಯಂತ್ರಿಸಲು ಸಾಧ್ಯವಾಗಲಿದೆ’ ಎಂದು ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ತಿಳಿಸಿದರು. ಮೊದಲು ಜಿಲ್ಲೆಯ ತಾಲ್ಲೂಕು ಕೇಂದ್ರಗಳಲ್ಲಿ ಜಾರಿಗೆ ತರಲಾಗುವುದು. ಸಾರ್ವಜನಿಕರಿಗೆ ಪೊಲೀಸರ ವಾಟ್ಸ್‌ಆ್ಯಪ್‌ ನಂಬರ್‌ ಶೇರ್‌ ಮಾಡಲಾಗುವುದು. ಮನೆಗೆ ಬೀಗ ಹಾಕಿ ಹೊರಗೆ ಹೋಗುವಾಗ ವಿವರವನ್ನು ವಾಟ್ಸ್‌ಆ್ಯಪ್‌ಗೆ ಕಳುಹಿಸಿದರೆ ‘ನಿಗರಾಣಿ’ ಸಿಬ್ಬಂದಿ ಮನೆಯ ಮೇಲೆ ನಿಗಾ ವಹಿಸುವರು. ಜನ ಸಹಕರಿಸಬೇಕು ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT