ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಹಣ ಪಾವತಿಸದಸಕ್ಕರೆ ಕಾರ್ಖಾನೆಗೆ ನೋಟಿಸ್

₹13.95 ಕೋಟಿ ಮೊತ್ತ ಬಾಕಿ
Last Updated 8 ಜೂನ್ 2021, 15:33 IST
ಅಕ್ಷರ ಗಾತ್ರ

ಬೀದರ್‌: ‘ಕಬ್ಬು ಸರಬರಾಜು ಮಾಡಿದ ರೈತರಿಗೆ ಹಣ ಪಾವತಿಸಲು ವಿಳಂಬ ಮಾಡುತ್ತಿರುವ ಬೀದರ ಕಿಸಾನ್ ಸಕ್ಕರೆ ಕಾರ್ಖಾನೆಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ತಿಳಿಸಿದ್ದಾರೆ.

‘ಕಾರ್ಖಾನೆಯು 2020-21ನೇ ಸಾಲಿನಲ್ಲಿ ಎಫ್‍ಆರ್‌ಪಿ ದರದಂತೆ ಕಬ್ಬು ಪೂರೈಸಿದ ರೈತರಿಗೆ ಪಾವತಿಸಬೇಕಾದ ₹13.95 ಕೋಟಿ ಮೊತ್ತವನ್ನು ಪಾವತಿಸದೇ ಬಾಕಿ ಉಳಿಸಿಕೊಂಡಿದೆ. ವಿಳಂಬ ಮಾಡುತ್ತಿರುವುದನ್ನು ಕಂಡು ರೈತರಿಗೆ 14 ದಿವಸದೊಳಗಾಗಿ ಕಬ್ಬಿನ ಹಣ ಪಾವತಿಸುವಂತೆ ಹಾಗೂ ಅದರ ಅನುಪಾಲನಾ ವರದಿ ಸಲ್ಲಿಸುವಂತೆ ಈ ಮೊದಲು ಸೂಚಿಸಲಾಗಿತ್ತು’ ಎಂದು ಹೇಳಿದ್ದಾರೆ.

‘ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಬಾಕಿ ಪಾವತಿಸುವಂತೆ ಕಾರ್ಖಾನೆಯವರಿಗೆ ಸೂಚಿಸಿದ್ದರೂ ಇದುವರೆಗೂ ಕಾರ್ಖಾನೆಯವರು ಬಾಕಿ ಉಳಿಸಿಕೊಂಡಿದ್ದಾರೆ. ಕಬ್ಬು ನಿಯಂತ್ರಣ ಆದೇಶ 1966 3(3ಎ)ರ ಅನುಸಾರ ಈ ಕಾರ್ಖಾನೆ ಕಬ್ಬು ಸರಬರಾಜು ಮಾಡಿದ ರೈತರಿಗೆ 14 ದಿನಗಳೊಳಗಾಗಿ ಕಬ್ಬು ಬಿಲ್ಲು ಪಾವತಿಸದೇ ಇದ್ದಲ್ಲಿ ನಂತರದ ಅವಧಿಗೆ ವಾರ್ಷಿಕ ಶೇ 15ರ ಬಡ್ಡಿ ಪಾವತಿಸುವಂತೆ ಆದೇಶವಿದೆ. ಆದರೂ ಸಹ 2020-21ನೇ ಸಾಲಿನಲ್ಲಿ ಕಬ್ಬು ಸರಬರಾಜು ಮಾಡಿದ ರೈತರಿಗೆ ಕಬ್ಬಿನ ಹಣ ಪಾವತಿಸಿಲ್ಲ’ ಎಂದು ತಿಳಿಸಿದ್ದಾರೆ.

‘ರೈತರಿಗೆ ಹಣ ಪಾವತಿಸದೇ ನಿಯಮ ಉಲ್ಲಂಘನೆ ಮಾಡಲಾಗಿದೆ. ಆದ್ದರಿಂದ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು, ನೋಟಿಸ್ ತಲುಪಿದ ಕೂಡಲೇ ರೈತರ ಕಬ್ಬು ಬಿಲ್ಲು ತೀರುವಳಿ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ. ತಪ್ಪಿದಲ್ಲಿ ಕರ್ನಾಟಕ ಭೂಕಂದಾಯ ಕಾಯ್ದೆ 1964ರ ಅವಕಾಶಗಳ ಅನುಸಾರ ಮತ್ತು ಕಬ್ಬು ನಿಯಂತ್ರಣ ಆದೇಶ 1966ರ ಕಲಂ 3(8)ರ ಪ್ರಕಾರ ಬಾಕಿಯನ್ನು ಭೂಕಂದಾಯ ಬಾಕಿ ಎಂದು ಪರಿಗಣಿಸಿ ವಸೂಲಾತಿಗೆ ಕ್ರಮ ವಹಿಸಲಾಗುವುದೆಂದು ನೋಟಿಸ್‍ನಲ್ಲಿ ಎಚ್ಚರಿಕೆ ನೀಡಲಾಗಿದೆ’ ಎಂದು ಹೇಳಿದ್ದಾರೆ.

‘ಜನಪ್ರತಿನಿಧಿಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಅಧ್ಯಕ್ಷರೊಂದಿಗೆ ಈ ಮೊದಲು ನಡೆದ ಸಭೆಯ ನಿರ್ಣಯದಂತೆ ಪ್ರತಿ ಟನ್ ಕಬ್ಬಿಗೆ ₹2,400 ಪಾವತಿಸಿ, ರೈತರ ಹಿತ ಕಾಪಾಡಬೇಕು’ ಎಂದು ಸಚಿವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT