ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: ನೀರು ಪೂರೈಸಲು ಮುಂದಾದ ಸಾಯಿಕುಮಾರ

ಅಜ್ಜ ಮತ್ತು ತಂದೆಯ ದಾನದ ಗುಣಗಳಿಂದ ಸ್ಫೂರ್ತಿ
Last Updated 19 ಏಪ್ರಿಲ್ 2021, 4:56 IST
ಅಕ್ಷರ ಗಾತ್ರ

ಔರಾದ್: ಅಜ್ಜ ಮತ್ತು ತಂದೆಯ ಸ್ಫೂರ್ತಿಯಿಂದ ಯುವಕರೊಬ್ಬರು ಈ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರು ಪೂರೈಸುತ್ತಿದ್ದಾರೆ. ಅಭಿವೃದ್ಧಿ ಹಾಗೂ ಸಮಾಜ ಕಾರ್ಯದಲ್ಲಿ ಹೆಸರು ಮಾಡಿದ ಸಂತಪುರದ ಪಂಢರಿನಾಥ ಘೋಡ್ಕೆ ಕಲಾಲ್ ಅವರ ಪುತ್ರ ಸಾಯಿಕುಮಾರ ಘೋಡ್ಕೆ ಅವರು ಕಳೆದ ಒಂದು ತಿಂಗಳಿನಿಂದ ಜನರ ಮನೆ ಬಾಗಿಲಿಗೆ ನೀರು ಕೊಡುತ್ತಿದ್ದಾರೆ.

ಎಂಜಿನಿಯರಿಂಗ್ ಪದವೀಧರರಾ ಗಿರುವ ಸಾಯಿಕುಮಾರ ಅವರಿಗೆ ಕೈತುಂಬ ಸಂಬಳ ಇದೆ. ಅಜ್ಜ ಹಾಗೂ ತಂದೆ ಗಳಿಸಿರುವ ಆಸ್ತಿ ಇದೆ. ಊರಿನ ಜನರಿಗೆ ಸಹಾಯ ಮಾಡುವ ಹೆಬ್ಬಯಕೆಯಿಂದ ನೀರು ದಾನ ಮಾಡುತ್ತಿರುವುದು ಯುವ ಜನಾಂಗಕ್ಕೆ ಮಾದರಿ ಎನಿಸಿದೆ.

‘ನನ್ನ ಅಜ್ಜ ನಾಗೇಂದ್ರ ಘೋಡ್ಕೆ, ತಂದೆ ಪಂಢರಿನಾಥ ಘೋಡ್ಕೆ ಉತ್ತಮ ಹೆಸರು ಪಡೆದವರು. ಸಂತಪುರ ಅಭಿವೃದ್ಧಿ ಮತ್ತು ತಾಲ್ಲೂಕು ರಚನೆಗಾಗಿ ಹೋರಾಟ ಮಾಡಿದ್ದಾರೆ. ಅಂದಿನ ಪ್ರಧಾನಿ ವಾಜಪೇಯಿ ಅವರನ್ನೂ ಭೇಟಿ ಮಾಡಿದ್ದಾರೆ. ಊರಿಗೆ ಮೊರಾರ್ಜಿ ಶಾಲೆ ಮಂಜೂರಾಗಿರುವುದು ಗೊತ್ತಾಗಿ 6 ಎಕರೆ ಜಮೀನನ್ನು ಉಚಿತವಾಗಿ ಕೊಟ್ಟಿದ್ದಾರೆ. ಸಂತಪುರ ಬಸ್ ನಿಲ್ದಾಣಕ್ಕೆ ತಮ್ಮ ಗೆಳೆಯರೊಬ್ಬರ ಜಮೀನು ಕೊಡಿಸಿದ್ದಾರೆ. ಸಹಾಯ ಅರಸಿ ಬಂದ ಬಡವರಿಗೆ ಅವರು ಎಂದೂ ವಾಪಸ್ ಕಳುಹಿಸಿಲ್ಲ. ಹೀಗಾಗಿ ಜನ ಈಗಲೂ ಅವರನ್ನು ಸ್ಮರಿಸುತ್ತಾರೆ’ ಎಂದು ಸಾಯಿಕುಮಾರ ಘೋಡ್ಕೆ ಹೇಳುತ್ತಾರೆ.

‘ಸಂತಪುರ ಜನ ಅವರ ಮೇಲೆ ಇಟ್ಟ ಪ್ರೀತಿ ಹಾಗೂ ಸ್ಫೂರ್ತಿಯ ಫಲದಿಂದಾಗಿ ನಾನೂ ಒಂದಿಷ್ಟು ಜನರಿಗೆ ನೆರವಾಗಬೇಕು ಎಂಬ ಕಾರಣದಿಂದ ಕಳೆದ ಒಂದು ತಿಂಗಳಿನಿಂದ ಜನರಿಗೆ ಕುಡಿಯಲು ನೀರು ಪೂರೈಸುತ್ತಿದ್ದೇನೆ’ ಎಂದು ಅವರು ತಿಳಿಸುತ್ತಾರೆ.

‘ಬೇಸಿಗೆ ಬರುತ್ತಿದ್ದಂತೆ ಸಂತಪುರದಲ್ಲಿ ನೀರಿನ ಸಮಸ್ಯೆ ಸಾಮಾನ್ಯವಾಗಿದೆ. ಬೇಸಿಗೆ ಶುರುವಾಗಿ ಎರಡು ತಿಂಗಳಾದರೂ ಸರ್ಕಾರ ಸಮಸ್ಯೆಗೆ ಸ್ಪಂದಿಸಿಲ್ಲ. ಆದರೆ ಸಾಯಿಕುಮಾರ ಅವರು ತಮ್ಮ ಸ್ವಂತ ಖರ್ಚಿನಿಂದ 6 ಸಾವಿರ ಲೀಟರ್‌ನ ಎರಡು ಟ್ಯಾಂಕರ್‌ ಬಾಡಿಗೆ ಪಡೆದು ಜನರಿಗೆ ನಿತ್ಯ ಉಚಿತವಾಗಿ ನೀರು ಪೂರೈಸುತ್ತಿದ್ದಾರೆ’ ಎಂದು ಸಂತಪುರ ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷ ಸಿದ್ದಯ್ಯ ಸ್ವಾಮಿ ಹೇಳಿದರು.

‘ಸಂತಪುರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವುದು ನಮಗೂ ಗೊತ್ತಿದೆ. ಅಂತರ್ಜಲಮಟ್ಟ ಕಡಿಮೆಯಾಗಿ ಕೆಲ ಕೊಳವೆಬಾವಿಗಳ ನೀರು ಬತ್ತಿದೆ. ಹೀಗಾಗಿ ಹೊಸ ಕೊಳವೆಬಾವಿ ಕೊರೆಯುತ್ತೇವೆ. ಸಮಸ್ಯೆ ಪರಿಹಾರ ಆಗದಿದ್ದಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುವುದು’ ಎಂದು ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT