ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪೆಟ್‌ಗೆ ಅನುದಾನ ಕೋರಿದ ಖೂಬಾ

ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಭೇಟಿ: ಸಮಾಲೋಚನೆ
Published 12 ಜುಲೈ 2023, 14:42 IST
Last Updated 12 ಜುಲೈ 2023, 14:42 IST
ಅಕ್ಷರ ಗಾತ್ರ

ಬೀದರ್‌: ಔರಾದ್‌ ತಾಲ್ಲೂಕಿನ ಬಲ್ಲೂರ (ಜೆ) ಗ್ರಾಮದ ಸಮೀಪ ‘ಸಿಪೆಟ್’ (ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ) ಕೇಂದ್ರದ ಕಟ್ಟಡ ಕಾಮಗಾರಿ ಸಂಬಂಧ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಬೆಂಗಳೂರಿನಲ್ಲಿ ಬುಧವಾರ ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಅವರನ್ನು ಭೇಟಿಯಾಗಿ ಸಹಕಾರ ಕೋರಿದರು.

ಬೀದರ್‌ ಜಿಲ್ಲೆಯಲ್ಲಿ ಯಾವುದೇ ಬೃಹತ್‌ ಕೈಗಾರಿಕೆಗಳಿಲ್ಲ. ನಿರುದ್ಯೋಗ ದೂರ ಮಾಡಲು ಕೇಂದ್ರ ಸರ್ಕಾರವು ಜಿಲ್ಲೆಗೆ ಸಿಪೆಟ್‌ ಕೇಂದ್ರ ಮಂಜೂರು ಮಾಡಿ ತನ್ನ ಪಾಲಿನ ಶೇ 50ರಷ್ಟು ಅನುದಾನ ಕೂಡ ಬಿಡುಗಡೆಗೊಳಿಸಿದೆ. ಜಿಲ್ಲಾಡಳಿತವು ಕೇಂದ್ರದ ಕಟ್ಟಡ ಕಾಮಗಾರಿಗಾಗಿ ಬಲ್ಲೂರ (ಜೆ) ಗ್ರಾಮದ ಹತ್ತಿರ 10 ಎಕರೆ ಜಮೀನು ಮಂಜೂರು ಮಾಡಿದೆ. ಹೋದ ವರ್ಷ ಅದಕ್ಕೆ ಭೂಮಿಪೂಜೆಯೂ ಆಗಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಶೇ 50ರಷ್ಟು ಅನುದಾನ ನೀಡಿ ಸಹಕರಿಸಬೇಕು ಎಂದು ಮನವಿ ಮಾಡಿದರು.

ಬೀದರ್‌ ಜಿಲ್ಲೆಯೂ ಮೂರನೇ ಹಂತದ ನಗರವಾಗಿದೆ. ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳಿಲ್ಲದ ಕಾರಣ ಯುವಕರು ತೆಲಂಗಾಣ ಹಾಗೂ ಮಹಾರಾಷ್ಟ್ರದ ಕಡೆಗೆ ಮುಖ ಮಾಡುತ್ತಿದ್ದಾರೆ. ಕೈಗಾರಿಕೋದ್ಯಮಕ್ಕೆ ಅವಶ್ಯಕವಾಗಿರುವ ರಾಷ್ಟ್ರೀಯ ಹೆದ್ದಾರಿ, ರೈಲ್ವೆ, ವಿಮಾನಯಾನ ಇತ್ಯಾದಿ ಮೂಲ ಸೌಕರ್ಯಗಳನ್ನು ಕೇಂದ್ರದಿಂದ ಅನುದಾನ ತಂದು ಜಿಲ್ಲೆಯಲ್ಲಿ ಮಾಡಿಸಿರುವೆ. ಹಿಂದಿನ ಸರ್ಕಾರದಲ್ಲಿ ಇನ್ವೆಸ್ಟ್ ಕರ್ನಾಟಕ ಬೆಂಗಳೂರು, ಹುಬ್ಬಳ್ಳಿ ಹಾಗೂ ಹೈದರಾಬಾದ್‌ನಲ್ಲಿ ನಡೆದ ಬಂಡವಾಳ ಹೂಡಿಕೆ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವೆ. ಹೂಡಿಕೆಗೆ ಮನವಿ ಮಾಡಿಕೊಂಡಾಗ ಕೆಲವು ಕಂಪನಿಗಳು ಮುಂದೆ ಬಂದಿದ್ದವು. ಒಪ್ಪಂದ ಕೂಡ ಆಗಿತ್ತು. ಕೋವಿಡ್‌ನಿಂದಾಗಿ ಎಲ್ಲ ಪ್ರಕ್ರಿಯೆಗಳು ನಿಂತು ಹೋಗಿದ್ದವು. ಆ ಕೈಗಾರಿಕೆಗಳ ಸ್ಥಾಪನೆಗೆ ಒತ್ತು ಕೊಡಬೇಕು ಎಂದು ಕೋರಿದರು.

ಅದಕ್ಕೆ ಎಂ.ಬಿ.ಪಾಟೀಲರು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಖೂಬಾ ತಿಳಿಸಿದರು.

ಶಾಸಕರಾದ ಶರಣು ಸಲಗರ, ಡಾ.ಶೈಲೇಂದ್ರ ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ, ಎನ್.ಎಸ್.ಎಸ್.ಕೆ ಅಧ್ಯಕ್ಷ ಡಿ.ಕೆ.ಸಿದ್ರಾಮ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪದ್ಮಾಕರ ಪಾಟೀಲ ಹಾಗೂ ಬಿಜೆಪಿ ಮುಖಂಡ ಬಸವರಾಜ ಆರ್ಯ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT