ಮಂಗಳವಾರ, ಏಪ್ರಿಲ್ 20, 2021
31 °C
ಭಕ್ತರ ಆರಾಧ್ಯ ಕೇಂದ್ರವೂ ಆಗಿರುವ ಹರಿನಾಥ ಮಹಾರಾಜರ ಮಠ

ಪ್ರವಾಸಿಗರ ಆಕರ್ಷಣೆ ಹೊಳಸಮುದ್ರದ ಗಂಡ ಬೇರುಂಡ

ಮನೋಜಕುಮಾರ ಹಿರೇಮಠ Updated:

ಅಕ್ಷರ ಗಾತ್ರ : | |

Prajavani

ಕಮಲನಗರ: ಬೀದರ್ ಜಿಲ್ಲೆ ಕಮಲನಗರ ತಾಲ್ಲೂಕಿನ ಹೊಳಸಮುದ್ರ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಹಾಗೂ ಸರ್ವಧರ್ಮ ಸಮನ್ವಯ ತತ್ವವನ್ನು ಸಾರುತ್ತಿರುವ ಶ್ರೀ ಹರಿನಾಥ ಮಹಾರಾಜರ ಮಠ ಭಕ್ತರ ಆರಾಧ್ಯ ಕೇಂದ್ರ ಮತ್ತು ಪ್ರವಾಸಿಗರ ತಾಣವಾಗಿದೆ.

ನಾಥ ಪಂಥಕ್ಕೆ ಸೇರುವ ಶ್ರೀ ಹರಿನಾಥ ಮಹಾರಾಜರು ತಮ್ಮ ಗುರುಗಳಾದ ಗಣೇಶನಾಥರ ಆಣತಿಯಂತೆ ಮಹಾರಾಷ್ಟ್ರ ಸಾರಸೆಯಲ್ಲಿ 12 ವರ್ಷ, ಉದಗೀರ ತಾಲ್ಲೂಕಿನ ಅಚವಲ ಬೆಟ್ಟದ ಮೇಲೆ 12 ವರ್ಷ, ನಂತರ ಹೊಳಸಮುದ್ರ ಗ್ರಾಮಕ್ಕೆ ಬಂದು 12 ವರ್ಷ ತಪಸ್ಸನ್ನು ಆಚರಿಸಿ, ಕಂಡುಕೊಂಡ ಸತ್ಯದ ಸಾಕ್ಷಾತ್ಕಾರವನ್ನು ಜನರ ಅಭ್ಯುದಕ್ಕೆ ವಿನಿಯೋಗಿಸಿದ ಶ್ರೇಷ್ಠ ದಂಪತಿಗಳ ಜೀವೈಕ್ಯದ ಈ ಮಠ ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ. ಅವರ ಪತ್ನಿ ಮಾತೆ ಸಖುಬಾಯಿ ಅವರು ತಮ್ಮ ಪತಿಯವರೊಂದಿಗೆ ಜನರಲ್ಲಿ ಸದ್ಗುಣಗಳನ್ನು ಭಿತ್ತಿ, ಅಂಧಃಕಾರವನ್ನು ಕಳೆಯಲು ಪ್ರಯತ್ನಿಸಿದ್ದರು. ಇಂದಿಗೂ ಪೂಜ್ಯ ಸ್ಥಾನ ಪಡೆದಿದ್ದಾರೆ.

ಈ ನಾಥ ಪರಂಪರೆಯ ಅನೇಕ ಅಂಶಗಳು ಕಾಲಗರ್ಭದಲ್ಲಿ ಕಣ್ಮರೆಯಾಗಿದ್ದರೂ ಭಕ್ತಿಯ ಶಕ್ತಿಯಿಂದ ಅಸಂಖ್ಯ ಅಂಶಗಳು ದಾಖಲಾಗಿರುವುದು ವಿಶೇಷ. ಇಂತಹ ಸ್ಮಾರಕ ಮಂದಿರದ ರಕ್ಷಣೆ ಹಾಗೂ ಜೀರ್ಣೋದ್ಧಾರಕ್ಕೆ ಸ್ಥಳೀಯ ಶ್ರೀ ಹರಿನಾಥ ಕೇಶವನಾಥ ಚಾರಿಟಿ ಸಂಸ್ಥಾನ ಹಾಗೂ ಗ್ರಾಮಸ್ಥರಿಂದ ಪ್ರಯತ್ನ ಸಾಗುತ್ತಿದೆ.

ಕರ್ನಾಟಕ ಸರ್ಕಾರ ಪ್ರಸ್ತುತ ಬಳಸುತ್ತಿರುವ ಗಂಡಬೇರುಂಡ ಮುದ್ರೆಯನ್ನು ಹೋಲುವಂಥ ಶಿಲ್ಪವಿದ್ದು, ಈ ಶಿಲ್ಪದಲ್ಲಿ ಗಂಡಬೇರುಂಡ ಪಕ್ಷಿಯು ತನ್ನ ಕೊಕ್ಕು ಮತ್ತು ಕಾಲುಗಳಲ್ಲಿ ಸಿಂಹ ಮತ್ತು ಆನೆಗಳನ್ನು ಹಿಡಿದು ಹಾರುತ್ತಿದೆ ಎನ್ನುವಂತೆ ಗೋಚರವಾಗುತ್ತದೆ. ಇದಲ್ಲದೇ ಸೂರ್ಯ, ಚಂದ್ರ ಮುದ್ರೆಗಳು ವಿಶೇಷವಾಗಿ ಚಿತ್ರಿತವಾಗಿದ್ದು ಹಲವಾರು ರೀತಿಯ ವಿವಿಧ ಚಿತ್ರಗಳು ಕಾಣಸಿಗುತ್ತವೆ. ಈ ಚಿತ್ರಗಳು
ಹೇಳುವ ಕಥೆಗಳು ಅಸಂಖ್ಯ. ಇಂತಹ ಅದ್ಭುತ ಕ್ಷೇತ್ರ ಹೊಳಸಮುದ್ರದ
ಶ್ರೀ ಹರಿನಾಥ ಮಹಾರಾಜರ ಕ್ಷೇತ್ರವಾಗಿದೆ.

ಕೆಳದಿ ಸಂಸ್ಥಾನ, ಮೈಸೂರು ಸಂಸ್ಥಾನ ಹಾಗೂ ಕರ್ನಾಟಕ ಸರ್ಕಾರ, ಸಾರಿಗೆ, ಪೋಲಿಸ್ ಇಲಾಖೆ ಬಳಸುತ್ತಿರುವ ಗಂಡಬೇರುಂಡ ಮುದ್ರೆಯನ್ನು ಹಲವು ಶತಮಾನಗಳ ಹಿಂದೆಯೇ ಶ್ರೀ ಹರಿನಾಥ ಮಹಾರಾಜರ ಕ್ಷೇತ್ರದಲ್ಲಿ
ಬಳಸಲಾಗಿದೆ.

ಹರಿನಾಥನ ಮಹಾರಾಜರ ಶಿಷ್ಯರಾಗಿರುವ ಮಲ್ಲಿನಾಥರು ತಮ್ಮ ಗುರುಗಳ ಸವಿನೆನಪಿಗಾಗಿ 30 ಅಡಿ ಅಗಲ 30 ಅಡಿ ಎತ್ತರದ ಆಕಾರದಲ್ಲಿ ಸಮಾಧಿ ಕಟಿಸಿದ್ದಾರೆ.

ಈ ಸಮಾಧಿಯ ಮೇಲ್ಭಾಗದ ಮಧ್ಯೆ 'ನಾಥ ಪಂಥದ ಸಮಾಧಿ' ರೂಪ ಹೊಂದಿದೆ.

ಶ್ರೀ ಹರಿನಾಥ ಮಹಾರಾಜ ಮತ್ತು ಮಾತೆ ಸಖುಬಾಯಿ ಅವರ ಪುಣ್ಯ ಕ್ಷೇತ್ರದಲ್ಲಿ ಗೌರಿ ಹುಣ್ಣಿಮೆ ಮತ್ತು ಆಷಾಢ ಹುಣ್ಣಿಮೆಗಳಲ್ಲಿ ವರ್ಷದಲ್ಲಿ ಎರಡು ಬಾರಿ ವಿಜೃಂಭಣೆಯ ಜಾತ್ರೆ ನಡೆಯುತ್ತದೆ. ವರ್ಷದ ಪ್ರತಿ ಗುರುವಾರ, ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಲ್ಲಿ ವಿಶೇಷ ಪೂಜೆ ಜರುಗುತ್ತವೆ. ಪ್ರತೀ ಏಕಾದಶಿ ದಿನದಂದು ವಿಶೇಷವಾಗಿ ಸಂತ, ಶರಣರಿಂದ ಪ್ರವಚನ ಮತ್ತು ಕೀರ್ತನೆ ಕಾರ್ಯಕ್ರಮಗಳು ನೆರವೇರುತ್ತಿವೆ. ವಿವಾಹ, ಅಭಿಷೇಕ, ಜವಳ, ನೈವೇದ್ಯ ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದ್ದು, ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಹಾಗೂ ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ ಮೂಲಗಳಿಂದ ಎಲ್ಲ ಸಮುದಾಯದ ಭಕ್ತರು ಈ ಕ್ಷೇತ್ರಕ್ಕೆ ಅಸಂಖ್ಯವಾಗಿ ಆಗಮಿಸುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.