ಮಂಗಳವಾರ, ಮೇ 17, 2022
27 °C
ಬೆನಕನಳ್ಳಿ ಗ್ರಾಮದ ಭವಾನಿ ಮಂದಿರದಲ್ಲಿ ವಿಶೇಷ ಪೂಜೆ

ಜನತಾ ಜಲಧಾರೆ ರಥಯಾತ್ರೆಗೆ ಅದ್ಧೂರಿ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಜಾತ್ಯತೀತ ಜನತಾ ದಳವು ಆರಂಭಿಸಿರುವ ಜನತಾ ಜಲಧಾರೆ ರಥಯಾತ್ರೆಗೆ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಬೀದರ್ ತಾಲ್ಲೂಕಿಗೆ ಸ್ವಾಗತಿಸಿ, ಬರಮಾಡಿಕೊಂಡರು.

ಔರಾದ್ ತಾಲ್ಲೂಕಿನ ಕೌಠಾ(ಬಿ) ಮಾರ್ಗವಾಗಿ ಬಂದ ರಥಯಾತ್ರೆಗೆ ಜನವಾಡ ಸಮೀಪ ಪಟಾಕಿ ಸಿಡಿಸಿ, ಬಾಜಾ ಭಜಂತ್ರಿಗಳೊಂದಿಗೆ ಅದ್ಧೂರಿ ಸ್ವಾಗತ ನೀಡಿದರು. ಮುಖಂಡರಿಗೆ ಹೂಮಾಲೆ ಹಾಕಿ ಸನ್ಮಾನಿಸಿದರು.

ಬೀದರ್-ಔರಾದ್ ಮುಖ್ಯ ರಸ್ತೆಯಲ್ಲಿನ ಗ್ರಾಮದ ಬಸವೇಶ್ವರ ವೃತ್ತದ ಬಳಿ ಬಹಿರಂಗ ಸಭೆಯ ನಡೆಸಿದ ಬಳಿಕ ರಥಯಾತ್ರೆ ಮರಕಲ್‍ಗೆ ಹೊರಟಿತು. ಮರಕಲ್‍ನ ಹನುಮಾನ ಮಂದಿರ ಸಮೀಪ ವೇದಿಕೆ ಕಾರ್ಯಕ್ರಮದಲ್ಲಿ ಪಕ್ಷದ ಮುಖಂಡರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು.

ಬೆನಕನಳ್ಳಿ ಭವಾನಿ  ಮಂದಿರದಲ್ಲಿ ರಥಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ಮುಂದುವರಿದ ರಥಯಾತ್ರೆಯು ಗಾದಗಿ, ಚಿಮಕೋಡ್ ಮಾರ್ಗದಲ್ಲಿ ಸಂಚರಿಸಿತು.

ನೀರಾವರಿ ಯೋಜನೆಗಳ ಮೂಲಕ ರೈತರ ಭೂಮಿ ಹಸಿರಾಗಿಸುವ ಸಂಕಲ್ಪದೊಂದಿಗೆ ರಾಜ್ಯದಲ್ಲಿ ಏಕಕಾಲಕ್ಕೆ 15 ಜನತಾ ಜಲಧಾರೆ ರಥಯಾತ್ರೆಗಳನ್ನು ಆರಂಭಿಸಲಾಗಿದೆ. ಪಕ್ಷ ಅಧಿಕಾರದಲ್ಲಿದ್ದಾಗ ಜಾರಿಗೊಳಿಸಿದ್ದ ನೀರಾವರಿ ಯೋಜನೆಗಳ ಬಗ್ಗೆ ರಥಯಾತ್ರೆಯಲ್ಲಿ ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ವಿಧಾನಸಭೆಯ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕ ಬಂಡೆಪ್ಪ ಕಾಶೆಂಪೂರ ತಿಳಿಸಿದರು.

ಜೆಡಿಎಸ್ ಅಧಿಕಾರ ಅವಧಿಯ ಜನಪರ ಕಾರ್ಯಗಳನ್ನು ಜನ ಸ್ಮರಿಸಿಕೊಳ್ಳುತ್ತಿದ್ದಾರೆ. ಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ ಎಂದು ಹೇಳಿದರು.

ಜನತಾ ಜಲಧಾರೆ ರಥಯಾತ್ರೆಗೆ ಎಲ್ಲೆಡೆ ಅಭೂತಪೂರ್ವ ಬೆಂಬಲ ದೊರಕುತ್ತಿದೆ. ಜನ ಹೃದಯಸ್ಪರ್ಶಿ ಸ್ವಾಗತ ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ಜಾತ್ಯತೀತ ಜನತಾ ದಳದ ಪರ ವಾತಾವರಣ ನಿರ್ಮಾಣವಾಗಿದೆ ಎಂದು ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ನಿಯೋಜಿತ ಅಭ್ಯರ್ಥಿಯೂ ಆದ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ ಸೋಲಪೂರ ಹೇಳಿದರು.

ಮುಖಂಡರಾದ ಅಸದೊದ್ದಿನ್, ಐಲಿನ್ ಜಾನ್ ಮಠಪತಿ, ಬೀದರ್ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಪಾಟೀಲ ಹಾರೂರಗೇರಿ, ಕಾರ್ಯಾಧ್ಯಕ್ಷ ತಾಜೊದ್ದಿನ್ ಜನವಾಡ, ರಮೇಶ ಡಾಕುಳಗಿ, ಸೂರ್ಯಕಾಂತ ಕಾಡವಾದ, ಸಂಗಮೇಶ ಚಿದ್ರಿ, ಅರುಣ ಹೋತಪೇಟ್, ಸೋಮನಾಥ ಕಂದಗೂಳೆ, ರಾಜಕುಮಾರ ಶಿವಪೂಜೆ, ಸೈಯದ್ ಯಸ್ರಬ್ ಅಲಿ, ಅಶೋಕ ಕರಂಜಿ, ಗೊರೆಮಿಯಾ, ಶ್ರೀನಿವಾಸ ಖರಾತ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.