ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ: ಉಚ್ಚಾ ಗ್ರಾಮದ ಪ್ರತಿಶತ ಸಾಧನೆ

ಚುಚ್ಚುಮದ್ದು ಪಡೆದ ಗ್ರಾಮದ 45 ವರ್ಷ ಮೇಲ್ಪಟ್ಟ 1,054 ಜನ
Last Updated 1 ಜೂನ್ 2021, 1:11 IST
ಅಕ್ಷರ ಗಾತ್ರ

ಭಾಲ್ಕಿ: ತಾಲ್ಲೂಕಿನ ಉಚ್ಚಾ ಗ್ರಾಮದಲ್ಲಿ 45 ವರ್ಷ ಮೇಲ್ಪಟ್ಟ ಎಲ್ಲ ನಾಗರಿಕರು ಮುಕ್ತ ಮನಸ್ಸಿನಿಂದ ಕೋವಿಡ್‌ ಲಸಿಕೆ ಪಡೆದು ಮಾದರಿ ಆಗಿದ್ದಾರೆ.

ಸೋಮವಾರ ಬಸವಕಲ್ಯಾಣ ಉಪ ವಿಭಾಗಾಧಿಕಾರಿ ಭುವನೇಶ ಪಾಟೀಲ ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಮಾದರಿ ನಡೆ, ಆಶಾ ಕಾರ್ಯಕರ್ತೆ, ವೈದ್ಯಕೀಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

‘ಗ್ರಾಮದ ಎಲ್ಲ ಸಮುದಾಯದ ಜನರು ಯಾವುದೇ ಭಯ, ಆತಂಕ ಇಲ್ಲದೆ ಲಸಿಕೆ ಹಾಕಿಸಿಕೊಂಡಿರುವುದು ಸಂತಸದ ಸಂಗತಿ’ ಎಂದರು.

‘ಈಚೆಗೆ ತಾಲ್ಲೂಕು ಆರೋಗ್ಯ ಅಧಿಕಾರಿ ಜೊತೆಗೂಡಿ ಗ್ರಾಮಕ್ಕೆ ಭೇಟಿ ನೀಡಿ ಕೋವಿಡ್‌ ಚುಚ್ಚುಮದ್ದಿನ ಮಹತ್ವ ಕುರಿತು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ನಮ್ಮ ಮಾತಿಗೆ ಬೆಲೆ ಕೊಟ್ಟು ಗ್ರಾಮದ ಒಟ್ಟು 1,054 ಜನ ಹಿರಿಯ ನಾಗರಿಕರು ಹಾಗೂ 18ರಿಂದ 44 ವರ್ಷ ವಯಸ್ಸಿನ 140 ಅಂಗವಿಕಲರು, ಅವರ ಸಹಾಯಕರು, ಚಿತಾಗಾರದಲ್ಲಿ ಕೆಲಸ ಮಾಡುವರು ಸೇರಿದಂತೆ ಮುಂಚೂಣಿ ನಾಗರಿಕರು ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಸಂಪೂರ್ಣ ಸಹಕಾರ ನೀಡಿ ಲಸಿಕೆ ಪಡೆದುಕೊಂಡು ಲಸಿಕೆ ಅಭಿಯಾನಕ್ಕೆ ಬಲ ತುಂಬಿದ್ದಾರೆ’ ಎಂದು ತಹಶೀಲ್ದಾರ್‌ ಅಣ್ಣಾರಾವ್‌ ಪಾಟೀಲ ತಿಳಿಸಿದರು.

‘ತಾಲ್ಲೂಕನ್ನು ಕೋವಿಡ್‌ ಮುಕ್ತವಾಗಿಸಲು ಎಲ್ಲ ಗ್ರಾಮಗಳಲ್ಲಿ ಲಸಿಕೆ ನೀಡಿಕೆ ವೇಗವನ್ನು ಹೆಚ್ಚಿಸಲಾಗಿದೆ. ಈಚೆಗೆ ಭಾಲ್ಕಿ ಪಟ್ಟಣದಲ್ಲಿ ಚುಚ್ಚುಮದ್ದು ಪಡೆಯಲು ಹಿಂದೇಟು ಹಾಕಿದ್ದ ಬೀದಿಬದಿ ವ್ಯಾಪಾರಿಗಳು ಸೋಮವಾರ ಸ್ವಇಚ್ಛೆಯಿಂದ ಲಸಿಕೆ ಪಡೆದು ಅಧಿಕಾರಿಗಳಿಗೆ ಸಹಕಾರ ನೀಡಿದ್ದಾರೆ’ ಎಂದು ಹೇಳಿದರು.

ತಾಲ್ಲೂಕು ಆರೋಗ್ಯಾಧಿಕಾರಿ ಜ್ಞಾನೇಶ್ವರ ನಿರಗುಡೆ ಮಾತನಾಡಿ, ‘ಲಸಿಕೆ ಕೊರತೆಯಿಲ್ಲ. ಉಚ್ಚಾ ಗ್ರಾಮದಂತೆ ತಾಲ್ಲೂಕಿನ ಎಲ್ಲ ಗ್ರಾಮದ 45 ವರ್ಷ ಮೇಲ್ಪಟ್ಟ ನಾಗರಿಕರು ಲಸಿಕೆ ಹಾಕಿಸಿಕೊಳ್ಳಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದಲ್ಲಿ ಯಾವುದೇ ರೋಗ ಬಂದರೂ ತಡೆದು ಕೊಳ್ಳುವ ಶಕ್ತಿ ಬರುತ್ತದೆ’ ಎಂದರು.

ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್, ಕಂದಾಯ ನಿರೀಕ್ಷಕ ಸಂಜುಕುಮಾರ, ಪಿಡಿಒ ವಿಶ್ವದೀಪ ಮೊರಂಬೆ, ವಿ.ಸ್ಟೆಲ್ಲಾರಾಣಿ ಆಶಾ ಕಾರ್ಯಕರ್ತೆ ಯರಾದ ಮೀನಾಕ್ಷಿ ಧರ್ಮಣ್ಣಾ, ಲಕ್ಷ್ಮಿ ಧನರಾಜ, ಅಂಗನವಾಡಿ ಕಾರ್ಯ ಕರ್ತೆಯರಾದ ಮಹೇಶ್ವರಿ ಮಹಾಗಾವೆ, ಜೈಶೀಲಾ ರವೀಂದ್ರ, ಗ್ರಾಮ ಪಂಚಾಯಿತಿ ಸದಸ್ಯರಾದ ಸಿದ್ರಾಮ ಅಳ್ಳೆ, ಸರಸ್ವತಿ ಪಾಟೀಲ, ಜಗದೇವಿ ಹಜನಾಳೆ, ಪವನ ಠಾಕೂರ್, ಶಿವನಾಥ ಮಹಾಗಾವೆ, ದೀಲಿಪ ಧರ್ಮಣ್ಣಾ, ಯೂನಸ್ ಲದಾಫ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT