ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಚ್ಛ ಸರೋವರವಾದ ತ್ರಿಪುರಾಂತ ಕೆರೆ

ಕೆಂಪು ಕೆಂಪಾಗಿರುತಿದ್ದ ಕೆರೆಯಲ್ಲಿ ಪ್ರಥಮ ಬಾರಿ ಕಾಣುತ್ತಿರುವ ತಿಳಿನೀರು
Last Updated 22 ನವೆಂಬರ್ 2020, 5:40 IST
ಅಕ್ಷರ ಗಾತ್ರ

ಬಸವಕಲ್ಯಾಣ: ಕೆಂಪು ಕೆಂಪಾದ ನೀರಿನಿಂದ ಕೂಡಿರುತ್ತಿದ್ದ ಇಲ್ಲಿನ ಐತಿಹಾಸಿಕ ತ್ರಿಪುರಾಂತ ಕೆರೆ ಈ ವರ್ಷ ತಿಳಿ ನೀರಿನ ಸರೋವರದಂತೆ ಕಂಗೊಳಿಸುತ್ತಿದೆ. ಅತ್ಯಂತ ಹಳೆಯ ಹಾಗೂ ಐತಿಹಾಸಿಕ ಮಹತ್ವದ ಈ ಕೆರೆಯಲ್ಲಿ ಸ್ವಚ್ಛವಾದ ನೀರು ಕಾಣುತ್ತಿರುವುದಕ್ಕೆ ಅನೇಕರಿಗೆ ಸೋಜಿಗದ ಜತೆಗೆ ಸಂತಸವೂ ಆಗಿದೆ.

ಈ ನೆಲ ಕೆಂಪು ಮಣ್ಣಿನಿಂದ ಕೂಡಿದ್ದರಿಂದ ನಾಲೆಗಳಿಂದ ಹರಿದು ಬರುವ ನೀರಿನಲ್ಲಿ ಇಂಥ ಮಣ್ಣು ಮಿಶ್ರಣಗೊಂಡು ಕೆರೆ ಸೇರುತ್ತದೆ. ಹೂಳೆತ್ತದ ಕಾರಣ ಹಾಗೆಯೇ ವರ್ಷಾನುಗಟ್ಟಲೇ ಸಂಗ್ರಹಗೊಂಡ ಈ ಮಣ್ಣು ಕೆಸರಿನ ರೂಪ ತಾಳುವುದರಿಂದ ನೀರು ಸಹ ಕೆಂಪಾಗಿಯೇ ಕಾಣುತ್ತದೆ. ಹೀಗಾಗಿ ಯಾವಾಗ ನೋಡಿದರೂ ಇಲ್ಲಿನ ನೀರು ಕೆಂಪಾಗಿಯೇ ಇರುತ್ತಿತ್ತು. ಆದ್ದರಿಂದ ಕೆರೆ ವೀಕ್ಷಣೆಗೆ ಬಂದವರು ಇಲ್ಲಿ ಬರೀ ಕೆಂಪು ನೀರೆ ಇರುತ್ತದಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು. ಈ ಸಲ ಮಾತ್ರ ಎಲ್ಲೆಡೆ ಸ್ವಚ್ಛ ನೀರು ಕಣ್ಣಿಗೆ ಗೋಚರಿಸುತ್ತಿದ್ದು ಆಹ್ಲಾದಕರ ವಾತಾವರಣ ಸೃಷ್ಟಿಯಾಗಿದೆ.

ಹಾಗೆ ನೋಡಿದರೆ, ಮಳೆಗಾಲದ ಆರಂಭದಲ್ಲಿ ಇಲ್ಲಿ ನೀರು ಇರಲೇ ಇಲ್ಲ. ಅನೇಕ ಸಲ ಭಾರಿ ಮಳೆ ಬಂದರೂ ಕೆಲ ತಿಂಗಳವೆರೆಗೆ ಕೆರೆಯಲ್ಲಿ ಬರೀ ತಳಮಟ್ಟದ ನೀರು ಸಂಗ್ರಹಗೊಂಡಿದಕ್ಕೆ ಅನೇಕರು ಚಿಂತೆ ವ್ಯಕ್ತಪಡಿಸಿದ್ದರು. ಜನಪರ ಸಂಘಟನೆಯ ಮುಖ್ಯಸ್ಥ ಶಿವಕುಮಾರ ಬಿರಾದಾರ ನೇತೃತ್ವದಲ್ಲಿ ಉಪ ವಿಭಾಗಾಧಿಕಾರಿ ಹಾಗೂ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯವರಿಗೆ ಮನವಿಪತ್ರ ಸಲ್ಲಿಸಿ ಕೆರೆಗೆ ನೀರು ಹರಿದು ಬರುವ ನಾಲೆಗಳಲ್ಲಿನ ಮಣ್ಣು ತೆಗೆದು ನೀರು ಸರಾಗವಾಗಿ ಹರಿದು ಬರುವ ವ್ಯವಸ್ಥೆ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿತ್ತು. ಆದರೆ ಯಾರೂ ಈ ಕಡೆ ಲಕ್ಷ್ಯ ವಹಿಸಲಿಲ್ಲ.

ಮಳೆಗಾಲದ ಪ್ರಥಮದಲ್ಲಿ ಕೆರೆಯಲ್ಲಿ ಹುಲ್ಲು ಗಿಡಗಂಟೆಗಳು ಬೆಳೆದಿದ್ದವು. ಆದ್ದರಿಂದ ಈಚೆಗೆ ಸುರಿದ ಮಳೆಯಿಂದ ಕೆರೆಗೆ ನೀರು ಸಂಗ್ರಹವಾಗಿದ್ದರಿಂದ ಕೆಸರು ಆಗಲಿಲ್ಲ. ಅಲ್ಲದೆ ಭಾರಿ ಪ್ರಮಾಣದ ಮಳೆ ಸುರಿದಿದ್ದರಿಂದ ನಾಲೆಗಳಲ್ಲಿ ನೀರಿನ ಬುಗ್ಗೆಗಳು ಎದ್ದಿದ್ದು, ಈಗಲೂ ಇಲ್ಲಿಗೆ ಹರಿದು ಬರುತ್ತಿದೆ. ಈ ಕಾರಣ ನೀರು ತಿಳಿಯಾಗಿ ಕಾಣುತ್ತಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.

ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಕೆರೆ ದಡದಲ್ಲಿ ವಾಕಿಂಗ್ ಪಾಥ್‌ ಹಾಗೂ ಶರಣ ನುಲಿ ಚಂದಯ್ಯ ಗವಿ ಆವರಣದಲ್ಲಿ ಉದ್ಯಾನ ನಿರ್ಮಿಸಲಾಗಿದೆ. ಕೆರೆ ದಂಡೆಯಲ್ಲಿನ ಘನಲಿಂಗ ರುದ್ರಮುನಿ ಗವಿಮಠದ ಆವರಣದಲ್ಲೂ ಮಠದಿಂದ ಅಭಿವೃದ್ಧಿ ನಡೆಸಿ ಗಿಡಮರಗಳನ್ನು ಬೆಳೆಸಲಾಗಿದೆ. ಪ್ರವಾಸಿಗರಿಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಲಾಗಿದೆ. ಇಲ್ಲಿನ ಮಠಾಧೀಶರಾದ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಕೆರೆ ಭರ್ತಿಯಾಗಿ ಎಲ್ಲೆಡೆ ಸ್ವಚ್ಛ ನೀರು ಕಾಣುತ್ತಿರುವುದಕ್ಕೆ ಸಂತಸಗೊಂಡು ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಅವರೊಂದಿಗೆ ಕೆರೆಗೆ ಬಾಗಿನವೂ ಅರ್ಪಿಸಿದ್ದಾರೆ. ಕೆರೆಯಲ್ಲಿ ಇನ್ನೂ ಅಭಿವೃದ್ಧಿ ಕಾರ್ಯಗಳು ನಡೆದು ಇದು ಇನ್ನಷ್ಟು ಸುಂದರ ಸ್ಥಳವಾಗಿ ಮಾರ್ಪಟ್ಟು ಜನಮನಸೆಳೆಯಲಿ ಎಂಬುದು ಸಾರ್ವಜನಿಕರ ಅನಿಸಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT