ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಲ್ಕಿ: ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಿ

ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಒತ್ತಾಯ
Last Updated 24 ಜೂನ್ 2020, 16:35 IST
ಅಕ್ಷರ ಗಾತ್ರ

ಭಾಲ್ಕಿ: ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಗೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಲು ಸರ್ವ ಸದಸ್ಯರು ಒತ್ತಾಯಿಸಿ, ತಡವಾಗಿ ಬಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಲಾ ನಾಯ್ಕರ್,‘ಇನ್ಮುಂದೆ ಸಂಬಂಧಿಸಿದ ಇಲಾಖೆಯವರು ಸಭೆಗೆ ಬರುವ ಮುನ್ನ ಪೂರ್ಣ ಮಾಹಿತಿಯೊಂದಿಗೆ ಆಗಮಿಸಬೇಕು ಹಾಗೂ ಇಲಾಖೆ ಅನುಷ್ಠಾನ ಅಧಿಕಾರಿಗಳೇ ಖುದ್ದಾಗಿ ಸಭೆಗೆ ಹಾಜರಾಗಬೇಕು’ ಎಂದು ಸೂಚಿಸಿದರು.

ತಾಲ್ಲೂಕಿನ ಏಣಕೂರ, ಕಣಜಿ ಗ್ರಾಮದ ಕೆಲ ರೈತರು ಸೋಯಾಬಿನ್‌ ಬೀಜಗಳು ಕಳಪೆ ಮಟ್ಟದ್ದಾಗಿದ್ದು, ಬಿತ್ತನೆ ಮಾಡಿ ವಾರ ಕಳೆದರೂ ಬೀಜ ಮೊಳಕೆಯೊಡೆಯುತ್ತಿಲ್ಲ ಎಂದು ದೂರುತ್ತಿದ್ದಾರೆ ಎಂದು ಕೃಷಿ ಅಧಿಕಾರಿ ಮಸ್ಕಲೆ ಅವರಿಗೆ ಹೇಳಿದಾಗ, ಇದಕ್ಕೆ ಉತ್ತರಿಸಿದ ಮಸ್ಕಲೆ ಅವರು, ಈಗಾಗಲೇ ಬೀಜ ವಿತರಿಸಿದ ಕಂಪನಿ ವಿರುದ್ದ ದೂರು ದಾಖಲಿಸಲಾಗಿದೆ. ಎಲ್ಲೆಲ್ಲಿ ಕಳಪೆ ಬೀಜ ವಿತರಣೆ ಆಗಿದೆ ಎಂಬುದನ್ನು ಪರಿಶೀಲಿಸಲು ತಂಡ ಕಳುಹಿಸಿ ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.

ರೈತರ ಆರ್ಥಿಕ ಏಳಿಗೆಗಾಗಿ ಸರ್ಕಾರ ಒದಗಿಸುವ ಸಕಲ ಸೌಲಭ್ಯಗಳು ರೈತರಿಗೆ ತಲುಪಿಸುವ ಹೊಣೆಗಾರಿಕೆ ಸಂಬಂಧಪಟ್ಟ ಅಧಿಕಾರಿಗಳದ್ದಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಮೀರಾಬಾಯಿ ಜನಾರ್ಧನರಾವ್ ಕಣಜೆ ಹೇಳಿದರು.

ಸದಸ್ಯರಾದ ಲಿಂಗರಾಜ, ಸುಧಾಕರ್, ಶಿವರಾಜ ಪಾಟೀಲ, ಕಿಶೋರಕುಮಾರ ಮಾತನಾಡಿ, ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿನ ಬೀಜ, ರಸಗೊಬ್ಬರ, ತಾಡಪತ್ರಿ ವಿತರಣೆಯಾಗಬೇಕು. ಕೃಷಿಹೊಂಡ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕು. ಬೇರೆ ಜಿಲ್ಲೆ, ರಾಜ್ಯಗಳಿಂದ ಪ್ರಯಾಣ ಮುಗಿಸಿ ಬಂದವರಿಗೆ ಗ್ರಾಮೀಣ ಭಾಗದ ಶಾಲಾ- ಕಾಲೇಜುಗಳಲ್ಲಿ ಕ್ವಾರಂಟೈನ್ ಮಾಡುವುದು ಬೇಡ. ಆನ್‍ಲೈನ್ ಶಿಕ್ಷಣ ಪದ್ದತಿ ಮಕ್ಕಳ ವರ್ತನೆ ಮೇಲೆ ದುಷ್ಪರಿಣಾಮ ಬೀರುತ್ತಿರುವುದರಿಂದ ತಕ್ಷಣವೇ ನಿಲ್ಲಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಕೃಷಿ, ಆರೋಗ್ಯ, ತೋಟಗಾರಿಕೆ, ಸಮಾಜಕಲ್ಯಾಣ, ಅರಣ್ಯ ಇಲಾಖೆಯ ಪ್ರಮುಖ ವಿಷಯಗಳು ಕುರಿತು ಚರ್ಚೆ ನಡೆಸಲಾಯಿತು.ತಾ.ಪಂ ಸದಸ್ಯರು ಮತ್ತು ವಿವಿಧ ಇಲಾಖೆಯ ತಾಲ್ಲೂಕು ಅನುಷ್ಠಾನ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT